ಹೆಣ್ಣುಮಕ್ಕಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವೆಂಬ ಕಾಲ ಕಳೆದು ಹೋಗಿದ್ದು, ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆ ತನ್ನ ಸಾಧನಯೆ ಹೆಜ್ಜೆಗಳನ್ನು ಮೂಡಿಸುತ್ತಿರುವುದು ಪ್ರೇರಣಾದಾಯಕ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಹೆಣ್ಣುಮಕ್ಕಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವೆಂಬ ಕಾಲ ಕಳೆದು ಹೋಗಿದ್ದು, ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆ ತನ್ನ ಸಾಧನಯೆ ಹೆಜ್ಜೆಗಳನ್ನು ಮೂಡಿಸುತ್ತಿರುವುದು ಪ್ರೇರಣಾದಾಯಕ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.ಇಲ್ಲಿನ ವಿದ್ಯಾನಗರದ ವಿನಾಯಕ ಬಡಾವಣೆ ಶ್ರೀ ವಿನಾಯಕ ದೇವಸ್ಥಾನ ಪಕ್ಕದ ವಿನೂತನ ಮಹಿಳಾ ಸಮಾಜದ ಆವರಣದಲ್ಲಿ ಸಮಾಜದ 20ನೇ ವಾರ್ಷಿಕೋತ್ಸವ ಸಮಾರಂಭನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆ ಕೇವಲ ಮನೆಗಷ್ಟೇ ಸೀಮಿತವಲ್ಲ. ಮನೆಯನ್ನು ಹೇಗೆ ಚೊಕ್ಕಟವಾಗಿ, ವ್ಯವಸ್ಥಿತವಾಗಿ ನಡೆಸಬಲ್ಲಳೋ ಅದೇ ರೀತಿ ತನ್ನ ಪ್ರತಿಭೆ ಮೂಲಕ ಸಾಧನೆಯನ್ನೂ ಮಾಡಬಲ್ಲಳು ಎಂಬುದಕ್ಕೆ ಲಕ್ಷಾಂತರ ನಿದರ್ಶನ ನಮ್ಮ ಮುಂದಿವೆ ಎಂದರು.
ವಿಶ್ವಕ್ಕೆ ಮಹಿಳೆಯರ ಕೊಡುಗೆ ಅಮೂಲ್ಯವಾದುದು. ಹೆಣ್ಣಿಗೆ ಇದೇ ಕಾರಣಕ್ಕೂ ಇಡೀ ಜಗತ್ತಿನಲ್ಲೇ ಅಗ್ರಸ್ಥಾನ ನೀಡಲಾಗಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಆಡಳಿತ, ಆಧ್ಯಾತ್ಮ, ಧಾರ್ಮಿಕ ಹೀಗೆ ಪ್ರತಿಯೊಂದು ಕ್ಷೇತ್ರಕ್ಕೂ ಮಹಿಳೆಯ ಕೊಡುಗೆ ಅವಿಸ್ಮರಣೀಯವಾದುದು. ಪ್ರತಿ ಕ್ಷೇತ್ರದಲ್ಲೂ ಪುರುಷನಿಗೆ ಸರಿಸಾಟಿಯಾಗಿ, ಅದಕ್ಕೂ ಮೀರಿದ ಸಾಧನೆಯನ್ನು ಹೆಣ್ಣು ಮಕ್ಕಳು ಮಾಡುತ್ತಿರುವುದು ಗಮನಾರ್ಹ ಎಂದು ಶ್ಲಾಘಿಸಿದರು.ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜನೀಯ ಸ್ಥಾನ ನೀಡಿ, ಗೌರವಿಸಲಾಗುತ್ತಿದೆ. ಸಮಾಜವನ್ನು ಕಟ್ಟುವಲ್ಲಿ, ರಾಷ್ಟ್ರಕ್ಕೆ ಸ್ಪೂರ್ತಿ ನೀಡುವಲ್ಲಿ ಮಹಿಳೆಯರ ಪಾತ್ರವು ಅತ್ಯಂತ ಮಹತ್ವದ್ದು. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಕುಟುಂಬ, ಸಂಸ್ಕೃತಿ, ಶಿಕ್ಷಣ, ಸಾಹಿತ್ಯ, ಸಾಮಾಜಿಕ ಹೀಗೆ ಪ್ರತಿ ಕ್ಷೇತ್ರದಲ್ಲೂ ಮಹಿಳೆಯ ಕೊಡುಗೆ ಇದೆ. ಮಹಿಳಾ ಸಮಾನತೆಗೆ ಆರ್ಥಿಕ ಸಬಲತೆಯೂ ಕಾರಣವಾಗಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ದೇಶದ ಆಸ್ತಿಯಾಗಿ ರೂಪಿಸಬೇಕು ಎಂದರು. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ವಿಶಾಲಾಕ್ಷಿ, ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸಬಾರದು, ಮನೆಯಿಂದ ಹೊರಗೆ ಕಳಿಸಬಾರದೆಂಬ ಕಾಲ ಈಗ ಇಲ್ಲ. ಗಂಡು ಮಕ್ಕಳಿಗೆ ಸರಿಸಮಾನವಾಗಿ, ಅದಕ್ಕಿಂತಲೂ ತುಸು ಹೆಚ್ಚು ಎಂಬಂತಹ ಸಾಧನೆಯನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದಾರೆ. ಇಂದು ಕುಟುಂಬಕ್ಕೆ ಪುರುಷರಿಗೆ ಸರಿಸಮಾನವಾಗಿ ಮಹಿಳೆ ಸಾಧನೆ ಮಾಡುತ್ತಿದ್ದಾರೆ. ಮನೆ ಕೆಲಸದ ಜೊತೆಗೆ ಉದ್ಯೋಗ, ಸ್ವಯಂ ಉದ್ಯೋಗದ ಮೂಲಕ ಮಕ್ಕಳ ಭವಿಷ್ಯ ಕಟ್ಟಿಕೊಡಲು ಶ್ರಮಿಸುತ್ತಿರುವುದು ನಮ್ಮ ಕಣ್ಣುಗಳ ಮುಂದಿವೆ ಎಂದರು.
ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮಾ ಸೋಮಶೇಖರ, ಸಮಾಜದ ಪದಾಧಿಕಾರಿಗಳಾದ ವೀಣಾ ಮಹಾಂತೇಶ, ಪ್ರಸನ್ನ ಚಂದ್ರಪ್ರಭು, ಮಮತಾ ಕೊಟ್ರೇಶ, ಶ್ರೀದೇವಿ ಕುಂಚೂರು, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ, ಲತಾ ರುದ್ರಸ್ವಾಮಿ, ಗೀತಾ ಗುರುಶಾಂತಪ್ಪ, ಭಾಗ್ಯ ಪಿಸಾಳೆ, ಮಂಜುಳಾ ಶಿವಕುಮಾರ, ಪ್ರಭಾ ಹಾಲಪ್ಪ ಹಾಗೂ ಸದಸ್ಯರು, ಕುಟುಂಬ ವರ್ಗದವರು ಇದ್ದರು.ನಂತರ ಸಮಾಜದ ಪದಾಧಿಕಾರಿ, ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.