ಸಾರಾಂಶ
ಮಂಗಳೂರು : ಕೇಂದ್ರ ಸರ್ಕಾರದ ಗ್ರಾಮ ಸಡಕ್‌ಗೆ ಸರಿಸಾಟಿಯಾಗಿ ರಾಜ್ಯ ಸರ್ಕಾರದಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ‘ಪ್ರಗತಿ ಪಥ’ ಹಾಗೂ ‘ಕಲ್ಯಾಣ ಪಥ’ ಎಂಬ ಹೊಸ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ.
ಉತ್ತರ ಕರ್ನಾಟಕದಲ್ಲಿ ‘ಕಲ್ಯಾಣ ಪಥ’ ಹೆಸರಿನಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದ್ದು, ಮಾರ್ಚ್ 1 ರಂದು ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನೇತೃತ್ವದ ಗ್ರಾಮ ಸ್ವರಾಜ್ ಪ್ರತಿಷ್ಠಾನದಿಂದ ಮಂಗಳೂರು ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಶನಿವಾರ ಸ್ಥಳೀಯಾಡಳಿತ ಸಂಭ್ರಮ ‘ಹೊಂಬೆಳಕು-2025’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರದ ಗ್ರಾಮ ಸಡಕ್‌ಗಿಂತ ಉತ್ತಮವಾಗಿ ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಗಳು ಕಾರ್ಯನಿರ್ವಹಿಸಲಿವೆ. ಪ್ರಗತಿ ಪಥದಲ್ಲಿ ರಾಜ್ಯದ 7,110 ಕಿ.ಮೀ. ಗ್ರಾಮೀಣ ರಸ್ತೆಗಳನ್ನು 5,190 ಕೋಟಿ ರು. ವೆಚ್ಚದಲ್ಲಿ ಹಾಗೂ ಕಲ್ಯಾಣ ಪಥದಡಿ 1,150 ಕಿ.ಮೀ. ರಸ್ತೆಗಳನ್ನು 1 ಸಾವಿರ ಕೋಟಿ ರು.ಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಪ್ರಾಕೃತಿಕ ಹಾನಿಗೆ ಸಂಬಹಂಧಿಸಿ 189 ಅಸೆಂಬ್ಲಿ ಕ್ಷೇತ್ರಗಳಿಗೆ 1,890 ಕೋಟಿ ರು. ಬಿಡುಗಡೆಗೊಳಿಸಲಾಗಿದ್ದು, ಪ್ರತಿ ಕ್ಷೇತ್ರಕ್ಕೆ ತಲಾ 10 ಕೋಟಿ ರು. ಮಂಜೂರುಗೊಳಿಸಲಾಗಿದೆ. ಈಗಾಗಲೇ ಕಾಮಗಾರಿ ಶುರು ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಅರಿವು ಯೋಜನೆ:
ಅರಿವೇ ಗುರು, ಬಸವ ಹಾಗೂ ಬುದ್ಧ ತತ್ವದಡಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಅರಿವು ಕೇಂದ್ರಕ್ಕೆ 5,770 ಕೋಟಿ ರು. ನೀಡಲಾಗಿದ್ದು, ಇದರಡಿ 51 ಲಕ್ಷ ಬಡ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ಇದರಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಸ್ವಚ್ಛ ಭಾರತ ಯೋಜನೆಯಡಿ ಕರಾವಳಿ ಜಿಲ್ಲೆ ಉತ್ತಮ ಸ್ಥಾನ ಪಡೆದಿದೆ ಎಂದರು.
ಎಲ್ಲ ಜಿಲ್ಲೆಗಳಲ್ಲಿ ‘ಹೊಂಬೆಳಕು’:
ಸ್ಥಳೀಯಾಡಳಿತಗಳ ಕ್ರೀಡೆ ಹಾಗೂ ಸಂಸ್ಕೃತಿಯನ್ನು ಬೆಸೆಯುವ ಇಂತಹ ‘ಹೊಂಬೆಳಕು’ ಕಾರ್ಯಕ್ರಮಗಳನ್ನು ಎಲ್ಲ ಜಿಲ್ಲೆಗಳಲ್ಲಿ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ನಮ್ಮ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ಸೇರಿ ಈ ಬಗ್ಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದನ್ನು ಸರ್ಕಾರದ ಸಹಭಾಗಿತ್ವದಲ್ಲಿ ನಡೆಸುವ ಬಗ್ಗೆ ಗಂಭೀರ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.
ಇ-ಖಾತೆ ನೀಡಲು ಕ್ರಮ:
ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮಾತನಾಡಿ, ಸ್ಥಳೀಯಾಡಳಿತಗಳಲ್ಲಿ 40 ವರ್ಷಗಳಿಂದ ಇದ್ದ ಸಮಸ್ಯೆ ಹೋಗಲಾಡಿಸಿ ಇ-ಖಾತಾ ಬಿ-ಖಾತಾ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯವರ್ತಿಗಳು ಇಲ್ಲದೆ ಆಂದೋಲನ ಮಾದರಿಯಲ್ಲಿ ಇ ಖಾತೆ ನೀಡಲು ಸೂಚನೆ ನೀಡಲಾಗಿದೆ ಎಂದರು.
ಸರ್ಕಾರ ಪ್ರೋತ್ಸಾಹ ನೀಡಬೇಕು:
ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಪ್ರಾಸ್ತಾವಿಕ ಮಾತನಾಡಿ, 8,000 ಮಂದಿ ಚುನಾಯಿತ ಜನಪ್ರತಿನಿಧಿ ಹಾಗೂ ಸ್ಥಳೀಯ ಅಧಿಕಾರಿಗಳಲ್ಲಿ ಒಟ್ಟು 7,600 ನೋಂದಾಯಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಜಾಪಪದ ಕ್ರೀಡೆಗೆ ಅನುದಾನ ಮೀಸಲಿಟ್ಟು, ಇಂತಹ ಕ್ರೀಡಾಕೂಟಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸರ್ಕಾರದಿಂದ ನಡೆಯುವಂತೆ ಆಗ್ರಹಿಸಿದರು.ವೇದಿಕೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ರೈ, ಉಮಾನಾಥ ಕೋಟ್ಯಾನ್, ಐವನ್ ಡಿಸೋಜಾ, ಕಿಶೋರ್ ಕುಮಾರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ನರೇಂದ್ರ ಸ್ವಾಮಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನ್ಲಿ ಅಲ್ವಾರಿಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಇನಾಯತ್ ಫೌಂಡೇಶನ್‌ನ ಇನಾಯತ್ ಅಲಿ, ಬೆಸ್ಟ್ ಫೌಂಡೇಶನ್‌ನ ಅಧ್ಯಕ್ಷ ರಕ್ಷಿತ್ ಶಿವರಾಂ, ಗುರುಬೆಳದಿಂಗಳು ಫೌಂಡೇಶನ್‌ನ ಪದ್ಮರಾಜ್, ಜಿ.ಎ. ಬಾವ, ಗ್ಯಾರಂಟಿ ಅನುಷ್ಠಾನ ಸಮಿತಿ ದ.ಕ. ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಕಾಚಂನ್ ಹೋಂಡಾದ ಮಾಲೀಕ ಪ್ರಸಾದ್ ಕಾಂಚನ್, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮನಪಾ ಸದಸ್ಯ ವಿನಯ್ ರಾಜ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಮತ್ತಿತರರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸ್ವಾಗತಿಸಿದರು.
ಗ್ರಾಮೀಣ ಸೊಗಡಿನ ಪಥ ಸಂಚಲನ ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಸ್ಥಳೀಯಾಡಳಿತದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಕೂಡಿದ ಪಥ ಸಂಚಲನದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳದ ಕೋಣಗಳು, ಕೋಳಿ ಅಂಕ, ಹುಲಿ ವೇಷ, ಆಟಿ ಕಳಂಜದ ಜತೆಗೆ ಮಹಿಷಾಸುರ ಮರ್ಧಿನಿಯ ಟ್ಯಾಬ್ಲೋಗಳು ವಿಶೇಷ ಆಕರ್ಷಣೆ ನೀಡಿದವು.ಮಂಗಳೂರು ಮಹಾನಗರ ಪಾಲಿಕೆಯ ತಂಡದಿಂದ ನೃತ್ಯ, ಕೋಲಾಟ, ಪೂಜಾಕುಣಿತ, ವೀರಗಾಸೆ, ಹುಲಿಕುಣಿತ, ಮಹಿಷಾಸುರಮರ್ಧಿನಿ ಪ್ರಾತ್ಯಕ್ಷಿಕೆಯೊಂದಿಗೆ ವೈವಿಧ್ಯತೆಯನ್ನು ಪ್ರದರ್ಶಿಸುವ ಜತೆಗೆ ಪೌರ ಕಾರ್ಮಿಕರು ಪಥ ಸಂಚನಲದಲ್ಲಿ ಹೆಜ್ಜೆ ಹಾಕಿದರು. ಸಹ್ಯಾದ್ರಿ ಕಾಲೇಜಿನ ಹಿಂಬದಿಯ ನೇತ್ರಾವತಿ ನದಿಯ ತಟದಲ್ಲಿ ಪ್ರಾಕೃತಿಕ ರಮಣೀಯ ವಿಶಾಲವಾದ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.