ಡಿಸೆಂಬರ್ ಚಳಿಯಲ್ಲೂ ವಸೂಲಾತಿ ಆಂದೋಲನ ಹೆಸರಿಗೆ, ಸಂಜೆ ಮೇಲಾಧಿಕಾರಿಗಳಿಂದ ಗಂಟೆಗಟ್ಟಲೇ ಬರುವ ವೀಡಿಯೋ ಕಾನ್ಫರೆನ್ಸ್‌ಗೆಂದು ಬರುವ ಕರೆಯ ಸದ್ದಿಗೆ ಜಿಲ್ಲೆಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಬೆವರುವಂತಾಗಿದೆ!

ನಾಗರಾಜ ಎಸ್.ಬಡದಾಳ್

ಕನ್ನಡಪ್ರಭ ವಾರ್ತೆ ದಾವಣಗೆರೆ

ಡಿಸೆಂಬರ್ ಚಳಿಯಲ್ಲೂ ವಸೂಲಾತಿ ಆಂದೋಲನ ಹೆಸರಿಗೆ, ಸಂಜೆ ಮೇಲಾಧಿಕಾರಿಗಳಿಂದ ಗಂಟೆಗಟ್ಟಲೇ ಬರುವ ವೀಡಿಯೋ ಕಾನ್ಫರೆನ್ಸ್‌ಗೆಂದು ಬರುವ ಕರೆಯ ಸದ್ದಿಗೆ ಜಿಲ್ಲೆಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಬೆವರುವಂತಾಗಿದೆ!

ರಾಜ್ಯಾದ್ಯಂತ ಕೈಗೊಂಡ ವಸೂಲಾತಿ ಆಂದೋಲನದಿಂದಾಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ದಿಕ್ಕೇ ತೋಚದಂತಾಗಿದ್ದಾರೆ. ನಿತ್ಯವೂ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆಯುತ್ತಿರುವ ಕಂದಾಯ ವಸೂಲಾತಿ ಆಂದೋಲನ, ಸಂಜೆ 6ರಿಂದ ಅದನ್ನು ಅಧಿಕಾರಿಗಳು ಮುಗಿಸುವವರೆಗೂ ಮುಗಿಯದ ವೀಡಿಯೋ ಕಾನ್ಫರೆನ್ಸ್‌ನಿಂದಾಗಿ ರಾಜ್ಯಾದ್ಯಂತ ಪಿಡಿಒಗಳು ರೋಸಿ ಹೋಗಿದ್ದಾರೆ.

ಆಯಾ ಜಿಲ್ಲಾ, ತಾಲೂಕು ಕೇಂದ್ರಕ್ಕೆ ಹೊಂದಿಕೊಂಡಿರುವ ಗ್ರಾಪಂಗಳಿಂದ ಆ ಜಿಲ್ಲೆಯ ಗಡಿ ಭಾಗದ ಗ್ರಾಪಂಗಳವರೆಗೆ, ನಡೆದು ಹೋಗಬಹುದಾದಷ್ಟು ಹತ್ತಿರದ ಗ್ರಾಪಂನಿಂದ ಗಂಟೆಗಟ್ಟಲೇ ಬಸ್ಸು ನಿಲ್ದಾಣದಲ್ಲಿ ನಿಂತರೂ ಬಸ್ಸು ಬಾರದ, ಆಟೋ ಸೇರಿದಂತೆ ಯಾವುದೇ ವಾಹನ ಸೌಕರ್ಯವಿಲ್ಲದ ಗ್ರಾಪಂ, ಬಸ್ಸು ಬಂದರೂ ಅರ್ಧ ದಾರಿಗೆ ಬಿಟ್ಟು, ಉಳಿದರ್ಧ ನಿರ್ಜನವಾದ ಹಾದಿಯಲ್ಲಿ ಸಾಗಬೇಕಾದ ಗ್ರಾಪಂಗಳ ಪುರುಷ-ಮಹಿಳಾ ಅಧಿಕಾರಿಗಳ ಪರದಾಟ ಹೇಳತೀರದಂತಾಗಿದೆ.

ಇಡೀ ಜಿಪಂ ಅಧಿಕಾರಿಗಳು, ತಾಪಂ ಅಧಿಕಾರಿಗಳು ಗ್ರಾಮಗಳ ಮನೆ ಬಾಗಿಲಿಗೆ ಹೋಗಿ ನಿಂತರೂ ಕಂದಾಯ ಕಟ್ಟುವುದು ಕಷ್ಟವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ರೈತರು, ಗ್ರಾಮೀಣ ವಾಸಿಗಳು ಇದ್ದಾರೆ. ಸ್ವತಃ ನಾಡ ದೊರೆಯೇ ಬಂದು ನಿಂತರೂ ರೈತರು ಹೇಳಿಕೊಳ್ಳುವ ಸಮಸ್ಯೆಗೆ ಉತ್ತರಿಸಲಾಗದ ಸ್ಥಿತಿ ಇದೆ. ಅಂತಹದ್ದರಲ್ಲಿ ನಿತ್ಯವೂ ತಮ್ಮ ಮನೆ ಬಾಗಿಲಿಗೆ ಸಾಲ ಕೊಟ್ಟವರಂತೆ ಬಂದು ನಿಲ್ಲುತ್ತಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಕರ ವಸೂಲಿಗಾರರು, ನೀರುಗಂಟಿಗಳು ಇತರೆ ಸಿಬ್ಬಂದಿ ಜೊತೆಗೆ ಗ್ರಾಮೀಣರು ಜಗಳವಾಡುತ್ತಿರುವ ಪ್ರಕರಣಗಳೇ ಕಂಡು ಬರುತ್ತಿವೆ.

ಇತ್ತ ದರಿ, ಅತ್ತ ಪುಲಿ ಎಂಬಂತೆ ಅನೇಕ ಗ್ರಾಪಂ ಅಧಿಕಾರಿ, ಸಿಬ್ಬಂದಿ ತಲೆ ಸುತ್ತುವಿಕೆ, ರಕ್ತದೊತ್ತಡ, ಶುಗರ್ ಏರುಪೇರಾಗುವುದು, ಸರಿಯಾಗಿ ತಿಂಡಿ, ಊಟವೂ ಆಗದೇ ಪರದಾಡುವ ಸ್ಥಿತಿಯಲ್ಲಿದ್ದಾರೆ. ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರದ ಸಮೀಪದ ಗ್ರಾಪಂಗಳ ಸಿಬ್ಬಂದಿಯೇನೋ ಊರ ಸಮೀಪ ಬಂದು, ಸಂಜೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗುತ್ತಾರೆ.

ಸಂಜೆಯಾದರೂ ಬಂದಿಲ್ಲವೆಂದು ಮನೆಯಲ್ಲಿ ಹೆಂಡತಿ, ಮಕ್ಕಳು, ಕುಟುಂಬ ಸದಸ್ಯರು ಕರೆ ಮಾಡಿದರೆ, ವಿಸಿಯಲ್ಲಿರುವ ಪಿಡಿಒ ಕರೆ ಕಟ್ ಮಾಡಿದ್ದರಿಂದ ಕುಟುಂಬದವರೂ ತೀವ್ರ ಆತಂಕಪಡುತ್ತಿರುವ ಘಟನೆ ಹೆಚ್ಚಾಗುತ್ತಿವೆ.

ಕಂದಾಯ ವಸೂಲಾತಿ ಆಂದೋಲನದ ಪರಿಣಾಮ:

ಅತ್ತೆ, ಮಾವ ಇದ್ದ ಮನೆಯ ಮಹಿಳಾ ಪಿಡಿಒಗಳು ಬೆಳ್ಳಂ ಬೆಳಿಗ್ಗೆಯೇ ಮನೆ ಕೆಲಸ, ಕಾರ್ಯ ಮುಗಿಸಲೆಂದು ಬೇಗನೆ ನಸುಕಿನಲ್ಲೇ ಎದ್ದು ಕೆಲಸಕ್ಕೆ ಹೊರಡಬೇಕಾಗಿದೆ. ಗಂಡ, ಮಕ್ಕಳ ದೈನಂದಿನ ಕೆಲಸ ಮಾಡಲಾಗದ ಸ್ಥಿತಿಯಲ್ಲಿ ಎಲ್ಲಾ ಕೆಲಸ, ಕಾರ್ಯ ಅರೆಬರೆ ಮಾಡಿ, ಮಕ್ಕಳನ್ನು ಲಗುಬಗೆಯಲ್ಲಿ ಶಾಲೆಗೆ ಸಿದ್ಧಪಡಿಸುವ ಸ್ಥಿತಿ ಇದೆ. ಜೀವನಕ್ಕಾಗಿ ಕೆಲಸವೋ, ಕೆಲಸಕ್ಕಾಗಿ ಜೀವನವೋ ಎಂಬ ಚಿಂತೆಯು ಸಹಜವಾಗಿಯೇ ರಾಜ್ಯಾದ್ಯಂತ ಸಾಮಾನ್ಯವಾಗಿ ಪಿಡಿಓಗಳು, ಅಧಿಕಾರಿ, ನೌಕರರಿಗೆ ಕಾಡುತ್ತಿದೆ.