ಸಾರಾಂಶ
ಕನ್ನಡಪ್ರಭ ವಾರ್ತೆ ಐಗಳಿ
ತಾಲೂಕಿನ ಪೂರ್ವಭಾಗದಲ್ಲಿ ದ್ರಾಕ್ಷಿ ಬೆಳೆಗಾರರು ಬೆಳೆ ಉಳಿಸಲು ಹರ ಸಾಹಸ ಪಡುತ್ತಿದ್ದಾರೆ. ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ದ್ರಾಕ್ಷಿ ಕಟಾವು ಮಾಡಲು ಇನ್ನೂ 2-3 ತಿಂಗಳು ಬೇಕಾಗುತ್ತದೆ. ಟ್ಯಾಂಕರ ಮೂಲಕ ನೀರು ಹಾಕಲು ಸಾಲ ಮಾಡುವಂತಾಗಿದೆ. ಇವರ ಕಷ್ಟಕ್ಕೆ ನೆರವಾಗಬೇಕು ಎಂದು ಒಣ ದ್ರಾಕ್ಷಿ ಘಟಕದ ಅಧ್ಯಕ್ಷ ಶಹಜಹಾನ ಡೊಂಗರಗಾಂವ ಆಗ್ರಹಿಸಿದರು. ಕಲ್ಯಾಣ ನಗರದಲ್ಲಿರುವ ಘಟಕದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಹಳ್ಳಿ, ಐಗಳಿ, ಫಡತರವಾಡಿ, ಗ್ರಾಮಗಳಿಗೆ ನೀರಾವರಿ ಅಧಿಕಾರಿಗಳು ನೀರು ಬಿಡುವುದರಲ್ಲಿ ವಿಫಲವಾಗಿದ್ದಾರೆ. ಕೊನೆ ಹಳ್ಳಿಗೆ ನೀರು ತಲುಪುತ್ತಿಲ್ಲ. ಕಳೆದ 10 ವರ್ಷಗಳ ಹಿಂದೆ ಒಣ ದ್ರಾಕ್ಷಿಗೆ ಬೆಲೆ ₹200 ಇತ್ತು, ಆಗ ಕೂಲಿಕಾರ್ಮಿಕರ ಸಂಬಳ ಸಹ ಕಡಿಮೆ ಇತ್ತು. ಈಗ ಆ ಪರಿಸ್ಥಿತಿ ಉಳಿದಿಲ್ಲ. ಕಾರ್ಮಿಕರ ಸಂಬಳ ಹೆಚ್ಚು, ಔಷಧಿ ಬೆಲೆ ಗಗನಕ್ಕೇರಿದೆ. ಆದರೆ, ಒಣ ದ್ರಾಕ್ಷಿ ಬೆಲೆ ₹120ಗೆ ಕೆ.ಜಿ ಇದೆ. ಕಳೆದ ವರ್ಷ ಒಣದ್ರಾಕ್ಷಿ ಮಾರಾಟ ಆಗದೇ ಇನ್ನೂ 25 ಶೇಕಡಾ ಉಳಿದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಣ ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.ರಾಜ್ಯ ಸರ್ಕಾರ ಒಣ ದ್ರಾಕ್ಷಿ ಖರೀದಿಸಿ ಶಾಲೆಯ ಮಧ್ಯಾಹ್ನದ ಬಿಸಿಊಟದ ಜೊತೆ ಹಾಲಿನಂತೆ ಇದನ್ನು ಕೊಡಬಹುದು. ಇದರಿಂದ ಮಕ್ಕಳಿಗೆ ಪೌಷ್ಠಿಕತೆ ಜಾಸ್ತಿ ಆಗಲಿದೆ. ಜೊತೆಗೆ ರೈತರಿಗೆ ಸಹಾಯ ಮಾಡಿದಂತೆ ಆಗುವುದು. ಎಲ್ಲ ವಸತಿ ಮಕ್ಕಳಿಗೆ ವಿತರಿಸಬಹುದು ಎಂದು ಸಲಹೆ ನೀಡಿದರು.ಸರ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಕ್ಸ್ ರೈತರಿಂದ ಹೋಗಲಿದೆ. ರೈತರು ಕೃಷಿಯಂತ್ರ ಖರೀದಿ, ಔಷಧಿ, ಬೀಜ, ಹೀಗೆ ಅನೇಕ ರೀತಿಯಲ್ಲಿ ತೆರಿಗೆ ಪಾವತಿಸುತ್ತಾರೆ. ರೈತರು ತಮ್ಮ ಕಷ್ಟ ನನ್ನ ಎದುರು ಹೇಳಿಕೊಂಡಿದ್ದಾರೆ. ಸರ್ಕಾರ ಹೆಚ್ಚಿನ ಪರಿಹಾರ ಹಾಗೂ ಬೆಂಬಲ ಬೆಳೆ ಘೋಷಣೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು. ದ್ರಾಕ್ಷಿ ಬೆಳೆಗಾರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ. ಇಲ್ಲದಿದ್ದರೆ ದ್ರಾಕ್ಷಿ ಬೆಳೆ ಬೆಳೆಯದಂತೆ ನಮಗೆ ತಿಳಿಸಲಿ. ಕಷ್ಟ ಪಟ್ಟು ಸಾಲ ಮಾಡಿ ಬೆಳೆ ಬೆಳೆದು ಉತ್ತಮ ಒಣ ದ್ರಾಕ್ಷಿ ತಯಾರಿಸಿದರೂ ಬೆಲೆ ಇಲ್ಲದೆ ರೈತರು ಸಾಲ ಮರುಪಾವತಿ ಮಾಡಲು ಹೇಗೆ ಸಾಧ್ಯ. ರಾಜ್ಯ ಹಾಗೂ ಕೇಂದ್ರ ಸರ್ಕಾರ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಬಗೆಹರಿಸಿರಿ ಎಂದು ಆಗ್ರಹಿಸಿದರು.
ಈ ವೇಳೆ ಅಡಹಳ್ಳಿಯ ಈರಗೌಡ ಪಾಟೀಲ, ನೂರ ಅಹ್ಮದ ಡೊಂಗರಗಾಂವ, ಮಹಾದೇವ ಹಾಲಳ್ಳಿ, ಅಪ್ಪಾಸಾಬ ಮಾಕಾಣಿ, ತೆಲಸಂಗದ ಕಾಶಿನಾಥ ಕುಂಬಾರಕರ, ಪ್ರಕಾಶ ಪಾಟೀಲ, ಶೌಕತ್ ಡೊಂಗರಗಾಂವ, ದಸ್ತಗೀರಸಾಬ ಕೊರಬು, ಆಸೀಪಲಿ ಡೊಂಗರಗಾಂವ, ಸೇರಿದಂತೆ ಅನೇಕ ರೈತರು ಇದ್ದರು.