ರೈತನ ಮಕ್ಕಳು ಕಟ್ಟಿಬೆಳೆಸಿದ ‘ರಾಮೇಶ್ವರಂ’ ಕೆಫೆ

| Published : Mar 04 2024, 01:15 AM IST

ಸಾರಾಂಶ

೨೦೧೨ ರಲ್ಲಿ ಶೇಷಾದ್ರಿಪುರನ ಪಾರ್ಕ್ ಬಳಿ ಮೂರು ಚಕ್ರ ಸೈಕಲ್ ಮೇಲೆ ಸಂಚಾರಿ ಹೋಟೆಲ್ ನಡೆಸುತ್ತಿದ್ದರು. ಬೇರೆ ಹೋಟೆಲ್‌ಗಳಲ್ಲೂ ಕೆಲಸ ಮಾಡಿದ್ದೆವು. ೨೦೧೪ ರಲ್ಲಿ ಗಾಂಧಿ ನಗರದಲ್ಲಿ ಇಡ್ಲಿ, ದೋಸಾ,ಕಾಫಿ(ಐಡಿಸಿ) ಹೋಟೆಲ್, ಬಳಿಕ ರಾಮೇಶ್ವರಂ ಕೆಫೆ ಸ್ಥಾಪನೆ

ಕನ್ನಡ ಪ್ರಭವಾರ್ತೆ,ಮಾಲೂರು

ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದ ‘ರಾಮೇಶ್ವರ ಕೆಫೆ’ಯ ಮಾಲೀಕ ಒಬ್ಬ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿಯ ರೈತರೊಬ್ಬರ ಪುತ್ರ.

ಹುಳದೇನಹಳ್ಳಿ ವಿಶ್ವನಾಥ ಅವರ ಎರಡನೇ ಮಗ ರಾಘವೇಂದ್ರ ರಾವ್‌ ‘ರಾಮೇಶ್ವರ ಕೆಫೆ’ ಹೋಟೆಲ್ ಗಳ ಸಂಸ್ಥೆಯ ಮಾಲೀಕ. ವಿಶ್ವನಾಥ್ ಅವರ ಮೂರು ಮಕ್ಕಳಲ್ಲಿ ಮೊದಲನೇ ಮಗ ಮೃತಪಟ್ಟಿದ್ದು, ಎರಡನೇ ಮಗ ರಾಘವೇಂದ್ರ ರಾವ್ ದಂಪತಿ ಹಾಗೂ ರಾಘವೇಂದ್ರ ಅವರ ಕಿರಿಯ ಸಹೋದರ ಸೂರ್ಯನಾರಾಯಣ ರಾವ್ ಸೇರಿ ರಾಮೇಶ್ವರ ಕೆಫೆ ಕಟ್ಟಿ ಬೆಳೆಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಸೂರ್ಯನಾರಾಯಣ ರಾವ್, ಹುಳದೇನಹಳ್ಳಿ ಗ್ರಾಮದ ವ್ಯವಸಾಯ ಕುಟುಂಬದಲ್ಲಿ ಹುಟ್ಟಿದ್ದ ನನ್ನ ಸಹೋದರ ರಾಘವೇಂದ್ರ ಎಂನಿಯರಿಂಗ್‌ ಪದವೀಧರ. ತಾವು ಸ್ವಗ್ರಾಮದಲ್ಲಿ ಪಂಚಾಯ್ತಿ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದು, ತಾವುಗಳು ಬೆಂಗಳೂರಿನಲ್ಲಿನಲ್ಲಿ ರಾಮೇಶ್ವರಂ ಹೋಟೆಲ್‌ನ ನಾಲ್ಕು ಬ್ರಾಂಚ್ ಗಳ ನಿರ್ವಹಣೆ ಮಾಡುತ್ತಿದ್ದೇವೆ ಎಂದರು.

ಡಾ.ಅಬ್ದುಲ್‌ ಕಲಾಂ ಸ್ಫೂರ್ತಿ

೨೦೧೨ ರಲ್ಲಿ ಶೇಷಾದ್ರಿಪುರನ ಪಾರ್ಕ್ ಬಳಿ ಮೂರು ಚಕ್ರ ಸೈಕಲ್ ಮೇಲೆ ಸಂಚಾರಿ ಹೋಟೆಲ್ ನಡೆಸುತ್ತಿದ್ದೆವು. ಬೇರೆ ಹೋಟೆಲ್‌ಗಳಲ್ಲೂ ಕೆಲಸ ಮಾಡಿದ್ದೆವು. ನಂತರ ೨೦೧೪ ರಲ್ಲಿ ಬೆಂಗಳುರಿನ ಗಾಂಧಿ ನಗರದಲ್ಲಿ ಇಡ್ಲಿ, ದೋಸಾ,ಕಾಫಿ(ಐಡಿಸಿ) ಹೋಟೆಲ್ ಪ್ರಾರಂಭಿಸಲಾಗಿತ್ತು. ಕೆಲಸ ಇಲ್ಲದಿದ್ದಾಗ ನಮ್ಮಗೆ ಸ್ಪೂರ್ತಿಯಾಗಿ ಬಂದವರೆ ನಮ್ಮ ನೆಚ್ಚಿನ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ. ಅವರ ಸ್ಫೂರ್ತಿದಾಯಕ ಮಾತುಗಳಿಂದ ಪ್ರೇರಿತ ರಾಗಿ ಅವರ ಸವಿ ನೆನಪಿಗಾಗಿ ಅವರ ಹುಟ್ಟೂರಾದ ರಾಮೇಶ್ವರ ಹೆಸರಿನಲ್ಲಿ ಇಂದಿರಾ ನಗರದಲ್ಲಿ ೨೦೨೧ ರಲ್ಲಿ ಕೆಫೆ ಪ್ರಾರಂಭ ಮಾಡಲಾಯಿತು ಎಂದರು.

ಅಂಬಾನಿ ಪುತ್ರನ ಮದುವೆಗೆ ಅಡುಗೆ

ಮೊದಲಿನಿಂದಲೂ ಕಷ್ಟವನ್ನೇ ಎದುರಿಸಿ ಬಂದಿರುವ ತಾವುಗಳು ಈ ಬ್ಲಾಸ್ಟ್ ಘಟನೆಯಿಂದ ಧೃತಿಗೆಡುವುದಿಲ್ಲ. ಶಿವರಾತ್ರಿ ದಿನದಂದು ಮತ್ತೇ ಅದ್ಧೂರಿಯಾಗಿ ಕೆಫೆ ಪ್ರಾರಂಭ ಮಾಡುತ್ತೇವೆ. ಅನಿಲ್ ಅಂಬಾನಿ ಅವರ ಮಗನ ನಿಶ್ವಿತಾರ್ಥ ಕಾರ್ಯಕ್ರಮಕ್ಕೆ ಸೌತ್ ಇಂಡಿಯಾ ಫುಡ್ ನಮ್ಮಿಂದ ವ್ಯವಸ್ಥೆ ಮಾಡಲಾಗಿದ್ದು, ಮುಂದೆ ಗುಜರಾತ್‌ನ ಜಾಮ್ ನಗರದಲ್ಲಿ ನಡೆಯಲಿರುವ ಮದುವೆಗೆ ಸಹ ನಮ್ಮ ರಾಮೇಶ್ವರ ಕೆಫೆಯ ಅಡುಗೆ ತಯಾರು ಮಾಡಿಕೊಡಲಿದ್ದೇವೆ ಎಂದರು.

ಜಾಮ್ ನಗರದಲ್ಲಿ ವ್ಯವಸ್ಥೆ ಮಾಡುತ್ತಿದ್ದ ರಾಘವೇಂದ್ರ ಅವರು ಸ್ಫೋಟದ ಸುದ್ದಿ ತಿಳಿದ ತಕ್ಷಣ ಬೆಂಗಳೂರಿಗೆ ಹಿಂತಿರುಗಿದ್ದು, ಸರ್ಕಾರ ಸೂಚಿಸಿರುವ ಎಲ್ಲ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ ಎಂದರು.