ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಇಂದಿನ ವ್ಯವಸ್ಥೆಯಲ್ಲಿ ಸಮಾಜ ಬದಲಾವಣೆ ಕಾಣಬೇಕಾದರೆ ಮುಖ್ಯವಾಗಿ ಶಿಕ್ಷಕರು ಬದಲಾಗಬೇಕು. ಸಮಾಜ ಸಂಕುಚಿತ ಮನಸ್ಥಿತಿಯಲ್ಲಿ ಮುಂದುವರೆದರೆ ಪ್ರಜ್ಞಾವಂತ ಪ್ರಜೆಗಳ ನಿರ್ಮಾಣ ಅಸಾಧ್ಯವಾಗಲಿದೆ. ಆದ್ದರಿಂದ ಶಾಲೆಗಳಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಶಿಕ್ಷಣ ಇಲಾಖೆ ಆಡಳಿತ ವಿಭಾಗದ ಉಪನಿರ್ದೇಶಕ ಎಚ್.ಕೆ.ಪಾಂಡು ಸಲಹೆ ನೀಡಿದರು.ಪಟ್ಟಣದ ಗ್ರೀನ್ ವುಡ್ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನವರಿ- ಫೆಬ್ರವರಿ ಮಾಹೆಯಲ್ಲಿ ಪ್ರತಿ ಶಾಲೆಯಲ್ಲೂ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಲ್ಲಿ ಪ್ರತಿ ವಿದ್ಯಾರ್ಥಿಗೂ ಅವಕಾಶ ದೊರೆಯಬೇಕು, ಖಾಸಗಿ ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವಕಾಶ ದೊರೆಯುತ್ತದೆ. ಈಗಿನ ವ್ಯವಸ್ಥೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ಕಳುಹಿಸುವ ವ್ಯವಸ್ಥೆ ಇದೆ. ಆದರೆ ಪ್ರತಿಯೊಂದು ಶಾಲೆಗಳಲ್ಲೂ ಪ್ರತಿಭೆ ಗುರುತಿಸುವ ಕಾರ್ಯ ನಡೆದಾಗ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಗಮನಿಸುವ ಕಾರ್ಯವಾಗಬೇಕು. ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೊರೆತ ಅವಕಾಶದಲ್ಲಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಬೇಕು ಎಂದು ಸಲಹೆ ನೀಡಿದರು.
ಇತ್ತೀಚಿಗೆ ೫ ಸಾವಿರ ಮಕ್ಕಳ ಸರ್ವೇ ನಡೆಸಲಾಯಿತು. ಅದರಲ್ಲಿ ೩೯೩೨ ಮಕ್ಕಳು ಕನ್ನಡ ಬಳಸುತ್ತಾರೆ, ಅದರಲ್ಲಿ ಅನುದಾನರಹಿತ ಮಕ್ಕಳು ಪ್ರಥಮ, ಸರ್ಕಾರಿ ಶಾಲೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಕಣ್ಣಿನ ಸಮಸ್ಯೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ನಾವು ಎಚ್ಚೆತ್ತುಕೊಳ್ಳಬೇಕು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರು ಕಲಿಕೆಯ ಜತೆಗೆ ಹೆಚ್ಚು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗಿಯಾಗಲು ತೋರುವ ಕಾಳಜಿಯಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.ಬಿಇಒ ಸೋಮಲಿಂಗೇಗೌಡ, ಗ್ರೀನ್ ವುಡ್ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳ ಮಾತನಾಡಿದರು.
ಗ್ರೀನ್ ವುಡ್ ಶಾಲೆಯ ಅಧ್ಯಕ್ಷ ಇರ್ಷದ್ ಬೇಗ್, ಕಾರ್ಯದರ್ಶಿ ನೂರ್ ಫಾತೀಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈರಯ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಖಜಾಂಚಿ ನಾಗರಾಜು, ಪ್ರಭಾರ ಬಿಆರ್‌ಸಿ ಕಾಳೇಗೌಡ, ಶಿಕ್ಷಕರ ವಿವಿಧ ಸಂಘಗಳ ಅಧ್ಯಕ್ಷ ಹಾಗೂ ಸದಸ್ಯರಾದ ಮಂಜುನಾಥ್, ಮಹೇಶಪ್ಪ, ಜಗದೀಶ್, ಹರೀಶ್ ಪಿ.ಎಲ್., ರಂಗಸ್ವಾಮಿ, ಮಂಜುನಾಥ್, ಮಹೇಶ್, ಕಾಂತರಾಜು ಇತರರು ಇದ್ದರು.ಹಂಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಭಾರ್ಗವ ವಸಿಷ್ಠ ಅವರ ಅನಂತ ಪದ್ಮನಾಭನ ಅಲಂಕಾರದ ಸ್ಥಬ್ದ ಚಿತ್ರ ಕಣ್ಮನ ಸೆಳೆಯಿತು.
--------------------------------------------