ಪ್ರೊ.ರೂಪೇಶ್ ಪುತ್ತೂರು ಸರ್ಕಾರಿ ಶಾಲೆಗೆ ಭೇಟಿ, ಮಕ್ಕಳೊಂದಿಗೆ ಊಟಕನ್ನಡಪ್ರಭ ವಾರ್ತೆ ಹಿರಿಯೂರು

ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡದ ಮಕ್ಕಳಿಗೆ ಶೇ.80ರಷ್ಟು ಉದ್ಯೋಗ ನೀಡಿ ಎಂದು ಬೀದರ್‌ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುತ್ತಿರುವ ಪ್ರೊ.ರೂಪೇಶ್ ಪುತ್ತೂರುರವರು ಸೋಮವಾರ ಹಿರಿಯೂರು ತಲುಪಿದ್ದು ವೇದಾವತಿ ನಗರದ ವಿದ್ಯುತ್ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳ ಜೊತೆಗೆ ಬಿಸಿಯೂಟ ಸವಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂಬ ಉದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದೇನೆ. ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಾ ಬಂದರೆ ಮಕ್ಕಳು 5-10 ಕಿಮೀ ದೂರ ಹೋಗಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಬರುತ್ತದೆ. ಸರ್ಕಾರಿ ಶಾಲೆ ಮುಚ್ಚಿದರೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೊಡೆತ ಬೀಳುತ್ತದೆ. ಇತ್ತೀಚಿಗೆ ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದು ಶಿಕ್ಷಕರಿಗೆ ಪಾಠ ಮಾಡಲು ಸಮಯವೇ ಇಲ್ಲ ಎಂಬಂತಾಗಿದೆ. ಈಗಾಗಲೇ ಸುಮಾರು 800 ಕಿಮೀ ನಡೆದಿದ್ದು ಬೆಂಗಳೂರು ತಲುಪುವ ಹೊತ್ತಿಗೆ ಇನ್ನೂ 200 ಕಿಮೀ ಆಗಬಹುದು. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಕಾರ್ಖಾನೆಗಳಲ್ಲಿ, ಕಂಪನಿಗಳಲ್ಲಿ ಶೇ.80ರಷ್ಟು ಉದ್ಯೋಗ ಕನ್ನಡಿಗರಿಗೆ ಸಿಗಬೇಕು. ನಮ್ಮ ಭಾಷೆ ಸಂಸ್ಕೃತಿ ಬಗ್ಗೆ ಇಂದಿನ ಮಕ್ಕಳಿಗೆ ಅರಿವೇ ಇಲ್ಲದಂತಾಗಿರುವುದು ದುರಂತ ಎಂದರು.

ಈ ವೇಳೆ ಕರವೇ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಗೌರವಾಧ್ಯಕ್ಷಗೋ ಬಸವರಾಜ್, ಪ್ರಧಾನ ಕಾರ್ಯದರ್ಶಿ ಡಿಕೆಎಸ್ ದಾದಾಪೀರ್, ನಗರಾಧ್ಯಕ್ಷ ಮೊಹಮ್ಮದ್ ಜಾಕಿರ್, ನಗರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸುಹೇಲ್, ಭಾಷಾ, ಬಾಬು, ತಿಪ್ಪೇಸ್ವಾಮಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಆರ್.ಟಿ.ಪರಮೇಶ್ವರಪ್ಪ, ಹನುಮಂತ, ರಫಿ ಮುಂತಾದವರು ಹಾಜರಿದ್ದರು.