ಎಂಡೋ ಪೀಡಿತ ಮಹಿಳೆಯರಿಗೆ ‘ಹೊಸಬೆಳಕು’

| Published : Jan 13 2025, 12:46 AM IST

ಸಾರಾಂಶ

ಎಂಡೋ ಸಂತ್ರಸ್ತರು ಹಾಸಿಗೆಬಿಟ್ಟು ಏಳಲು ಅಶಕ್ತರಾಗಿದ್ದಾರೆ. ಅವರ ಹೆತ್ತವರು ಜೀವಂತವಿರುವ ತನಕ ತಮ್ಮ ಮಕ್ಕಳ ಪೋಷಣೆಯನ್ನು ಮಾಡುತ್ತಿದ್ದರು. ಇದೀಗ ಕೆಲವರು ಹೆತ್ತವರನ್ನೂ ಕಳೆದುಕೊಂಡಿದ್ದಾರೆ. ಅಸಹಾಯಕ ಪರಿಸ್ಥಿತಿಯಲ್ಲಿರುವ ಒಟ್ಟು ೧೫೦ ಮಹಿಳಾ ಎಂಡೋಸಂತ್ರಸ್ತರನ್ನು ಸೇರಿಸಿಕೊಳ್ಳಲು ಕಟ್ಟಡದ ಕಾಮಗಾರಿ ಅರಂಭವಾಗಲಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕರಾವಳಿ ಜಿಲ್ಲೆಗಳಲ್ಲಿನ ಎಂಡೋಸಲ್ಫಾನ್ ಪೀಡಿತ ಮಹಿಳೆಯರನ್ನು ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ‘ಹೊಸಬೆಳಕು’ ಆಶ್ರಮದಲ್ಲಿ ಸೇರಿಸಿಕೊಳ್ಳಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಈಗಾಗಲೇ ಜಾಗ ಖರೀದಿಸಿದ್ದು, ಜೂನ್‌ ಮೊದಲ ವಾರದಲ್ಲಿ ಸಂತ್ರಸ್ತ ಮಹಿಳೆಯರು ಸೇರಬಹುದಾಗಿದೆ.

ಎಂಡೋ ಸಂತ್ರಸ್ತರು ಹಾಸಿಗೆಬಿಟ್ಟು ಏಳಲು ಅಶಕ್ತರಾಗಿದ್ದಾರೆ. ಅವರ ಹೆತ್ತವರು ಜೀವಂತವಿರುವ ತನಕ ತಮ್ಮ ಮಕ್ಕಳ ಪೋಷಣೆಯನ್ನು ಮಾಡುತ್ತಿದ್ದರು. ಇದೀಗ ಕೆಲವರು ಹೆತ್ತವರನ್ನೂ ಕಳೆದುಕೊಂಡಿದ್ದಾರೆ. ಅಸಹಾಯಕ ಪರಿಸ್ಥಿತಿಯಲ್ಲಿರುವ ಒಟ್ಟು ೧೫೦ ಮಹಿಳಾ ಎಂಡೋಸಂತ್ರಸ್ತರನ್ನು ಸೇರಿಸಿಕೊಳ್ಳಲು ಕಟ್ಟಡದ ಕಾಮಗಾರಿ ಅರಂಭವಾಗಲಿದೆ.

ಭಾನುವಾರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ್ದು, ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನು ಭೋಗ್ ಹಾಗೂ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಇದ್ದರು.

ಭಯಾನಕ ದುರಂತ:

ಎಂಡೋಸಲ್ಫಾನ್ ದುರಂತದಲ್ಲಿ ಸುಮಾರು ೩೦೦೦ ಮಂದಿ ಸಂತ್ರಸ್ತರು ಈಗಾಗಲೇ ಕ್ಯಾನ್ಸರ್, ಎಪಿಲೆಪ್ಸಿ ಮುಂತಾದ ರೋಗಗಳಿಂದ ನರಳಿ ಮೃತಪಟ್ಟಿದ್ದಾರೆ. ಬದುಕುಳಿದ ೮೬೦೦ ಪೀಡಿತರಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಬಾಧಿತರು ಹೆಣ್ಣು ಮಕ್ಕಳಾಗಿದ್ದು, ಸುಮಾರು ೯೦೦ ಮಂದಿಯಷ್ಟು ಶೇ.೮೦ಕ್ಕೂ ಅಧಿಕ ಅಂಗವಿಕಲತೆಯುಳ್ಳವರಾಗಿದ್ದಾರೆ. ಇದರಲ್ಲಿ ಹೆಚ್ಚಿನ ಹೆಣ್ಣುಮಕ್ಕಳು ಸುಮಾರು ೧೦ ರಿಂದ ೪೦ ವರ್ಷದೊಳಗಿನವರಾಗಿದ್ದಾರೆ.

ಎಂಡೋಸಲ್ಪಾನ್ ಎಂದರೇನು?:

ಎಂಡೋಸಸಲ್ಪಾನ್ ಕ್ರಿಮಿನಾಶಕವಾಗಿದ್ದು, ಬಿಳಿ ನೊಣಗಳು, ಗಿಡ ಹೇನುಗಳು, ಜೀರುಂಡೆಗಳು ಮತ್ತು ಎಲೆಕೋಸು ಹುಳುಗಳು ಸೇರಿದಂತೆ ಕೀಟಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಇದನ್ನು ಜೇನುನೊಣಗಳಿಗೆ ಮಾನವಕುಲಕ್ಕೆ ವಿಷಕಾರಿ ಎಂದು ಪರಿಗಣಿಸಲಾಗಿದೆ. ೧೯೮೦ರಿಂದ ಸುಮಾರು ೨೦ ವರ್ಷ ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ಕರಾವಳಿಯ ಗೇರು ತೋಟಗಳಿಗೆ ಟನ್‌ಗಟ್ಟಲೆ ಎಂಡೋಸಲ್ಫಾನ್ ಕೀಟನಾಶಕ ಸುರಿದಿದ್ದರು.

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿದಲ್ಲಿದ್ದಾರೆ 178 ಎಂಡೋಬಾಧಿತರು:

ಕಾರ್ಕಳ ತಾಲೂಕಿನ ಕಾಂತಾವರ-13, ಇರ್ವತ್ತೂರು-6, ಸಾಣೂರು-17, ಮಿಯ್ಯಾರ್ -23, ಕೌಡೂರು-21, ಅಂಡಾರು-9, ಕಡ್ತಲ-7, ಎಳ್ತಾರೆ-5, ಕೆರ್ವಾಶೆ-25, ಶಿರ್ಲಾಲು-8, ಈದು-28, ಮುಲ್ಲಡ್ಕ-1, ಕಾರ್ಕಳ ಪುರಸಭೆ-1, ಹೆಬ್ರಿ ತಾಲೂಕಿನ ಶಿವಪುರ-14 ಎಂಡೋಸಂತ್ರಸ್ತರಿದ್ದಾರೆ. ಅವರಲ್ಲಿ ಅಂಗವೈಕಲ್ಯತೆಯಲ್ಲಿ ಶೇ.25ಕ್ಕಿಂತ ಕಡಿಮೆ-12 ಜನ, ಶೇ.60ಕ್ಕಿಂತ ಕಡಿಮೆ-38 ಜನ, ಶೇ.60ಕ್ಕಿಂತ ಹೆಚ್ಚು-128 ಜನ ಇದ್ದಾರೆ.

ಪರಿಣಾಮವೇನು?:

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ೪೫೦ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ೧೨,೦೦೦ಕ್ಕಿಂತಲೂ ಅಧಿಕ ಮಂದಿ ಎಂಡೋಬಾಧಿತರಾಗಿದ್ದಾರೆ. ಗರ್ಭದಲ್ಲಿರುವ ಶಿಶುಗಳ ಮೇಲೆ ಎಂಡೋಸಲ್ಫಾನ್ ಬೀರಿದ ದುಷ್ಪರಿಣಾಮಗಳಿಂದಾಗಿ ಸಹಸ್ರಾರು ಮಕ್ಕಳು ಹುಟ್ಟಿನಿಂದಲೇ ಅಂಗವಿಕಲರಾಗಿ, ವಿಕಲಚೇತನರಾಗಿ ಬಳಲುತ್ತಿದ್ದು, ಹಿರಿಯರು ಕ್ಯಾನ್ಸರ್, ಅಸ್ತಮಾ, ಮೂರ್ಚೆರೋಗ, ಖಿನ್ನತೆ ಹಾಗೂ ಹಾರ್ಮೋನ್ ಸಂಬಂಧಿತ ರೋಗಗಳಿಂದ ಬಳಲುತ್ತಿದ್ದಾರೆ. ಈಗಾಗಲೇ ಈ ದುರಂತದಲ್ಲಿ ಸುಮಾರು ಮೂರು ಸಾವಿರಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

ಎಂಡೋ ಸಲ್ಫಾನ್‌ ನಿಷೇಧ:

ಎಂಡೋ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಹಾಗೂ ಇತರರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ದೂರು ಅರ್ಜಿ ಅನುಸರಿಸಿ ೨೦೧೧ರಲ್ಲಿ ನ್ಯಾಯಾಲಯ ಇಡೀ ದೇಶದಲ್ಲಿ ಎಂಡೋಸಲ್ಫಾನ್ ಉಪಯೋಗ ಹಾಗೂ ಮಾರಾಟವನ್ನು ನಿಷೇಧಿಸಿತು. ಆ ಬಳಿಕ ೨೦೧೩ರಲ್ಲಿ ಉಚ್ಚ ನ್ಯಾಯಾಲಯವನ್ನು ಆಶ್ರಯಿಸಿದ ಪ್ರತಿಷ್ಠಾನವು ಈ ದುರಂತದಲ್ಲಿ ಜೀವಂತವಾಗಿ ಉಳಿದಿರುವ ಸುಮಾರು ೮,೬೦೦ಮಂದಿ ಸಂತ್ರಸ್ತರಿಗೆ ಮಾಸಾಶನ ದೊರಕಿಸುವಲ್ಲಿ ಸಫಲವಾಯಿತು.

................150 ಹೆಣ್ಣು ಮಕ್ಕಳಿಗೆ ಪುನರ್ವಸತಿ ಉದ್ದೇಶಉಡುಪಿ: ಕಳೆದ ನಾಲ್ಕು ದಶಕಗಳಿಂದ ಕರಾವಳಿ ಕರ್ನಾಟಕಾದ್ಯಂತ ನಡೆದಿರುವ ಎಂಡೋಸಲ್ಫಾನ್ ದುರಂತದಲ್ಲಿ ಅಂಗವಿಕಲ ಹಾಗೂ ವಿಶೇಷಚೇತನರಾಗಿ ಬಳಲುತ್ತಿರುವ ಹೆಣ್ಣು ಮಕ್ಕಳಿಗಾಗಿ ಸೇವಾಶ್ರಮವೊಂದನ್ನು ಸ್ಥಾಪಿಸಲು ಕಾರ್ಕಳ ತಾಲೂಕಿನ ಬೈಲೂರಿನ ಸಮೀಪದಲ್ಲಿರುವ ಹೊಸಬೆಳಕು ಟ್ರಸ್ಟ್ ನಿರ್ಧರಿಸಿದೆ.ಹೊಸಬೆಳಕು ಸಂಸ್ಥೆಯಲ್ಲಿ 150 ಹೆಣ್ಣು ಮಕ್ಕಳಿಗಾಗಿ ಪುನರ್ವಸತಿ ಸೇವಾಶ್ರಮವನ್ನು ಸ್ಥಾಪಿಸಲು ಮುಂದಾಗಿದ್ದೇವೆ. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಹಿತ ಅನೇಕ ಸಾರ್ವಜನಿಕ ಹಿತಾಸಕ್ತಿ ಸಂಸ್ಥೆಗಳು ಈ ಯೋಜನೆಯ ಬೆಂಬಲಕ್ಕೆ ನಿಂತಿವೆ ಎಂದು ಹೊಸಬೆಳಕು ಸಂಸ್ಥೆಯ ಮುಖ್ಯಸ್ಥೆ ತನುಲಾ ಉಡುಪಿಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.ಭೂಮಿ ಖರೀದಿ: ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ವೇಷ ಧರಿಸಿ ಒಟ್ಟುಗೂಡಿಸಿದ ಹಣವನ್ನು ಶಟರ್ ಬಾಕ್ಸ್ ತಂಡವು ಹೊಸಬೆಳಕು ಆಶ್ರಮಕ್ಕೆ ನೀಡಿತ್ತು. ಈ ಹಣದಿಂದ ಪಕ್ಕದ 38 ಸೆಂಟ್ಸ್ ಜಾಗವನ್ನು ಖರೀದಿಸಿದ್ದೇವೆ. ಇಲ್ಲಿಯೇ ಕಟ್ಟಡವನ್ನು ಕಟ್ಟಲಾಗುತ್ತಿದ್ದು, ಮೂರು ಮಹಡಿಯ ಕಟ್ಟಡದಲ್ಲಿ ಮೊದಲ ಹಂತದ ಕಾಮಗಾರಿ ಈ ವರ್ಷದ ಜೂನ್‌ನಲ್ಲಿ ಪೂರ್ಣಗೊಳಿಸಿ 50 ಸಂತ್ರಸ್ತರನ್ನು ಸೇರಿಸಿಕೊಳ್ಳಲಾಗುವುದು. ನಂತರ ವರ್ಷದೊಳಗೆ ಮೊದಲನೇ ಮತ್ತು ಎರಡನೇ ಮಹಡಿಯ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ತನುಲಾ ತಿಳಿಸಿದ್ದಾರೆ.

...........................