ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಹಾಸನ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮತ್ತು ಅರಕಲಗೂಡು ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ಸಮ್ಮುಖದಲ್ಲಿ ತಾಲೂಕಿನ ಕಾಂಗ್ರೆಸ್ ಮುಖಂಡರ ಪ್ರತ್ಯೇಕ ಗುಂಪು ಪ್ರತ್ಯೇಕವಾಗಿ ಸಭೆ ನಡೆಸಿರುವುದು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತುಗೊಂಡಿತು.ಮಂಗಳವಾರ ಮಧ್ಯಾಹ್ನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಚ್.ಪಿ.ಶ್ರೀಧರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಮತ್ತು ಹಳ್ಳಿಮೈಸೂರು ಬ್ಲಾಕ್ ಅಧ್ಯಕ್ಷ ರಾಜೇಗೌಡ ಇತರೆ ಮುಖಂಡರ ನೇತೃತ್ವದಲ್ಲಿ ವಿಧಾನಸಭಾ ವ್ಯಾಪ್ತಿಯ ಬೂತ್ ಮುಖಂಡರು, ಕಾರ್ಯಕರ್ತರಗಳ ಸಭೆಯನ್ನು ಆಯೋಜನೆ ಮಾಡಿ ಉಸ್ತುವಾರಿಗಳ ಆಗಮನಕ್ಕೆ ಕಾಯುತ್ತಿರುವುದು ಕಂಡುಬಂದಿತು. ಆದರೆ ಜಿಲ್ಲಾ ಉಸ್ತುವಾರಿ ಎನ್.ಸಂಪಂಗಿ ಮತ್ತು ವಿಧಾನಸಭಾ ಉಸ್ತುವಾರಿ ಸಾಹಿದ್ ತೆಕ್ಕಲ್ ಅವರು ಒಂದು ಗಂಟೆ ಮುಂಚಿತವಾಗಿ ಪಟ್ಟಣದ ಪ್ರವಾಸಿಮಂದಿರಕ್ಕೆ ಆಗಮಿಸಿ ಮತ್ತೋರ್ವ ಬಂಡಾಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ಮತ್ತು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಪ್ರದೀಪ್‌ಕುಮಾರ್, ಸದಸ್ಯ ಅನಿಕೇತನ್, ಮಾಜಿ ಜಿಪಂ ಸದಸ್ಯೆ ರತ್ನಮ್ಮ ಅವರ ಪತಿ ಕಳ್ಳಿಮುದ್ದನಹಳ್ಳಿ ಲೋಕೇಶ್, ಮಾಜಿ ತಾಪಂ ಅಧ್ಯಕ್ಷ ದೇವರಾಜೇಗೌಡ ಇತರರು ಭಾಗವಹಿಸಿದ್ದರು.
ಉಸ್ತುವಾರಿಗಳ ಮೇಲೆ ಹರಿಹಾಯ್ದ ಕಾರ್ಯಕರ್ತರು:ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಸಭೆಯನ್ನು ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ದೂರದ ಊರುಗಳಿಂದ ನೂರಾರು ಮಂದಿ ಮುಖಂಡರು, ಕಾರ್ಯಕರ್ತರು ಕಾಯುತ್ತ ಕುಳಿತಿದ್ದಾರೆ. ಆದರೆ ಉಸ್ತುವಾರಿಗಳು ಪಕ್ಷದ ಕಚೇರಿಗೆ ಮೊದಲ ಆಗಮಿಸಿ ಸಭೆ ನಡೆಸದೇ ಖಾಸಗಿ ವ್ಯಕ್ತಿಗಳೊಂದಿಗೆ ಸಭೆ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಉಸ್ತುವಾರಿಗಳಾದ ಸಂಪಂಗಿ, ಸಾಹಿದ್ ತೆಕ್ಕಲ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಸಭೆಯಿಂದ ಹೊರಗುಳಿದ ಶ್ರೀಧರ್‌ಗೌಡ, ಕಾರ್ಯಕರ್ತರು:ಎರಡು ಗಂಟೆಗಳ ಕಾಲ ಸಭೆಗೆ ತಡವಾಗಿ ಆಗಮಿಸಿದ ಉಸ್ತುವಾರಿಗಳ ನಡೆಯನ್ನು ಖಂಡಿಸಿ ಶ್ರೀಧರ್ ಗೌಡ, ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸದೇ ಹೊರಗುಳಿದು ಖಂಡಿಸಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಉಸ್ತುವಾರಿಗಳಾದ ಎನ್.ಸಂಪಂಗಿ, ಸಾಹಿದ್ ತೆಕ್ಕೆಲ್ ಅವರು ಸಭೆಯನ್ನು ಆರಂಭಿಸುವ ಕುರಿತು ಅರ್ಧಗಂಟೆ ಕಾಲ ಕುಳಿತರು ಕೂಡ ಶ್ರೀಧರ ಗೌಡ ಸೇರಿದಂತೆ ಯಾವುದೇ ಮುಖಂಡರು, ಕಾರ್ಯಕರ್ತರು ಸಭೆಗೆ ಬಾರದೆ ಹೊರಗುಳಿದರು. ಬಳಿಕ ಶ್ರೀಧರ ಗೌಡ ಮಾತ್ರ ಆಗಮಿಸಿ ಉಸ್ತುವಾರಿಗಳ ಬಳಿ ತಮ್ಮ ನೋವನ್ನು ಹೊರಹಾಕಿದ ವೇಳೆ ಉಸ್ತುವಾರಿ ಎನ್.ಸಂಪಂಗಿ ಅವರು ಹೊರ ನಡೆಯಲು ಯತ್ನಿಸಿದರು. ಈ ಸಂದರ್ಭದಲ್ಲಿ ಸಮಾಧಾನಗೊಳಿಸಿ ಶ್ರೀಧರ ಗೌಡರ ನೇತೃತ್ವದಲ್ಲಿ ಸಭೆ ಮುಂದುವರಿಯಿತು.
ಕಾಂಗ್ರೆಸ್ ಪಕ್ಷದ ಕೃಷ್ಣೇಗೌಡ ಅಥವಾ ಯಾರೇ ಆಗಿರಲಿ ಪಕ್ಷದ ಕಚೇರಿಗೆ ಬಂದು ಸಭೆಯಲ್ಲಿ ಭಾಗವಹಿಸಿ ಪಕ್ಷ ನಿಷ್ಠೆಯನ್ನು ತೋರಿಸಬೇಕು. ತಮಗೆ ಬೇಕಾದ ರೀತಿಯಲ್ಲಿ ಉಸ್ತುವಾರಿಗಳನ್ನು ಕರೆಯಿಸಿಕೊಂಡು ಸಭೆ ನಡೆಸುವುದು ಎಷ್ಟರಮಟ್ಟಿಗೆ ಸರಿ. ಇದು ಪಕ್ಷ ವಿರೋಧಿ ಹಾಗೂ ಪಕ್ಷ ನಿಷ್ಠೆಯಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದು ಸಭೆಯಲ್ಲಿದ್ದ ಕಾರ್ಯಕರ್ತರು ಏರುಧ್ವನಿಯಲ್ಲಿ ಉಸ್ತುವಾರಿಗಳ ಮುಂದೆ ನೋವನ್ನು ಹೊರಹಾಕಿದರು.