ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಗೆ ಜಾತ್ರೆ, ಉತ್ಸವ ಕಾರಣವಾಗಿವೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಶ್ರೀ ಚಂದ್ರಮೌಳೇಶ್ವರ ಜಾತ್ರೆ ಪ್ರಯುಕ್ತ ಆಯೋಜಿಸಲಾಗಿದ್ದ ೮೬ನೇ ಬೃಹತ್ ದನಗಳ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಭಾರತ ಕೃಷಿ ಪ್ರಧಾನ ರಾಷ್ಟ್ರ, ಕೃಷಿಯೇ ದೇಶದ ಆರ್ಥಿಕತೆಯ ಮೂಲ, ಜಾತ್ರೆಗಳು ಗ್ರಾಮೀಣ ಸಂಸ್ಕೃತಿಯ ಜೀವಂತ ಉದಾಹರಣೆಯಾಗಿವೆ. ಪಟ್ಟಣದ ದನಗಳ ಜಾತ್ರೆಯಲ್ಲಿ ಭಾರತೀಯ ಸಂಸ್ಕೃತಿ, ರೈತ ಜೀವನ, ಜಾನಪದ ಪರಂಪರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು. ಹಳೆಯ ಕಾಲದಲ್ಲಿ ಎತ್ತುಗಳು ಕೃಷಿ ಮತ್ತು ಸಾರಿಗೆ ವ್ಯವಸ್ಥೆಯ ಕೊಂಡಿಯಾಗಿದ್ದವು. ಎತ್ತುಗಳ ಒಕ್ಕಲುತನ ಈಗ ವಿರಳವಾಗಿದೆಯಾದರೂ, ತಾಲೂಕಿನಲ್ಲಿ ನಡೆಯುವ ಜಾತ್ರೆಗಳು ಅದನ್ನು ಪುನಃ ಮರುಕಳಿಸುತ್ತಿವೆ ಎಂದು ಹೇಳಿದರು. ಆಧುನಿಕ ಕೃಷಿ ಪದ್ಧತಿಯಿಂದ ಹಳ್ಳಿಗಳಲ್ಲಿ ದನಗಳನ್ನು ಸಾಕುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹೈನುಗಾರಿಕೆ ಉದ್ದೇಶಕ್ಕೆ ಸಾಕಿರುವ ಹಸುಗಳನ್ನು ಬಿಟ್ಟರೆ ಹಳ್ಳಿಗಳಲ್ಲಿ ನಾಟಿ ರಾಸುಗಳೇ ಇಲ್ಲವಾಗಿವೆ. ಹಸುಗಳು ನಮ್ಮ ಆರ್ಥಿಕತೆಯ ಬೆನ್ನೆಲುಬು, ಅದನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳಿದ್ದು, ಉಳುಮೆ ಮಾಡಲು ಪ್ರತಿ ರೈತರ ಪ್ರತಿ ಮನೆಯಲ್ಲೂ ಒಂದು ಅಥವಾ ಎರಡು ಜೋಡಿ ಎತ್ತುಗಳು ಇರುತ್ತಿದ್ದವು. ನೇಗಿಲ ಯೋಗಿಗಳ ಅಭಾವದಿಂದ ರೈತರು ಈಗ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಂತಾಗಿದೆ. ಪ್ರಸ್ತುತ ದೇಸಿ ರಾಸುಗಳ ಹಲವು ತಳಿಗಳು ನಶಿಸುವ ಹಂತ ತಲುಪಿವೆ ಎಂದು ವಿಷಾದಿಸಿದರು.ಕೊರೋನಾ ಹಾಗೂ ಪಶು ರೋಗಗಳ ಕಾರಣಗಳಿಂದಾಗಿ ಎಂಟು ವರ್ಷಗಳಿಂದ ಸ್ಥಗಿತಗೊಳಿಸಿದ್ದ ದನಗಳ ಜಾತ್ರೆಯನ್ನು ರೈತ ಸಂಘದವರು ಹಾಗೂ ಪುರಸಭಾ ಸದಸ್ಯರ ಮನವಿಯ ಮೇರೆಗೆ ಪುನರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಪ್ರತಿ ವರ್ಷವೂ ಜಾತ್ರಾ ಮಹೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ೩೦ ಜೊತೆ ರಾಸುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ಪಡೆದ ಪತ್ರಕರ್ತರಾದ ನಂದನ್ ಪುಟ್ಟಣ್ಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಆರ್. ಯತೀಶ್‌ಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ತಾಲೂಕು ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್ ಮರಗೂರು, ಪರಿಸರ ಪ್ರೇಮಿ ಚ.ನಾ.ಅಶೋಕ್, ರಾಣಿಕೃಷ್ಣ, ಮೋಹನ್, ಬನಶಂಕರಿರಘು, ನವೀನ್ ಇನ್ನಿತರರು ಹಾಜರಿದ್ದರು.