ಸಾರಾಂಶ
ತಪ್ಪಿದ ದುರಂತ । ಸೇತುವೆ ನಿರ್ಮಿಸಲು ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ ಮಂಡ್ಯಖಾಸಗಿ ಶಾಲೆಯ ಬಸ್ ರಸ್ತೆ ಬದಿಯ ಹಳ್ಳಕ್ಕೆ ಕುಸಿದಿದ್ದು, ಅದೃಷ್ಟವಶಾತ್ ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಕಾವೇರಿ ಪಬ್ಲಿಕ್ ಶಾಲಾ ಬಸ್ ಎಂದಿನಂತೆ ಬೆಳಗ್ಗೆ 9.30ರ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ರಾಗಿಮುದ್ದನಹಳ್ಳಿ ಗ್ರಾಮದ ಮೂಲಕ ಮಕ್ಕಳನ್ನು ಬಸ್‌ಗೆ ಹತ್ತಿಸಿಕೊಂಡು ಸಾಗಿದೆ. ಗ್ರಾಮದಿಂದ ಅಣತಿ ದೂರದಲ್ಲಿ ಬಸ್ ತೆರಳುವ ಮಾರ್ಗ ಮಧ್ಯೆ ದೊಡ್ಡ ಹಳ್ಳವಿದೆ, ಆ ಹಳ್ಳದ ರಸ್ತೆಯ ಮಧ್ಯೆ ಪೈಪ್‌ಗಳನ್ನು ಹಾಕಿ ಮಣ್ಣಿನಿಂದ ಮುಚ್ಚಲಾಗಿತ್ತು. ಈ ಹಳ್ಳದ ಬಳಿ ಬಸ್ ಸಂಚರಿಸಿದಾಗ ಪೈಪ್ ಪಕ್ಕದಲ್ಲಿದ್ದ ಚಪ್ಪಡಿ ಕಲ್ಲು ಸಮೇತ ಬಸ್ ಹಿಂಬದಿ ಚಕ್ರ ಸಿಲುಕಿ ವಾಲಿಕೊಂಡಿದೆ. ಬಸ್ ವಾಲಿಕೊಂಡ ರಭಸಕ್ಕೆ ಬಸ್‌ನಲ್ಲಿದ್ದ ಮಕ್ಕಳು ಚೀರಾಡಿದ್ದಾರೆ. ಈ ವೇಳೆ ಚಾಲಕ ಕೃಷ್ಣ ಅವರು ಸಮಯ ಪ್ರಜ್ಞೆ ಮೆರೆದು ತಕ್ಷಣವೇ ಬಸ್ ನಿಲ್ಲಿಸಿದ್ದಾರೆ. ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಸಮೇತ ಮಕ್ಕಳನ್ನು ಹೊರಗಡೆ ಸುರಕ್ಷಿತವಾಗಿ ಇಳಿಸಿದ್ದಾರೆ. ಅವಘಡ ಸಂಭವಿಸಿದ ವಿಷಯ ತಿಳಿದ ಆತಂಕಗೊಂಡ ಪೋಷಕರು ಸ್ಥಳಕ್ಕೆ ತೆರಳಿದಾಗ ತಮ್ಮ ಮಕ್ಕಳು ಸುರಕ್ಷಿತವಾಗಿರುವುದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಗ್ರಾಮದ ಹಳ್ಳದ ರಸ್ತೆಗೆ ಹಿಂದಿನಿಂದಲೂ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಲೇ ಬಂದಿದ್ದಾರೆ, ಮಳೆಗಾಲದಲ್ಲೂ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಹೋಗುವ ದುಃಸ್ಥಿತಿ ಇದೆ. ಸೇತುವೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಜನಪ್ರತಿನಿಧಿಗಳಿಗೆ ವಿಷಯ ತಿಳಿಸಿದರೂ ಕ್ರಮವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಹಳ್ಳದ ರಸ್ತೆಯಲ್ಲಿ ಒಂದು ಸೇತುವೆ ನಿರ್ಮಿಸುವಂತೆ ಕಳೆದ ಎರಡೂವರೆ ವರ್ಷಗಳಿಂದಲೂ ಒತ್ತಾಯ ಮಾಡುತ್ತಿದ್ದು, ಜೊತೆಗೆ ಜಿಲ್ಲೆಯಲ್ಲಿ ನಾಲಾ ರಸ್ತೆಯಲ್ಲಿ ತಡೆಗೋಡೆ ನಿರ್ಮಿಸದ ಕಾರಣ ಹಲವು ಅಪಘಾತಗಳು ಜರುಗಿ ಸಾವು-ನೋವು ಸಂಭವಿಸಿವೆ. ಗ್ರಾಮದಲ್ಲಿರುವ ಪ್ರಮುಖ ರಸ್ತೆಗಳಲ್ಲಿನ ಹಳ್ಳದ ನಡುವೆ ಒಂದು ಸೇತುವೆ ನಿರ್ಮಿಸಿಕೊಟ್ಟರೆ ಇಂತಹ ಅವಘಡಗಳು ಸಂಭವಿಸುವುದಿಲ್ಲ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.