ಸಂತ ಸೇವಾಲಾಲ್ ಪವಾಡ ಪುರುಷರು

| Published : Feb 17 2025, 12:30 AM IST

ಸಾರಾಂಶ

ಸಂತ ಸೇವಾಲಾಲ್ ಅವರು ದೈವ ಪುರುಷರು ಹಾಗೂ ಪವಾಡ ಪುರುಷರಾಗಿದ್ದಾರೆ, ಹಸಿದವರಿಗೆ ಊಟ ಕೊಡಿ ಬಾಯಾರಿದವರಿಗೆ ನೀರು ಕೊಡಿ. ಕ್ರೋಧ, ದ್ವೇಷ, ಅಸೂಯೆಗಳನ್ನ ದೂರ ಮಾಡಿ ಎಂದು ಇಡೀ ಸಮಾಜಕ್ಕೆ ಉತ್ತಮ ಸಂದೇಶ ಸಾರಿದವರಾಗಿದ್ದಾರೆ ಎಂದು ಪಶುವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ದೇವರಾಜ ನಾಯಕ್ ಎಚ್ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಸಂತ ಸೇವಾಲಾಲ್ ಅವರು ದೈವ ಪುರುಷರು ಹಾಗೂ ಪವಾಡ ಪುರುಷರಾಗಿದ್ದಾರೆ, ಹಸಿದವರಿಗೆ ಊಟ ಕೊಡಿ ಬಾಯಾರಿದವರಿಗೆ ನೀರು ಕೊಡಿ. ಕ್ರೋಧ, ದ್ವೇಷ, ಅಸೂಯೆಗಳನ್ನ ದೂರ ಮಾಡಿ ಎಂದು ಇಡೀ ಸಮಾಜಕ್ಕೆ ಉತ್ತಮ ಸಂದೇಶ ಸಾರಿದವರಾಗಿದ್ದಾರೆ ಎಂದು ಪಶುವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ದೇವರಾಜ ನಾಯಕ್ ಎಚ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯದವರಾದ ನಾವು ಹಿಂದೂ ರಾಜರ ಬಳಿ ನೂರಾರು ದಿನಗಳು ನಡೆಯುವಂತಹ ಯುದ್ಧಗಳಿಗೆ ಬೆನ್ನೆಲುಬಾಗಿ ನಿಂತು ದವಸ, ಧಾನ್ಯಗಳು, ಆಯುಧಗಳು, ಬಟ್ಟೆ ಇತ್ಯಾದಿಗಳನ್ನು ಸೈನಿಕರಿಗೆ ಒದಗಿಸುವಂತಹ ಕೆಲಸವನ್ನು ಮಾಡುತ್ತಿದ್ದೆವು. ಮಹಾರಾಜರು ಯುದ್ಧವನ್ನು ಗೆಲ್ಲಲು ಬಂಜಾರ ಸಮುದಾಯದವರು ಸಹಕಾರ ನೀಡುತ್ತಿದ್ದರು ಎಂದು ತಿಳಿಸಿದರು. ಗುಜರಾತ್, ರಾಜಸ್ಥಾನ, ಪುಣೆ, ಮಹಾರಾಷ್ಟ್ರ ಪೇಶ್ವೆಗಳು, ಹೈದರಾಬಾದಿನ ನಿಜಾಮರು, ಇವರೆಲ್ಲರಿಗೂ ಅಡ್ಡವಾಗಿ ನಿಂತು ಪ್ರತಿಯೊಂದು ಯುದ್ಧದಲ್ಲಿ ಅವರು ಸೋಲನ್ನು ಕಾಣಲು ಮುಖ್ಯ ಕಾರಣ ಬಂಜಾರ ಸಮುದಾಯದವರಾಗಿದ್ದೇವೆ, ಲಂಬಾಣಿ ಸಮುದಾಯದ ಸಾಂಸ್ಕೃತಿಕ ಉಡುಪುಗಳು, ನೃತ್ಯಗಳು ವಿಶೇಷವಾದವುಗಳಾಗಿವೆ ಎಂದು ಅವರು ಸೇವಾಲಾಲ್ ಅವರ ಬಗ್ಗೆ ಸವಿವರವಾಗಿ ಉಪನ್ಯಾಸ ನೀಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಚ್. ಎಲ್. ಮಲ್ಲೇಶಗೌಡ ಅವರು ಮಾತನಾಡಿ, ಸರ್ಕಾರದ ಉದ್ದೇಶ ಮಹನೀಯರ ಜಯಂತಿಗಳನ್ನು ಆಯಾ ಜಾತಿಯವರು ಮಾತ್ರವೇ ಆಚರಿಸಬೇಕೆಂಬುದು ಅಲ್ಲ, ಈ ನೆಲದ ಮೂಲ ಸತ್ವ , ಮೂಲ ಸಂಸ್ಕೃತಿ, ಸಂಸ್ಕಾರವನ್ನ ಇನ್ನು ಸುಧೀರ್ಘವಾಗಿ ಮುಂದಕ್ಕೆ ಕೊಂಡಯ್ಯಬೇಕೆಂದರೆ ಸೇವಾಲಾಲ್‌ರಂತಹ ಮಹನೀಯರ ಜಯಂತಿಗಳನ್ನು ಸಮುದಾಯದ ಹಾಗೂ ನಾಡಿನ ಎಲ್ಲ ಜನಾಂಗದವರು ಒಟ್ಟುಗೂಡಿ ಆಚರಿಸಬೇಕು ಎಂದರು.

ಸಂಸ್ಕಾರ ಸಾಮರಸ್ಯ ಕೊಡಬೇಕಾಗಿದ್ದಂತಹ ಶಿಕ್ಷಣ ಒಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕಾಗಿದ್ದಂತಹ ನಾಗರೀಕತೆ ನಮ್ಮನ್ನು ಕುಬ್ಜರನ್ನಾಗಿ ಮಾಡುತ್ತಿದೆ. ಇಂದು ಜಾತೀಯತೆಯನ್ನು ತೊಡೆದು ಹಾಕುವ ಭರದಲ್ಲಿ ಜಾತೀಯತೆಯನ್ನು ಹೆಚ್ಚು ಬಿತ್ತುತ್ತಿದ್ದೇವೆ ಅನ್ನಿಸುತ್ತಿದೆ, ಹಾಗಾಗಿ ಮಹಾನುಭಾವರು ಹೇಳಿರುವಂತಹ ಅವರ ತತ್ವಗಳು ಆದರ್ಶಗಳು ಆಚರಣೆಗೆ ಬರಬೇಕು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ.ಪಿ ಕೃಷ್ಣಗೌಡ ಅವರು ಮಾತನಾಡಿ, ಸೇವಾಲಾಲ್ ಅವರು ಕೇವಲ ಒಂದು ಜಾತಿಗೆ ಮೀಸಲಾದವರಲ್ಲ, ಅವರ ಕೊಡುಗೆಗಳು, ಮಾರ್ಗದರ್ಶನಗಳನ್ನು ಎಲ್ಲ ಜನಾಂಗಕ್ಕೆ ನೀಡಿದ್ದಾರೆ, ಹಾಗಾಗಿ ಇಂತಹ ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಅವರ ಕಾರ್ಯಗಳನ್ನು ಸ್ಮರಿಸಬೇಕು ಎಂದು ಹೇಳಿದರು.ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ(ವಿಭಜಿತ) ಉಪ ಪ್ರಾಂಶುಪಾಲರಾದ ಕುಮಾರ್ ನಾಯಕ್ ರಚಿಸಿರುವ ಶ್ರೀ ಸಂತ ಸೇವಾಲಾಲ್ ಎಂಬ ಶೀರ್ಷಿಕೆಯ ಲಂಬಾಣಿ ಭಾಷೆಯ ಪದಗಳು ಆ ಪದಗಳಿಗೆ ಕನ್ನಡ, ಇಂಗ್ಲೀಷ್‌ ಭಾಷೆಯಲ್ಲಿ ಇರುವ ಅರ್ಥಗಳ ಒಳಗೊಂಡಿರುವ ಶಬ್ಧಕೋಶವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಚ್.ಪಿ ತಾರಾನಾಥ್, ಶಿರಸ್ತೇದಾರ್‌ ಯಶೋಧರ, ಮತ್ತಿತರರು ಉಪಸ್ಥಿತರಿದ್ದರು.

=============

ಫೋಟೋ: ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.