ಸಾರಾಂಶ
ಬೆಂಗಳೂರು : ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಮೂಡಿಸಲು ರಾಜ್ಯದ ಎಲ್ಲ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಮಕ್ಕಳಿಗೆ ‘ಓದುವ ಕೌಶಲ್ಯ’ ಅಭಿಯಾನವನ್ನು ಶಾಲಾ ಶಿಕ್ಷಣ ಇಲಾಖೆ ಮಂಗಳವಾರದಿಂದ ಆರಂಭಿಸಿದೆ.
1 ರಿಂದ 7ನೇ ತರಗತಿಯ ಮಕ್ಕಳಿಗೆ ಆರಂಭಿಸಿರುವ ಈ ಅಭಿಯಾನ ಸೆ.30ರವರೆಗೆ ನಡೆಯಲಿದೆ. ‘ಇಂದಿನ ಓದುಗರು ನಾಳಿನ ನಾಯಕರು’ ಎಂಬ ಹೇಳಿಕೆ ಉಲ್ಲೇಖಿಸಿ, ಮಕ್ಕಳಲ್ಲಿ ಓದುವ ಕೌಶಲ್ಯ ಹಾಗೂ ಹವ್ಯಾಸ ಬೆಳೆಸುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗುತ್ತದೆ. ಬಾಲ್ಯದಿಂದಲೇ ಓದಿನ ಸಂಸ್ಕೃತಿ ಮತ್ತು ಅಭ್ಯಾಸವನ್ನು ಬೆಳೆಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪ್ರಾಥಮಿಕ ತರಗತಿ ಮಕ್ಕಳ ವಯಸ್ಸಿಗೆ ಸೂಕ್ತವಾದ ಓದಿನ ಸಾಮಗ್ರಿಗಳು ಲಭ್ಯವಿಲ್ಲದಿದ್ದರೆ, ಕಥೆಯ ಚಟುವಟಿಕೆ ಮಾರ್ಗದರ್ಶಿಯನ್ನು ಬಳಸಬಹುದು. ಚಟುವಟಿಕೆಯನ್ನು ಪ್ರಾರ್ಥನಾ ಸಭೆ, ನಲಿಕಲಿ ತರಗತಿಯ ಮೊದಲನೆಯ ಅವಧಿ ಹಾಗೂ ಶಾಲಾ ಪಠ್ಯಕ್ರಮದಲ್ಲಿ ನಿಗದಿಪಡಿಸಿದ ಗ್ರಂಥಾಲಯದ ಅವಧಿಯಲ್ಲಿ ಮಾಡಬಹುದು. ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಲು, ಪ್ರೋತ್ಸಾಹಿಸಲು ಶಿಕ್ಷಣಾಧಿಕಾರಿ ಕೂಡ ಈ ಅವಧಿಯಲ್ಲಿ ಪುಸ್ತಕಗಳನ್ನು ಓದಬೇಕು. ಶಾಲೆಗಳಿಗೆ ಭೇಟಿ ನೀಡಿ ಈ ಅಭಿಯಾನ ನಡೆಯುತ್ತಿರುವ ಬಗ್ಗೆ ಪರಿಶೀಲಿಸಬೇಕೆಂದು ಶಿಕ್ಷಣ ಇಲಾಖೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.