‘ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕಕ್ಕೆ 15 ಗುಂಟೆ ಜಾಗ ಕೊಡಿ’

| N/A | Published : Sep 11 2025, 12:03 AM IST / Updated: Sep 11 2025, 08:52 AM IST

Vishnuvardhan
‘ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕಕ್ಕೆ 15 ಗುಂಟೆ ಜಾಗ ಕೊಡಿ’
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು  ಸಚಿವ ಈಶ್ವರ್‌ ಖಂಡ್ರೆ ಅವರನ್ನು ಭೇಟಿ ಮಾಡಿ  ಅಭಿಮಾನ್‌ ಸ್ಟುಡಿಯೋದಲ್ಲಿ  ಡಾ। ವಿಷ್ಣುವರ್ಧನ್‌ ಅವರ ಸಮಾಧಿ ಸುತ್ತಲ 15 ಗುಂಟೆ ಜಾಗವನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿಡುವಂತೆ ಮನವಿ ಮಾಡಿದರು.

 ಬೆಂಗಳೂರು :  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬುಧವಾರ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಅವರನ್ನು ಭೇಟಿ ಮಾಡಿ ನಗರದ ಉತ್ತರಹಳ್ಳಿ ರಸ್ತೆಯ ಅಭಿಮಾನ್‌ ಸ್ಟುಡಿಯೋದಲ್ಲಿ ಸಾಹಸಸಿಂಹ ಡಾ। ವಿಷ್ಣುವರ್ಧನ್‌ ಅವರ ಸಮಾಧಿ ಸುತ್ತಲ 15 ಗುಂಟೆ ಜಾಗವನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿಡುವಂತೆ ಮನವಿ ಮಾಡಿದರು.

ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ನರಸಿಂಹಲು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಕೆ.ಮಂಜು ಮತ್ತಿತರರು ವಿಧಾನಸೌಧದಲ್ಲಿ ಬುಧವಾರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸೆ.18ರಂದು ವಿಷ್ಣುವರ್ಷನ್‌ ಅವರ ಹುಟ್ಟುಹಬ್ಬವಿದೆ. ಅಷ್ಟರೊಳಗೆ 15 ಗುಂಟೆ ಭೂಮಿಯನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮೀಸಲಿಡಲು ಸರ್ಕಾರ ಕ್ರಮ ವಹಿಸಿದರೆ ಇಡೀ ಚಿತ್ರರಂಗ ಹಾಗೂ ವಿಷ್ಣು ಅಭಿಮಾನಿಗಳು ಸಂತಸಗೊಳ್ಳಲಿದ್ದಾರೆ. ಅಭಿಮಾನ್‌ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಸ್ಥಳದಲ್ಲೇ ಸ್ಮಾರಕ ನಿರ್ಮಾಣವಾಗಬೇಕು ಎನ್ನುವುದು ಅಭಿಮಾನಿಗಳ ಹೆಬ್ಬಯಕೆ. ಅಭಿಮಾನಿಗಳು ಅಲ್ಲಿಗೆ ಭೇಟಿ ನೀಡಿ ಸಮಾಧಿಗೆ ನಮಸ್ಕಾರ ಮಾಡಿಕೊಂಡು ಹೋಗಲು ಅವಕಾಶವಾಗುತ್ತದೆ ಎಂದು ಚಿತ್ರರಂಗದ ಗಣ್ಯರು ಸಚಿವರಲ್ಲಿ ಕೋರಿದರು.

ಇತ್ತೀಚೆಗಷ್ಟೆ ವಿಷ್ಣುವರ್ಧನ್‌ ಅವರ ಪತ್ನಿ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ ಅನಿರುದ್ಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕಕ್ಕೆ 10 ಗುಂಟೆ ಜಾಗ ನೀಡಲು ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಅವರು ಸಕಾರಾತ್ಮಕವಾಗಿ ಸ್ಮಂದಿಸಿದ್ದರು.

Read more Articles on