ಸಾರಾಂಶ
ದಶಕಗಳ ಕಾಲ ನೆನೆಗುದಿಗೆ ಬಿದ್ದಿರುವ ರಾಜಗೋಪುರ ನಿರ್ಮಾಣಕ್ಕೆ ಸಿದ್ಧತೆ, ಆಗಮ ಪಂಡಿತರಿಂದ ಶಾಸ್ತ್ರಕ್ತವಾಗಿ ಎಲ್ಲ ಕಾರ್‍ಯಗಳನ್ನು ಮಾಡಿಸಲು ನಿರ್ಧಾರ ಮಾಡಲಾಗಿದೆ. ರಾಜಗೋಪುರ ಕೆಲಸ ಒಂದು ವರ್ಷದ ಒಳಗೆ ನಿರ್ಮಾಣ ಮಾಡಿ ಸರ್ಮಪಣೆ ಮಾಡಲಾಗುವುದು
ಕನ್ನಡಪ್ರಭ ವಾರ್ತೆ ಕೆಜಿಎಫ್
ಭಕ್ತಿ ಶ್ರದ್ಧೆಯಿಂದ ಮಾಡುವ ದೇವರ ಕೆಲಸಕ್ಕೆ ಯಾರೂ ಅಡ್ಡಿ ಪಡಿಸಬಾರದು, ಈ ಹಿಂದೆ ದೇವಾಲಯದ ರಾಜಗೋಪುರಕ್ಕೆ ಮುಂದಾದಾಗ ಸರಕಾರಕ್ಕೆ ಅರ್ಜಿಗಳನ್ನು ಬರೆದು ಅಡ್ಡಿಪಡಿಸಿದ್ದ ಉದಾಹರಣೆಯ ಹಿನ್ನೆಲೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಪಕ್ಷ ಭೇದ ಮರೆತು ಎಲ್ಲ ಸಮಾನ ಮನಸ್ಕರ ಸಭೆ ದೇವಾಲಯದಲ್ಲಿ ಕರೆಯಲಾಗಿದೆ, ರಾಜಗೋಪುರದ ನಿರ್ಮಾಣಕ್ಕೆ ಯಾರೂ ಅಡ್ಡಿಪಡಿಸಬಾರದೆಂದು ಶಾಸಕಿ ರೂಪಕಲಾ ಶಶಿಧರ್ ಭಕ್ತರಲ್ಲಿ ಕಳಕಳಿ ಮನವಿ ಮಾಡಿದರು.₹ 4 ಕೋಟಿ ಅನುದಾನ
ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ, ಹಿರಿಯ ನಾಗರಿಕರು, ದೇವಾಲಯದ ಭಕ್ತರು ಹಾಗೂ ಎಲ್ಲ ಸಮಾನ ಮನಸ್ಕರರ ಸಭೆಯಲ್ಲಿ ಮಾತನಾಡಿ, ಸರ್ಕಾರದ ಮುಜರಾಯಿ ಇಲಾಖೆಯಿಂದ ವಿಶೇಷವಾಗಿ ೪ ಕೋಟಿ ರು.ಗಳ ಅನುದಾನ ರಾಜಗೋಪುರದ ನಿರ್ಮಾಣಕ್ಕೆ ಬಿಡುಗಡೆಗೊಳಿಸಿ ರಾಜಗೋಪುರದ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯ ನುರಿತ ಅಧಿಕಾರಿಗಳಿಂದ ರಾಜಗೋಪುರದ ನಿರ್ಮಾಣಕ್ಕೆ ಅಗತ್ಯವಿರುವ ನಕ್ಷೆ ಮತ್ತು ವಿನ್ಯಾಸ ನೀಡಲಿದ್ದಾರೆ, ಸರ್ಕಾರದ ಅಧೀನದಲ್ಲಿರುವ ಯಾವುದಾದರೂ ಒಂದು ಸಂಸ್ಥೆಗೆ ನಿರ್ಮಾಣದ ಗುತ್ತಿಗೆ ನೀಡಲಿದ್ದಾರೆಂದು ತಿಳಿಸಿದರು.ಭಗವಂತ ಎಲ್ಲರಿಗೂ ಒಳ್ಳೆಯದದನ್ನೇ ಮಾಡುತ್ತಾನೆ, ದಶಕಗಳ ಕಾಲ ನೆನೆಗುದಿಗೆ ಬಿದ್ದಿರುವ ರಾಜಗೋಪುರ ನಿರ್ಮಾಣಕ್ಕೆ ಯಾರೂ ಅಡ್ಡಿಪಡಿಸಬಾರದು, ಆಗಮ ಪಂಡಿತರಿಂದ ಶಾಸ್ತ್ರಕ್ತವಾಗಿ ಎಲ್ಲ ಕಾರ್‍ಯಗಳನ್ನು ಮಾಡಲಾಗುವುದು, ಯಾವುದೇ ವಿಘ್ನಗಳು ಇಲ್ಲದೆ ರಾಜಗೋಪುರ ಕೆಲಸ ಒಂದು ವರ್ಷದ ಒಳಗೆ ನಿರ್ಮಾಣ ಮಾಡಿ ಭಕ್ತರಿಗೆ ಸರ್ಮಪಣೆ ಮಾಡಲಾಗುವುದು ಎಂದು ತಿಳಿಸಿದರು.ಭಕ್ತರ ಬೇಡಿಕೆಗೆ ಮನ್ನಣೆ
ಕಳೆದ ೪೦ ವರ್ಷದಿಂದ ರಾಜಗೋಪುರ ನಿರ್ಮಾಣಕ್ಕೆ ಭಕ್ತರು ಪ್ರಯತ್ನಪಟ್ಟರೂ ರಾಜಗೋಪುರದ ಕನಸು ನನಸಾಗಿರಲಿಲ್ಲ, ಕೆಜಿಎಫ್ ನಗರದಲ್ಲಿ ಪ್ರಸಿದ್ಧ ದೇವಾಲಯ ಎನಿಸಿಕೊಂಡಿದ್ದ ವೆಂಕಟರಮಣಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣ ಮಾಡಿದರೆ ಕೆಜಿಎಫ್ ನಗರವು ಅಭಿವೃದ್ಧಯಾಗಲಿದೆ ಎಂದು ಭಕ್ತರ ನಂಬಿಕೆಯಾಗಿದೆ. ಅಲ್ಲದೆ ದೇವಾಲಯದ ವಾಸ್ತು ಪ್ರಕಾರ ರಾಜಗೋಪುರ ನಿರ್ಮಾಣ ಮಾಡಬೇಕೆಂದು ದೇವಾಲಯದ ಲಕ್ಷಾಂತರ ಭಕ್ತರ ಬೇಡಿಕೆಯಾಗಿತ್ತು ಎಂದು ಪ್ರಸಾದ್ ರೆಡ್ಡಿ ತಿಳಿಸಿದರು.ರಾಜಗೋಪುರ ನಿರ್ಮಾಣ
ಶಾಸಕರ ಜೊತೆಗೆ ನಾವು ಎಲ್ಲರು ತನು,ಮನ, ಧನ ಸಮರ್ಪಿಸಿ ದೇವಾಲಯದ ರಾಜಗೋಪುರದ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ತಾಲೂಕಿನ ಕೆಜಿಎಫ್-ಬಂಗಾರಪೇಟೆ ಹಾಲು ಒಕ್ಕೂಟದ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಮುಖಂಡರಾದ ಮುನಿರತ್ನಂನಾಯ್ಡು, ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ, ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಕಮ್ಮಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್, ಕಾರ್ತಿಕ್, ಆನಂದ್‌ಮೂರ್ತಿ, ಮಾಜಿ ಜಿಲ್ಲಾ ಪಂ ಸದಸ್ಯರಾದ ಅ.ಮು. ಲಕ್ಷ್ಮೀನಾರಾಯಣ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ಮುಖಂಡರು ಇದ್ದರು.