ಸಾರಾಂಶ
ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎನ್ನುತ್ತಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ವಿನೂತನ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎನ್ನುತ್ತಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ವಿನೂತನ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಬೈಕೊಂದಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಿಂಬಿಸುವಂತಹ ಅಣಕು ಪ್ರದರ್ಶನ ನೀಡಿ ಪ್ರತಿಭಟನೆ ನಡೆಸಿದರು.ತೈಲ ಬೆಲೆ ಏರಿಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದರು. ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದರು. ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು, ವಾಹನ ಸವಾರರಿಗೆ ಹೂ ಕೊಟ್ಟು ಕಿವಿಗೆ ಹೂ ವಿಟ್ಟ ಸರ್ಕಾರದ ಕ್ರಮವನ್ನು ವಿರೋಧಿಸಿದರು.ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯೇ ಸಾಕ್ಷಿಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿ ರಾಜ್ಯ ಸರ್ಕಾರ ತೈಲ ಬೆಲೆಗಳನ್ನು ಏರಿಕೆ ಮಾಡಿದೆ ಎಂದು ದೂರಿದರು.ಲೋಕಸಭೆ ಚುನಾವಣೆ ಸೋಲಿನ ಹತಾಶೆ, ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯಿಂದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಭಂಡತನದಿಂದ ಮಾತನಾಡುವ ರಾಜ್ಯಸರ್ಕಾರ, ಅಭಿವದ್ಧಿ ಯೋಜನೆಗಳಿಗೆ ಹಣ ನೀಡಲಾಗದಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಆ ಸಿಟ್ಟನ್ನು ಈಗ ಜನರ ಮೇಲೆ ತೋರಿಸುತ್ತಿದ್ದಾರೆ. ಹಿಂದೆ ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿದ್ದರು. ವಿದ್ಯುತ್ ದರವನ್ನು ಏರಿಸಲಾಗಿದೆ. ಇವರಿಂದ ಉತ್ತಮ ಆಡಳಿತ ನಿರೀಕ್ಷಿಸಲಾಗುವುದಿಲ್ಲ ಎಂದು ದೂರಿದರು.ತೈಲ ಬೆಲೆ ಏರಿಕೆ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ಮೇಲೆ ದರ ಏರಿಕೆಯ ಬರೆ ಹಾಕಿರುವುದು ಖಂಡನೀಯ. ಈಗಾಗಲೇ ವಿದ್ಯುತ್ ದರ, ಬಸ್ ಪ್ರಯಾಣ ದರ, ತರಕಾರಿ- ಬೇಳೆ ಕಾಳುಗಳ ಬೆಲೆ, ಮದ್ಯದ ಬೆಲೆ, ನಂದಿನಿ ಹಾಲು, ಮೊಸರು, ಮಜ್ಜಿಗೆಯ ಬೆಲೆ ಏರಿಸಿರುವುದು ಸರಿಯಲ್ಲ ಆಕ್ಷೇಪ ವ್ಯಕ್ತಪಡಿಸಿದರು.ಜನರ ಮೇಲೆ ಹೊರೆ ಹೇರಿರುವುದು ಅಕ್ಷಮ್ಯ ಅಪರಾಧ. ಸಿಎಂ ಭಂಡತನ ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಡಾ. ಸಿದ್ದರಾಮಯ್ಯ, ಎಂ. ರೂಪಾ, ಸಿ.ಟಿ. ಮಂಜುನಾಥ, ವಿದ್ಯಾ ನಾಗೇಂದ್ರ, ಎಚ್.ಆರ್. ಅರವಿಂದ್, ಎಚ್.ಆರ್. ಅಶೋಕ್, ವಿವೇಕ್, ಕೆಂಪಬೋರಯ್ಯ, ಸತೀಶ್, ಭೀಮೇಶ್, ವಸಂತ್‌ಕುಮಾರ್, ಹನುಮಂತು, ನಿತ್ಯಾನಂದ, ಸಿದ್ದರಾಜುಗೌಡ, ಎಂ.ಬಿ. ರಮೇಶ, ಪ್ರಸನ್ನ, ಶಿವಕುಮಾರ್, ಮಹಂತಪ್ಪ, ಆನಂದ್ ಸೇರಿ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.