ಮಹಿಳಾ ಶಿಕ್ಷಣಕ್ಕೆ ಬುನಾದಿ ಹಾಕಿದ ಸಾವಿತ್ರಿ ಭಾಯಿ ಫುಲೆ

| Published : Jan 04 2025, 12:31 AM IST

ಸಾರಾಂಶ

ಭಾರತದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಹಾಗೂ ಅಸ್ಪೃಶ್ಯರು ಶಿಕ್ಷಣದಿಂದ ನಿರಾಕರಿಸಲ್ಪಟ್ಟಿದ್ದ ಕಾಲಘಟ್ಟದಲ್ಲಿ ತನ್ನ ಪತಿಯಿಂದಲೇ ಅಕ್ಷರ ಕಲಿತು ನಂತರ ದೇಶದ ಶಿಕ್ಷಣ ವಂಚಿತ ಮಹಿಳೆಯರಿಗೆ ಅಕ್ಷರ ಕಲಿಸಿದ ಮಾತೆ ಸಾವಿತ್ರಿಬಾಯಿ ಫುಲೆ ಅವರನ್ನು ದೇಶದ ಪ್ರತಿಯೊಬ್ಬ ಮಹಿಳೆಯೂ ಮರೆಯುವಂತಿಲ್ಲ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ದೇಶದ ಸಮಸ್ತ ಮಹಿಳಾ ಕುಲ ಶಿಕ್ಷಣಮಾತೆ ಸಾವಿತ್ರಿ ಭಾಯಿ ಪುಲೆಯವರನ್ನು ಸ್ಮರಿಸುವಂತಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಸಿ.ವಿ.ನಾಗರಾಜ್ ಹೇಳಿದರು. ಪಟ್ಟಣದ ಕನಕಭವನದಲ್ಲಿ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ದೇಶದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ 94ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಶಿಕ್ಷಣಕ್ಕಾಗಿ ಹೋರಾಟ

ಭಾರತದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಹಾಗೂ ಅಸ್ಪೃಶ್ಯರು ಶಿಕ್ಷಣದಿಂದ ನಿರಾಕರಿಸಲ್ಪಟ್ಟಿದ್ದ ಕಾಲಘಟ್ಟದಲ್ಲಿ ತನ್ನ ಪತಿಯಿಂದಲೇ ಅಕ್ಷರ ಕಲಿತು ನಂತರ ದೇಶದ ಶಿಕ್ಷಣ ವಂಚಿತ ಮಹಿಳೆಯರಿಗೆ ಅಕ್ಷರ ಕಲಿಸಿದ ಮಾತೆ ಸಾವಿತ್ರಿಬಾಯಿ ಫುಲೆ ಅವರನ್ನು ದೇಶದ ಪ್ರತಿಯೊಬ್ಬ ಮಹಿಳೆಯೂ ಮರೆಯುವಂತಿಲ್ಲ ಎಂದು ಹೇಳಿದರು.

ಇಂದಿನ ಜಾಗತೀಕರಣ ಸಂದರ್ಭದಲ್ಲಿ ಕೌಟುಂಬಿಕ ಬದುಕಿನ ನಿರ್ವಹಣೆಗೆ ಹೆಣ್ಣು-ಗಂಡು ಇಬ್ಬರೂ ದುಡಿಯಬೇಕಾಗಿದೆ, ಈ ಸವಾಲಿಗೆ ಸೆಡ್ಡು ಹೊಡೆದು ನಿಂತಿರುವ ಮಹಿಳೆಯರ ಧೈರ್ಯ ಮತ್ತು ಸಾಧನೆಯ ಹಿಂದೆ ಮಾತೇ ಸಾವಿತ್ರಿಬಾಯಿ ಫುಲೆ ಕೊಡುಗೆ ಅಡಗಿದೆ ಎನ್ನುವುದನ್ನು ಯಾವ ಪುರಷನೂ ಮರೆಯಬಾರದು. ಕುಟುಂಬದಲ್ಲಿ ಮಹಿಳೆ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದು ಸಂಸಾರದಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಕಾರಣದಿಂದಾಗಿ ಪುರುಷ ತನ್ನ ಜೀವನದ ನೊಗ ಎಳೆಯಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.18 ಶಾಲೆಗಳನ್ನು ಸ್ಥಾಪಿಸಿದ ಫುಲೆ

ಸ್ವಂತ ಹಣದಲ್ಲಿ 18ಕ್ಕೂ ಹೆಚ್ಚು ಶಾಲೆ ತೆರೆದು ಶಿಕ್ಷಣ ನೀಡಿದರಲ್ಲದೆ ಬಾಲ್ಯ ವಿವಾಹ, ಕೇಶ ಮುಂಡನೆ, ಸತೀ ಸಹಗಮನ ಪದ್ಧತಿ ವಿರುದ್ಧ ಸಿಡಿದೆದ್ದು ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆ ಬ್ರಿಟಿಷರಿಂದ "ಫಸ್ಟ್ ಲೇಡಿ ಟೀಚರ್ ಆಫ್ ಇಂಡಿಯಾ " ಎಂಬ ಬಿರುದು ಪಡೆದು ಭಾರತದ ಸಮಸ್ತ ಮಹಿಳಾ ಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.

ದಸಂಸ ಹಿರಿಯ ಮುಖಂಡ ಹೂವರಸನಹಳ್ಳಿ ರಾಜಪ್ಪ, ತಾಲ್ಲೂಕು ಸಂಚಾಲಕ ಹಿರೇಕರಪನಹಳ್ಳಿ ರಾಮಪ್ಪ, ಮಹಿಳಾ ಮುಖಂಡರಾದ ಪಿ.ಮಾಲತಿ, ಸಿ.ಜೆ.ನಾಗರಾಜ್, ಕವಿತ, ಸಿದ್ದನಹಳ್ಳಿ ಯಲ್ಲಪ್ಪ, ಮಾರುತಿಪ್ರಸಾದ್, ಮದುಸೂಧನ್, ವಿಜಿಯಲಕ್ಣ್ಮಿ, ಕತ್ತಿಹಳ್ಳಿ ಪ್ರತಿಭಾ, ಸುಕನ್ಯ, ಕೋಲಾರ ಮಂಜುಳ, ಹರಟಿ ಚಂದ್ರಪ್ಪ, ಅಶ್ವಿನಿ, ಮೀನಾಕ್ಷಿ, ಎಂ.ವಿಜಯಕುಮಾರ್, ಹುಕ್ಕುಂದ ಮಂಜುನಾಥ್, ಅಸ್ಗರ್, ಪಾಲ್‌ರಾಜ್, ಮುತ್ತುಮಾರಿ, ಅಲ್ಲಾಬಕಾಶ್, ರಾಜಾ ಇತರರಿದ್ದರು.