ಸಾರಾಂಶ
ಜಗದೀಶ ವಿರಕ್ತಮಠ
ಕನ್ನಡಪ್ರಭ ವಾರ್ತೆ ಬೆಳಗಾವಿಈಚೆಗೆ ಆನ್ಲೈನ್ ಮೂಲಕ ಹಣ ದುಪ್ಪಟ್ಟು ಮಾಡಿ ಕೊಡುವ ವಂಚಕರ ಗ್ಯಾಂಗ್ ಸಕ್ರಿಯವಾಗಿದ್ದು, ಅವರ ಬಣ್ಣದ ಮಾತಿಗೆ ಮರುಳಾದರೆ ಲಕ್ಷಾಂತರ ಹಣ ಕಳೆದುಕೊಳ್ಳುವುದು ಖಚಿತ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ಗೋಕಾಕ ತಾಲೂಕಿನಲ್ಲಿ ಒಂದೇ ತಿಂಗಳಲ್ಲಿ ಮೂರು ವಂಚನೆ ಪ್ರಕರಣಗಳು ನಡೆದಿವೆ. ಅದರಲ್ಲಿ ಬರೋಬ್ಬರಿ ₹ 1.59 ಕೋಟಿ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಚಿಕ್ಕೋಡಿ ತಾಲೂಕಿನ ಏರೋನಾಟಿಕಲ್ ಎಂಜಿನಿಯರು ಒಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಯಾಗುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಎಂಜಿನಿಯರ್ ಲಿಂಕ್ ಮೇಲೆ ಕ್ಲಿಕ್ ಮಾಡಿ ವಂಚಕರ ಗ್ಯಾಂಗ್ ರಚಿಸಿದ್ದ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದಾರೆ. ಬಳಿಕ ಆನ್‌ಲೈನಲ್ಲಿ ಬೆನ್ ಕ್ಯಾಪಿಟಲ್ ಮತ್ತು ಡಿಎನ್‌ಪಿ ಕ್ಯಾಪಿಟಲ್ಸ್ ಹೆಸರಿನ ಸ್ಟಾಕ್ ಖರೀದಿಸಿದರೆ ಷೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡಿದ ಹಣ ಒಂದೇ ದಿನದಲ್ಲಿ ಶೇ.10 ರಷ್ಟು ಜಾಸ್ತಿ ಆಗುತ್ತದೆ ಎಂದು ಗ್ರೂಪನಲ್ಲಿದ್ದ ಸದಸ್ಯರು ಈತ ಹೂಡಿಕೆ ಮಾಡುವ ರೀತಿಯಲ್ಲಿ ಮೆಸೆಜ್‌ಗಳನ್ನು ಮಾಡಿ ನಂಬಿಕೆ ಮೂಡಿಸಿದ್ದಾರೆ.ವಂಚಕರು ಹೇಳಿದಂತೆ ಕೆಲವು ಹಣ ದೂರದಾರನ ಖಾತೆಗೆ ಜಮಾ ಮಾಡಿ ನಂಬಿಕೆ ಮೂಡಿಸಿದ್ದಾರೆ. ಅಲ್ಲದೇ ಜಮಾ ಮಾಡಲಾದ ಹಣ ವಿತ್‌ಡ್ರಾ ಮಾಡಿಕೊಳ್ಳವಂತೆಯೂ ತಿಳಿಸಿದ್ದಾರೆ. ಎರಡು ಬಾರಿ ಒಟ್ಟು ₹1,97,050 ಹಣವನ್ನು ವಿತ್ ಡ್ರಾ ಮಾಡಿಸಿದ್ದಾರೆ. ಬಳಿಕ ಭರವಸೆ ಹೆಚ್ಚಾದಂತೆ ಎಂಜಿನಿಯರ್ ಜ.18 ರಿಂದ ಫೆ.1 ವರೆಗೆ ಮರಳಿ ಹಣ ಪಡೆದಿದ್ದನ್ನು ಹೊರತುಪಡಿಸಿ ಬರೋಬ್ಬರಿ ₹ 73,22,950 ಹಣ ಕಳೆದುಕೊಂಡಿದ್ದಾರೆ.
ಗೋಕಾಕ ನಗರದ ಉದ್ಯಮಿಗೆ ಕೆಕೆಆರ್‌ಎಂಎಫ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಿನಲ್ಲಿ ಡಿ.28 ರಿಂದ ಜ.16ವರೆಗೆ ಒಟ್ಟು ₹ 27,50,087 ವಂಚನೆ ಮಾಡಲಾಗಿದೆ.ಮತ್ತೊಂದು ಪ್ರಕರಣದಲ್ಲಿ ಚಿಕ್ಕೋಡಿ ತಾಲೂಕಿನ ಪ್ರೊಫೆಸರ್ ಇನ್‌ಸ್ಟಾ ಗ್ರಾಂ ಖಾತೆ ಹೊಂದಿದ್ದು, ಇನ್‌ಸ್ಟಾಗ್ರಾಂ ಪೇಜ್‌ಗಳನ್ನು ಫಾಲೋ ಮಾಡಿ ಸ್ಕ್ರೀನ್‌ಶಾಟ್ ಕಳುಹಿಸಿದರೆ ಹಣ ನೀಡುವುದಾಗಿ ಟಾಸ್ಕ್ ನೀಡಿದ್ದಾರೆ. ವಂಚಕರು ತಿಳಿಸಿದ ಖಾತೆಗಳನ್ನು ಫಾಲೋ ಮಾಡಿ ಸ್ಕ್ರೀನ್ ಶಾಟ್ ಮಾಡಿ ಕಳುಹಿಸಿದ್ದಾನೆ.ಈ ವೇಳೆ ದೂರುದಾರನ ಖಾತೆಗೆ ಹಣವನ್ನು ನೀಡಿದ್ದಾರೆ. ಇದನ್ನು ನಂಬಿದ ದೂರುದಾರ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ತಿಳಿದು ಟೆಲಿಗ್ರಾಂ ಖಾತೆಗಳನ್ನು ಹೊಂದಿದವರು ಚಾಟ್ ಮಾಡಿದ್ದಾರೆ. ಬಳಿಕ ಹಣವನ್ನು ಹೂಡಿಕೆ ಮಾಡುವಂತೆ ಬಣ್ಣದ ಮಾತುಗಳನ್ನಾಡಿದ್ದಾರೆ. ಇದನ್ನು ನಂಬಿದ ದೂರುದಾರ ಹಣವನ್ನು ಹೂಡಿಕೆ ಮಾಡಿದ್ದಾನೆ. ಒಂದೆರಡು ಬಾರಿ ಹಣವನ್ನು ಮರಳಿ ನೀಡಿ ನಂಬಿಕೆ ಬರುವಂತೆ ಮಾಡಿದ್ದಾರೆ. ಜ.4 ರಿಂದ ಜ.12ವರೆಗೆ ಒಟ್ಟು ₹58,34,720 ಹಣವನ್ನು ಆನ್‌ಲೈನ್ ಮೂಲಕ ಪಡೆದು ಮೋಸ ಮಾಡಿದ್ದಾರೆ. ಈ ಮೂರು ವಂಚನೆ ಪ್ರಕರಣಗಳಲ್ಲಿ ಏರೋನಾಟಿಕಲ್ ಇಂಜಿನಿಯರ್, ಬ್ಯುಸಿನೆಸ್ ಮ್ಯಾನ್ ಹಾಗೂ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ಞಾವಂತ ಹಾಗೂ ಸುಶಿಕ್ಷಿತರೆ ವಂಚನೆಗೊಳಗಾಗಿರುವುದು ವಿಪರ್ಯಾಸ.
----------ಕೋಟ್.....ಜನರು ಹಣದ ದುಪ್ಪಟ್ಟು ಆಸೆಗೆ ಬಿದ್ದು ಆನ್‌ಲೈನ್‌ನಲ್ಲಿ ಲಕ್ಷಾಂತರ ಹಣ ಕಳೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರದಿಂದ ಇರಬೇಕು. ಆನ್ಲೈನ್ ಟ್ರೇಡಿಂಗ್ ಹಾಗೂ ಆನಲೈನ್ ಮೂಲಕ ಹಣ ಹೂಡಿಕೆ ಮಾಡಬೇಡಿ. ಹೆಚ್ಚಿನ ಬಡ್ಡಿದರದ ಆಸೆಗೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲಿಯೋ ಕುಳಿತು ವಂಚಕ ಗ್ಯಾಂಗ್ ಕಾರ್ಯನಿರ್ವಹಿಸಿರುತ್ತದೆ. ಒಂದು ವೇಳೆ ವಂಚನೆಯಾದಲ್ಲಿ ತಕ್ಷಣ 1930 ಗೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲಿ ಖಾತೆಯನ್ನು ಮುಟ್ಟುಗೋಲು ಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಇಂತಹ ಪ್ರಕರಣಗಳು ನಡೆದ ತಕ್ಷಣವೇ ಪೊಲೀಸರಿಗೂ ಮಾಹಿತಿ ನೀಡಬೇಕು.
ಡಾ.ಭೀಮಾಶಂಕರ ಗುಳೇದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಳಗಾವಿ