ಕಾರ್ಕಳ: ಉಡುಪಿ-ಹೆಬ್ರಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169-ಎ ಕಾಮಗಾರಿಗೆ ಸಂಬಂಧಿಸಿದಂತೆ ಹೆಬ್ರಿಯ ಪ್ರಸಿದ್ಧ ಶ್ರೀ ಅನಂತಪದ್ಮನಾಭ ದೇವಸ್ಥಾನದ ಸಮೀಪದ ಭೂಸ್ವಾಧೀನ ವಿಚಾರದಲ್ಲಿ ಉಂಟಾಗಿರುವ ಆತಂಕದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್ ಅವರು ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆದ್ದಾರಿ ಕಾಮಗಾರಿಯಿಂದ ದೇವಸ್ಥಾನದ ವಾಸ್ತು ಹಾಗೂ ಪರಂಪರೆಗೆ ಯಾವುದೇ ಧಕ್ಕೆಯಾಗಬಾರದು ಎಂಬ ಆಗ್ರಹದೊಂದಿಗೆ ನೂರಾರು ಭಕ್ತರು ಗುರುವಾರ ಹೆಬ್ರಿ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಶಾಂತಿಭಂಗ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಸುಧಾಕರ್ ಎಸ್. ನಾಯ್ಕ್, “ಹೆದ್ದಾರಿ ಕಾಮಗಾರಿ ವೇಳೆ ಯಾವುದೇ ರೀತಿಯ ಶಾಂತಿಭಂಗ ಉಂಟಾಗದಂತೆ ಎಲ್ಲರೂ ಸಹಕರಿಸಬೇಕು. ದೇವಸ್ಥಾನದ ಬೇಡಿಕೆಯಂತೆ 15 ಅಂಗಡಿಗಳನ್ನು ಉಳಿಸಿಕೊಂಡು ಕಾಮಗಾರಿ ನಡೆಸುವಂತೆ ಮನವಿ ಮಾಡಲಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಶೀಲನೆ ನಡೆಸಿ ಸಮಸ್ಯೆ ಬಾರದಂತೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಪಷ್ಟನೆ ನೀಡಿ, ಕಾಮಗಾರಿಗೆ ಸಂಬಂಧಿಸಿದಂತೆ ದೇವಸ್ಥಾನದ ಮುಂಭಾಗದಲ್ಲಿರುವ ನಾಲ್ಕು ವಾಣಿಜ್ಯ ಮಳಿಗೆಗಳಿಗೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಈ ಕುರಿತು ಈಗಾಗಲೇ ನೋಟಿಸ್ ನೀಡಲಾಗಿದೆ. ದೇವಸ್ಥಾನದ ಕಟ್ಟಡ, ಪರಾಂಗಣ ಅಥವಾ ರಥ ಸಂಚಲನಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ " ಎಂದು ತಿಳಿಸಿದರು.ದೇವಸ್ಥಾನದ ಮುಂಭಾಗದ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ದೇವಸ್ಥಾನ ಸಮಿತಿ ಸಲ್ಲಿಸಿದ ತಕ್ಷಣ ಭೂ ಪರಿಹಾರ ಪಾವತಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ತಾರಾನಾಥ ಬಲ್ಲಾಳ್, ಡಿವೈಎಸ್‌ಪಿ ವಿಜಯ ಪ್ರಸಾದ್, ಸಿಪಿಐ ಸಂದೀಪ್, ಪಿಎಸ್‌ಐ ಚಂದ್ರ ಎ.ಕೆ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಂಜುನಾಥ ಗೌಡ, ಎಇಗಳಾದ ಶಶಿಧರ್ ಹಾಗೂ ನವೀನ್ ರಾಜ್, ಸ್ಥಳೀಯರಾದ ಪ್ರವೀಣ್ ಬಲ್ಲಾಳ್, ಭಾಸ್ಕರ್ ಜೋಯಿಸ್, ಬಿ. ಹರೀಶ್ ಪೂಜಾರಿ, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.