ಮಂಡ್ಯದಲ್ಲಿ ಜನಾಕರ್ಷಿಸುವಲ್ಲಿ ಸೋತ ‘ಖಾದಿ ಉತ್ಸವ’..!

| Published : Feb 14 2025, 12:32 AM IST

ಸಾರಾಂಶ

ಖಾದಿ ಉತ್ಸವಕ್ಕೆ ದೇಶದ ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸಾ. ರಾಜ್ಯದಿಂದ ಗದಗ, ಚಿತ್ರದುರ್ಗ, ಕೋಲಾರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ರಾಮನಗರ ಸೇರಿದಂತೆ ಎಲ್ಲೆಡೆಯಿಂದ ಖಾದಿ ಉತ್ಪನ್ನಗಳ ಸಹಕಾರ ಸಂಘಗಳವರು ಪಾಲ್ಗೊಂಡಿದ್ದಾರೆ. ೧೫ ದಿನಗಳ ಕಾಲ ಖಾದಿ ಉತ್ಸವ ನಡೆಯುವುದರಿಂದ ದೂರದಿಂದ ಬಂದಿರುವವರಿಗೆ ಶೌಚಾಲಯವನ್ನೂ ನಿರ್ಮಿಸಿಕೊಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಖಾದಿ ಉತ್ಸವಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಚಾರದ ಕೊರತೆ, ಸೂಕ್ತ ಸ್ಥಳ ಆಯ್ಕೆಯಲ್ಲೂ ಮಂಡಳಿ ವೈಫಲ್ಯ ಸಾಧಿಸಿರುವುದರಿಂದ ಖಾದಿ ಉತ್ಸವ ಜನಾಕರ್ಷಿಸುವಲ್ಲಿ ಸೋತಿದೆ.

ಖಾದಿ ಉತ್ಸವಕ್ಕೆ ದೇಶದ ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸಾ. ರಾಜ್ಯದಿಂದ ಗದಗ, ಚಿತ್ರದುರ್ಗ, ಕೋಲಾರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ರಾಮನಗರ ಸೇರಿದಂತೆ ಎಲ್ಲೆಡೆಯಿಂದ ಖಾದಿ ಉತ್ಪನ್ನಗಳ ಸಹಕಾರ ಸಂಘಗಳವರು ಪಾಲ್ಗೊಂಡಿದ್ದಾರೆ. ೧೫ ದಿನಗಳ ಕಾಲ ಖಾದಿ ಉತ್ಸವ ನಡೆಯುವುದರಿಂದ ದೂರದಿಂದ ಬಂದಿರುವವರಿಗೆ ಶೌಚಾಲಯವನ್ನೂ ನಿರ್ಮಿಸಿಕೊಡಲಾಗಿದೆ.

ವಿವಿಧ ಬಗೆಯ ವಸ್ತ್ರಗಳು:

ಉತ್ಸವದಲ್ಲಿ ಕೈಯಿಂದ ನೇಯ್ದ ರೇಷ್ಮೆ ಸೀರೆಗಳು, ಮಗ್ಗದ ಸೀರೆಗಳು, ಶರ್ಟ್‌ಗಳು, ಟವಲ್‌ಗಳು, ಕರ್ಚೀಫ್‌ಗಳು, ಚೂಡಿದಾರ್, ನೈಟಿಗಳು, ಕುರಿಯ ತುಪ್ಪಟದಿಂದ ತಯಾರಿಸಿದ ಕಂಬಳಿಗಳು, ಜಮಖಾನಗಳು ಸೇರಿದಂತೆ ವಿವಿಧ ಬಗೆಯ ಖಾದಿ ವಸ್ತ್ರಗಳ ಮಾರಾಟಕ್ಕಿಡಲಾಗಿದೆ. ಸೀರೆಗಳ ಬೆಲೆ ೩೦೦ ರು..ನಿಂದ ೨೦ ಸಾವಿರ ರು.ವರೆಗಿದೆ. ಶರ್ಟ್‌ಗಳ ಬೆಲೆ ೫೫೦ ರು.ನಿಂದ ಶುರುವಾಗುತ್ತದೆ. ಸುಮಾರು ೬೦ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ಖಾದಿ ಉತ್ಸವಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಈ ಖಾದಿ ಉತ್ಸವಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಆಗಮಿಸದಿರುವುದು ಮಾರಾಟಗಾರರಲ್ಲಿ ಬೇಸರವನ್ನುಂಟುಮಾಡಿದೆ.

ಬಹುತೇಕರಿಗೆ ಗೊತ್ತಿಲ್ಲ:

ಜನರು ಉತ್ಸವದಿಂದ ದೂರ ಉಳಿಯುವುದಕ್ಕೆ ಪ್ರಚಾರದ ಕೊರತೆಯೂ ಕಾರಣವೆಂಬ ಆರೋಪಗಳೂ ಇವೆ. ಮಂಡ್ಯದಲ್ಲಿ ಖಾದಿ ಉತ್ಸವ ನಡೆಯುತ್ತಿರುವ ಮಾಹಿತಿ ಬಹುತೇಕರಿಗೆ ಗೊತ್ತೇ ಇಲ್ಲ. ಖಾದಿ ಉತ್ಸವ ಆಯೋಜನೆ ಪ್ರಚಾರ ಮಾಡುವುದಕ್ಕೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧಿಕಾರಿಗಳು ಹೆಚ್ಚಿನ ಆಸಕ್ತಿ ತೋರಿದಂತೆ ಕಂಡುಬಂದಿಲ್ಲ. ೧೦೦ ಆಟೋಗಳಿಗೆ ಸ್ಟಿಕ್ಕರ್ ಅಂಟಿಸಿ ನಾಲ್ಕೈದು ಮರಗಳಿಗೆ ಬೋರ್ಡ್ ಹೊಡೆದು, ಒಂದೆರಡು ಕಡೆ ಫ್ಲೆಕ್ಸ್ ಹಾಕಿದರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಅಧಿಕಾರಿಗಳು ಭಾವಿಸಿದಂತಿದೆ.

ಜನರಿಗೆ ಖಾದಿ ಮಹತ್ವ ಗೊತ್ತಿಲ್ಲ:

ಖಾದಿ ವಸ್ತ್ರಗಳ ಮಹತ್ವ, ಅವುಗಳನ್ನು ಬಳಕೆಯ ಬಗ್ಗೆ ಜನರಿಗೆ ತಿಳಿಸಿಕೊಟ್ಟು ಸ್ವದೇಶಿ ಉತ್ಪನ್ನಗಳ ಕಡೆಗೆ ಆಕರ್ಷಿಸುವ, ವಸ್ತ್ರಗಳನ್ನು ಕೊಳ್ಳುವುದಕ್ಕೆ ಉತ್ತೇಜನ ನೀಡುವ ಪ್ರಯತ್ನಗಳನ್ನೇ ಮಂಡಳಿಯ ಅಧಿಕಾರಿಗಳು ಮಾಡುತ್ತಿಲ್ಲ. ವರ್ಷಕ್ಕೊಮ್ಮೆ ಖಾದಿ ಮೇಳ ಮಾಡಿ ಕೈತೊಳೆದುಕೊಳ್ಳುವ ಅಧಿಕಾರಿಗಳು ಇನ್ನೊಂದು ವರ್ಷದವರೆಗೆ ಎಲ್ಲಿಯೂ ಕಾಣಸಿಗುವುದೇ ಇಲ್ಲ.

ಖಾದಿ ಉತ್ಸವ ಆಯೋಜನೆ ಸಂಬಂಧ ಒಂದು ವಾರ ಮೊದಲೇ ಪತ್ರಿಕೆಗಳಲ್ಲಿ ಪ್ರಚಾರ ದೊರಕಿಸುವ, ಉತ್ಸವದ ವೈಶಿಷ್ಟ್ಯತೆಗಳೇನು, ಎಲ್ಲೆಲ್ಲಿಂದ ಖಾದಿ ವಸ್ತ್ರಗಳನ್ನು ತರುತ್ತಾರೆ, ಖಾದಿ ಉತ್ಸವದಲ್ಲಿ ಬಟ್ಟೆಗಳಿಗಿರುವ ರಿಯಾಯ್ತಿ ಎಷ್ಟು ಎಂಬೆಲ್ಲಾ ಅಂಶಗಳನ್ನು ಜನರಿಗೆ ತಿಳಿಸಿಕೊಟ್ಟು ಉತ್ಸವದ ಕಡೆಗೆ ಆಕರ್ಷಿಸುವ ಗೋಜಿಗೇ ಅಧಿಕಾರಿಗಳು ಹೋಗಲಿಲ್ಲ. ಅಂದ ಮೇಲೆ ಜನರು ಖಾದಿ ವಸ್ತ್ರಗಳನ್ನು ಕೊಳ್ಳುವುದಕ್ಕೆ ಬರುವುದಾದರೂ ಹೇಗೆ ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಸ್ಥಳ ಆಯ್ಕೆಯಲ್ಲಿ ವೈಫಲ್ಯ?

ಖಾದಿ ಉತ್ಸವಕ್ಕೆ ಜನನಿಬಿಡ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳದೆ ಮಂಡ್ಯ ವಿಶ್ವವಿದ್ಯಾಲಯದ ಆವರಣವನ್ನು ಆಯ್ಕೆಮಾಡಿದ್ದು ಸಮಂಜಸವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಡಾ.ರಾಜಕುಮಾರ್ ಬಡಾವಣೆ, ಒಳಾಂಗಣ ಕ್ರೀಡಾಂಗಣದ ಬಳಿ ಆಯೋಜನೆ ಮಾಡಿದ್ದರೆ ಸುತ್ತಮುತ್ತಲಿನಿಂದ ಹೆಚ್ಚು ಜನರು ಆಗಮಿಸುತ್ತಿದ್ದರು. ಮಂಡ್ಯ ವಿಶ್ವವಿದ್ಯಾಲಯದ ಬಳಿ ಬಂದೀಗೌಡ ಬಡಾವಣೆ, ಕಲ್ಲಹಳ್ಳಿಯ ಜನರನ್ನು ಹೊರತುಪಡಿಸಿದರೆ ಬೇರೆಯವರು ಅಷ್ಟು ದೂರ ಬರುವುದಿಲ್ಲ. ಒಳಾಂಗಣ ಕ್ರೀಡಾಂಗಣದ ಬಳಿಯಾದರೆ ಸುಭಾಷ್‌ನಗರ, ಅಶೋಕನಗರ, ವಿದ್ಯಾನಗರ ಸೇರಿದಂತೆ ವಿ.ವಿ.ರಸ್ತೆ, ಆರ್.ಪಿ.ರಸ್ತೆ, ಕೆ.ಆರ್.ರಸ್ತೆಯಲ್ಲಿ ಓಡಾಡುವ ಜನರೂ ಉತ್ಸವದತ್ತ ಲಗ್ಗೆ ಹಾಕುತ್ತಿದ್ದರು. ಸರಿಯಾದ ವ್ಯವಸ್ಥೆಯನ್ನು ಮಾಡದೆ ಖಾದಿ ಉತ್ಸವ ಜನರಿಲ್ಲದೆ ಖಾಲಿ ಹೊಡೆಯುವಂತಾಗಿದೆ.

ಖಾದಿ ಬಟ್ಟೆಯ ಬಗ್ಗೆ ಜನರಲ್ಲಿ ಹೆಚ್ಚಿನ ತಿಳಿವಳಿಕೆ ಇಲ್ಲದಿರುವುದೂ ಉತ್ಸವಕ್ಕೆ ಬರುವ ಜನರೂ ಕಡಿಮೆ ಪ್ರಮಾಣದಲ್ಲಿ ಖರೀದಿಸುವುದಕ್ಕೆ ಇನ್ನೊಂದು ಕಾರಣವಾಗಿದೆ. ಬರುವ ಜನರಲ್ಲಿ ಕೊಳ್ಳುವ ಜನರಿಗಿಂತಲೂ ನೋಡುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಮಾರಾಟಗಾರರು ಹೇಳುವ ಮಾತಾಗಿದೆ.

ಉತ್ತಮ ಮಾರಾಟ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ:

ಹೊರ ರಾಜ್ಯಗಳಿಂದ ಬಂದವರು ಸರಕುಗಳೊಂದಿಗೆ ಇಲ್ಲಿಗೆ ಬರುವುದಕ್ಕೆ ೬೦ ರಿಂದೆ ೮೦ ಸಾವಿರ ರು. ವಿವಿಧ ಜಿಲ್ಲೆಗಳಿಂದ ಬಂದವರಿಗೆ ೩೦ ಸಾವಿರ ರು.ನಿಂದ ೫೦ ಸಾವಿರ ರು.ವರೆಗೆ ಖರ್ಚಾಗಿದೆ. ಅವರೆಲ್ಲರೂ ಉತ್ತಮ ಮಾರಾಟದ ನಿರೀಕ್ಷೆ ಇಟ್ಟುಕೊಂಡು ಬಂದಿದ್ದರೂ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗದಿರುವುದು ಬೇಸರ ಮೂಡಿಸಿದೆ. ೧೫ ದಿನಕ್ಕೆ ೧೫ ಸಾವಿರ ರು. ಮಳಿಗೆ ಬಾಡಿಗೆಯನ್ನು ನಿಗದಿಪಡಿಸಿ ನೀಡಲಾಗಿದೆ.

ಖಾದಿ ಉತ್ಸವ ಜನಾಕರ್ಷಣೆ ಕಳೆದುಕೊಂಡಿರುವ ಬಗ್ಗೆ ಖಾದಿ ಗ್ರಾಮೋದ್ಯೋಗ ಮಂಡಳಿ ಅಧಿಕಾರಿಗಳನ್ನು ಕೇಳಿದರೆ, ಇದೂ ಸ್ಥಳ ಚೆನ್ನಾಗಿದೆ. ಬೇರೆ ಸ್ಥಳಗಳಲ್ಲಿ ಬಾಡಿಗೆ ಹೆಚ್ಚು. ನಾವೂ ನೂರು ಆಟೋಗಳಿಗೆ ಸ್ಟಿಕ್ಕರ್ ಅಂಟಿಸಿ ಪ್ರಚಾರ ಕೊಟ್ಟಿದ್ದೇವೆ. ಖಾದಿ ಉತ್ಸವ ಫ್ಲೆಕ್ಸ್‌ಗಳನ್ನು ನಗರದ ಬಹುತೇಕ ಕಡೆ ಹಾಕಿದ್ದರೂ ಎತ್ತಿಕೊಂಡು ಹೋಗಿದ್ದಾರೆ. ಮರಗಳಿಗೆ ಬೋರ್ಡ್‌ಗಳನ್ನು ಹಾಕಿದ್ದೇವೆ. ಅಲ್ಲದೆ, ಹದಿನೈದು ದಿನಗಳವರೆಗೆ ಖಾದಿ ಉತ್ಸವ ನಡೆಯಲಿರುವುದರಿಂದ ಇಲ್ಲಿಗೆ ಬಂದಿರುವವರಿಗೆ ಶೌಚಾಲಯ ವ್ಯವಸ್ಥೆಗೆ ಈ ಸ್ಥಳ ಅನುಕೂಲವಾಗಿದ್ದರಿಂದ ಇಲ್ಲಿ ಉತ್ಸವ ಆಯೋಜಿಸಿರುವುದಾಗಿ ಹೇಳುತ್ತಾರೆ.

ಖಾದಿ ಉತ್ಸವ ನಡೆಸುವುದಕ್ಕೆ ಇಲಾಖೆ ನಮಗೆ ೨೦ ಲಕ್ಷ ರು. ನೀಡಿದೆ. ಈ ಹಣದಲ್ಲಿ ಜರ್ಮನ್ ಟೆಂಟ್ ವ್ಯವಸ್ಥೆಯನ್ನು ಮಾಡಿದ್ದೇವೆ. ಲೈಟಿಂಗ್ ವ್ಯವಸ್ಥೆ, ಶೌಚಾಲಯ ಅನುಕೂಲ ಮಾಡಿಕೊಡಲಾಗಿದೆ. ನಗರದ ಬೇರೆಲ್ಲೂ ಇಷ್ಟೊಂದು ವಿಶಾಲ ಜಾಗವಿಲ್ಲ. ಬೇರೆ ಕಡೆ ಮಾಡಿದರೆ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದಿಲ್ಲ. ಅದಕ್ಕಾಗಿ ಮಂಡ್ಯ ವಿವಿ ಆವರಣವನ್ನು ಆಯ್ಕೆ ಮಾಡಿದೆವು.

- ಸುಧಾಮ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧಿಕಾರಿ