ಜನರ ಕೆಲಸ ತ್ವರಿತಗೊಳಿಸಲು ‘ಜನಸ್ಪಂದನ’

| Published : Oct 09 2025, 02:00 AM IST

ಸಾರಾಂಶ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ಮತ್ತು ಹಲವು ವರ್ಷಗಳ ಹಿಂದೆ ಮಂಜೂರಾಗಿದ್ದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಚೇಳೂರು ಬಡಜನರು ಕಚೇರಿಗಳತ್ತ ಅಲೆದಾಡುವುದನ್ನು ತಪ್ಪಿಸಿ, ಅವರ ಕೆಲಸ ಕಾರ್ಯಗಳು ತ್ವರಿತವಾಗಿ ನಡೆಯುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.

ತಾಲೂಕಿನ ಪುಲಿಗಲ್ ಗ್ರಾಮ ಪಂಚಾಯತಿಯಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧಿಕಾರಿಗಳ ಉಪಸ್ಥಿತಿ

ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳನ್ನು ಈ ಕಾರ್ಯಕ್ರಮಕ್ಕೆ ಕರೆತರಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಹಲವಾರು ಸರ್ವೆ ಹಾಗೂ ಹಿರಿಯರಿಗೆ ವೃದ್ಧಾಪ್ಯ ಮಾಸಿಕ ಪಿಂಚಣಿ ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ತಹಸೀಲ್ದಾರ್ ಶ್ವೇತಾ ಬಿ.ಕೆ.ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ಮತ್ತು ಹಲವು ವರ್ಷಗಳ ಹಿಂದೆ ಮಂಜೂರಾಗಿದ್ದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಿಎಂಎವೈ ಯೋಜನೆಯಡಿ ಮತ್ತು ವಿವಿಧ ಇಲಾಖಾ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಈ ಕಾರ್ಯಕ್ರಮಕ್ಕಿದೆ ಎಂದು ತಿಳಿಸಿದರು.

ಆಹ್ವಾನ ನೀಡದ್ದಕ್ಕೆ ಕ್ಷಮೆ ಯಾಚನೆ

ಈ ವೇಳೆ ಮಾತನಾಡಿದ ಭಾನುಪ್ರಕಾಶ ಅವರು, ವಿರೋಧ ಪಕ್ಷದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವುದು ತಮ್ಮ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ. ಶಾಸಕರ ಅಭಿವೃದ್ಧಿ ಕಾರ್ಯಗಳು ತಿಳಿಯಬೇಕಾದರೆ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಬರಬೇಕು ಎಂದು ಮನವಿ ಮಾಡಿದರು.

ತಾಲೂಕಿನ ಪುಲಿಗಲ್ ಗ್ರಾಮ ಪಂಚಾಯತಿಯಲ್ಲಿ ಬಾಗೇಪಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮವು ಬೆಳಗ್ಗೆ ಹತ್ತು ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ, ಶಾಸಕರು ಮಧ್ಯಾಹ್ನ ಹನ್ನೆರಡು ಗಂಟೆಯಾದರೂ ಬಾರದ ಕಾರಣ ನೆರೆದಿದ್ದ ಸಾರ್ವಜನಿಕರು ಬೇಸರಗೊಂಡರು. ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ

ಇದೇ ವೇಳೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 26 ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡಲಾಯಿತು. ಶಾಸಕರು ಹಾಗೂ ತಹಸೀಲ್ದಾರ್ ಅವರು ಮಾದಕ ವಸ್ತುಗಳ ತ್ಯಜಿಸುವ ಪೋಸ್ಟರ್ ಬಿಡುಗಡೆ ಮಾಡಿ, ವಿವಿಧ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಿಸಿದರು. ಪಿಂಚಣಿ ಪತ್ರಗಳ ವಿತರಣೆ

ಹಿರಿಯ ನಾಗರಿಕರಿಗೆ ಪಿಂಚಣಿ ಪತ್ರಗಳ ವಿತರಣೆಯ ಜೊತೆಗೆ, ಪೋಡಿ ಮುಕ್ತ ಅಭಿಯಾನದಡಿ ರೈತರಿಗೆ ಪ್ರತ್ಯೇಕ ಜಮೀನು ದಾಖಲೆಗಳನ್ನು ವಿತರಿಸಲಾಯಿತು. ಇದು ಜನರಿಗೆ ಸ್ಥಳದಲ್ಲಿಯೇ ತಮ್ಮ ಜಮೀನು ಸಮಸ್ಯೆಗೆ ಪರಿಹಾರ ಸಿಗಲು ಸಹಕಾರಿಯಾಗಿದೆ.

ಇದೇ ಸಂದರ್ಭದಲ್ಲಿ ಪುಲಿಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಹಳ್ಳಿಗಳಿಗೆ ರಸ್ತೆ ನಿರ್ಮಾಣಕ್ಕೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಇಒ ರಮೇಶ್,ಬಿಇಒ ವೆಂಕಟೇಶಪ್ಪ, ಸಿಡಿಪಿಒ ರಾಮಚಂದ, ಆಹಾರ ನಿರೀಕ್ಷಕರು ಪುಷ್ಪ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರು ಮಹೇಶ್, ಕೃಷಿ ಇಲಾಖೆ ಶ್ರೀನಿವಾಸ್, ಶಿವಪ್ಪ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.