ಕಾಡಾನೆಗಳ ಪುನರ್ವಸತಿಗೆ ‘ಸಾಫ್ಟ್ ಏರಿಯಾ ರಿಲೀಸ್’ ಯೋಜನೆ

| Published : Feb 18 2025, 12:31 AM IST

ಕಾಡಾನೆಗಳ ಪುನರ್ವಸತಿಗೆ ‘ಸಾಫ್ಟ್ ಏರಿಯಾ ರಿಲೀಸ್’ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಹಾನಿಯನ್ನು ಉಂಟು ಮಾಡುತ್ತ ಜೀವ ಹಾನಿಗೆ ಕಾರಣವಾಗುತ್ತಿರುವ ಕಾಡಾನೆಗಳನ್ನು ಗುರುತಿಸಿ ಪುನರ್ವಸತಿಗೆ ಒಳಪಡಿಸುವ ‘ಸಾಫ್ಟ್ ಏರಿಯಾ ರಿಲೀಸ್’ ಯೋಜನೆಯ ಅನುಷ್ಟಾನಕ್ಕೆ ೨ ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಲು ರಾಜ್ಯ ಸರ್ಕಾರ ಅನುಮೋದನೆಯನ್ನು ನೀಡಿರುವುದಾಗಿ ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಕಾಡಾನೆ- ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ । ಸರ್ಕಾರದ ಅನುಮೋದನೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಹಾನಿಯನ್ನು ಉಂಟು ಮಾಡುತ್ತ ಜೀವ ಹಾನಿಗೆ ಕಾರಣವಾಗುತ್ತಿರುವ ಕಾಡಾನೆಗಳನ್ನು ಗುರುತಿಸಿ ಪುನರ್ವಸತಿಗೆ ಒಳಪಡಿಸುವ ‘ಸಾಫ್ಟ್ ಏರಿಯಾ ರಿಲೀಸ್’ ಯೋಜನೆಯ ಅನುಷ್ಟಾನಕ್ಕೆ ೨ ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಲು ರಾಜ್ಯ ಸರ್ಕಾರ ಅನುಮೋದನೆಯನ್ನು ನೀಡಿರುವುದಾಗಿ ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೩ ದಶಕಗಳಿಂದ ಜಿಲ್ಲಾದ್ಯಂತ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಇವುಗಳ ನಿಯಂತ್ರಣಕ್ಕಾಗಿ ಕಳೆದ ತಿಂಗಳು ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಜಿಲ್ಲೆಯ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ಉಪಸ್ಥಿತಿಯಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ, ಉಪಟಳ ನೀಡುವ ಕಾಡಾನೆಗಳನ್ನು ಸ್ಥಳಾಂತರಿಸುವ ಸಾಫ್ಟ್ ರಿಲೀಸ್ ಏರಿಯಾಕ್ಕೆ ಅಗತ್ಯವಾದ ಜಾಗವನ್ನು ಗುರುತಿಸಲು ಸರ್ಕಾರ ಸಮ್ಮತಿಯನ್ನು ನೀಡಿರುವುದಾಗಿ ಸ್ಪಷ್ಟಪಡಿಸಿದರು.

ಗುರುತು ಮಾಡಿದ ಪುಂಡಾನೆಗಳ ಸ್ಥಳಾಂತರಕ್ಕೆ ಗುರುತಿಸುವ ಪ್ರದೇಶ ಅರಣ್ಯ ಪ್ರದೇಶವೇ ಆಗಿರಬಹುದು. ಆದರೆ, ಒಮ್ಮೆ ಜಾಗ ಗುರುತಿಸಲ್ಪಟ್ಟ ಬಳಿಕ ಒಟ್ಟು ಪ್ರದೇಶದ ಸುತ್ತ ಕಾಡಾನೆಗಳು ಮರಳಿ ಬಾರದಂತೆ ಅಗತ್ಯ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಂಕೇತ್ ಪೂವಯ್ಯ ತಿಳಿಸಿದರು.೨೧ ಕೋಟಿ ರು. ಬಿಡುಗಡೆ:

ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯ ಯಾವೆಲ್ಲ ವಿಭಾಗಗಳಲ್ಲಿ ಕಂದಕಗಳು ಮತ್ತು ರೈಲ್ವೆ ಹಳಿಯ ಬೇಲಿಗಳಿವೆಯೋ, ಅಲ್ಲಿ ಹಾಳಾದ ಭಾಗಗಳನ್ನು ಗುರುತಿಸಿ ದುರಸ್ತಿ ಪಡಿಸುವ ಕೆಲಸ ಕಾರ್ಯಗಳಿಗೆ ಸರ್ಕಾರ ೨೧ ಕೋಟಿ ರು. ನೆರವನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಕಾಡಾನೆಗಳ ಗಂಭೀರ ಆತಂಕವನ್ನು ಎದುರಿಸುತ್ತಿರುವ ಪಂಚಾಯಿತಿ ವ್ಯಾಪ್ತಿಯ ಕಂದಕಗಳ ದುರಸ್ತಿ, ರೈಲ್ವೆ ಹಳಿ ಬೇಲಿಗಳ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.

ಸರ್ಕಾರದಿಂದ ಲಭ್ಯ ಅನುದಾನದ ಮೂಲಕ ಯಾವೆಲ್ಲ ಭಾಗಗಳಲ್ಲಿ ಕಂದಕಗಳು, ರೈಲ್ವೆ ಹಳಿಯ ಬೇಲಿ ಮೊದಲಾದ ಕಾಮಗಾರಿಗಳು ನಡೆಯಬೇಕೆನ್ನುವ ಬಗ್ಗೆ ಸಮಗ್ರ ವರದಿಯನ್ನು ಶಾಸಕ ಪೊನ್ನಣ್ಣ ಕೇಳಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಮುಂದಿಟ್ಟುಕೊಂಡು ಇದೇ ಫೆ.೨೨ರಂದು ಅರಣ್ಯಾಧಿಕಾರಿಗಳೊಂದಿಗೆ ಶಾಸಕರು ಚರ್ಚಿಸಿ, ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಕೊಡಗಿನಲ್ಲಿ ೨ ಸಾವಿರ ಆನೆ:

ಕರ್ನಾಟಕದಲ್ಲಿ ಇರುವ ಒಟ್ಟು ೬೩೯೫ ಆನೆಗಳಲ್ಲಿ ಸುಮಾರು ೨ ಸಾವಿರ ಆನೆಗಳು ಕೊಡಗು ಜಿಲ್ಲೆಯೊಂದರಲ್ಲೇ ಇವೆ. ಇದರಲ್ಲಿ ಸುಮಾರು ೧೮೦ರಿಂದ ೨೦೦ ಆನೆಗಳು ಕಾಫಿ ತೋಟಗಳನ್ನೆ ತಮ್ಮ ಆವಾಸ ಸ್ಥಾನವಾಗಿಸಿಕೊಂಡಿರುವುದಾಗಿ ಸಂಕೇತ್ ಪೂವಯ್ಯ ಮಾಹಿತಿ ನೀಡಿದರು.

ತೋಟಗಳಲ್ಲಿ ನೆಲೆ ನಿಂತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರೂ ಮರಳಿ ಅವುಗಳು ಕಾಫಿ ತೋಟಗಳಿಗೆ ಬರುತ್ತಿರುವ ಗಂಭೀರ ಸಮಸ್ಯೆ ನಮ್ಮ ಮುಂದಿದೆ. ಇವೆಲ್ಲವುಗಳಿಗೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಸಾಫ್ಟ್ ರಿಲೀಸ್ ಏರಿಯಾ ಗುರುತು ಹಚ್ಚುವುದಕ್ಕೆ ಅವಕಾಶ ಕಲ್ಪಿಸುವ ಹಾಗೂ ಅಗತ್ಯ ಅನುದಾನ ಒದಗಿಸುವ ಕಾರ್ಯ ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.ನಾಗರಹೊಳೆಯಲ್ಲಿ ೧೩೫ ಹುಲಿ:

ಮಧ್ಯ ಪ್ರದೇಶವನ್ನು ಹೊರತುಪಡಿಸಿದರೆ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ೫೬೩ ಹುಲಿಗಳಿದ್ದು, ಇದರಲ್ಲಿ ೧೩೫ ಹುಲಿಗಳು ಕೊಡಗಿನ ನಾಗರಹೊಳೆ ವ್ಯಾಪ್ತಿಯಲ್ಲಿದೆ. ಕಾಡಾನೆಗಳೊಂದಿಗೆ ಹುಲಿ ಹಾವಳಿ, ಕಾಡು ಹಂದಿ, ಮಂಗಗಳ ಉಪಟಳ ಸೇರಿದಂತೆ ವಿವಿಧ ವನ್ಯ ಜೀವಿಗಳಿಂದ ಜಿಲ್ಲೆ ಸಂಕಷ್ಟಕ್ಕೆ ಸಿಲುಕಿದ್ದು, ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಸಮಸ್ಯೆ ಸೃಷ್ಟಿಸುವ ಹುಲಿಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆ ನಿಗಾ ಇಡುವ ನಿಟ್ಟಿನ ಪ್ರಯತ್ನಗಳು ನಡೆದಿರುವುದಾಗಿ ಹೇಳಿದರು.

೧೨೦ ಕಿ.ಮೀ. ರೈಲ್ವೆ ಬ್ಯಾರಿಕೇಡ್:

ದಕ್ಷಿಣ ಕೊಡಗಿನ ಬ್ರಹ್ಮಗಿರಿ, ನಾಗರಹೊಳೆ ಹಾಗೂ ಪುಷ್ಪಗಿರಿ ಅರಣ್ಯದ ಅಂಚಿನ ೧೨೦ ಕಿ.ಮೀ. ಉದ್ದಕ್ಕೆ ರೈಲ್ವೆ ಹಳಿಗಳ ಬೇಲಿ ನಿರ್ಮಾಣದ ಕಾಮಗಾರಿ ನಡೆಸುವ ಅಗತ್ಯವಿದೆ. ರಾಜ್ಯದಲ್ಲಿ ಒಟ್ಟಾಗಿ ೩೫೦ ಕಿ.ಮೀ. ನಷ್ಟು ರೈಲ್ವೆ ಹಳಿಯ ಬೇಲಿ ನಿರ್ಮಾಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ‍್ರ ಸರ್ಕಾರಕ್ಕೆ ಹಳೆಯ ಮತ್ತು ನಿರುಪಯುಕ್ತ ರೈಲ್ವೆ ಹಳಿಗಳನ್ನು ಒದಗಿಸುವಂತೆ ಕೋರಲಾಗುತ್ತದೆಂದು ಸಂಕೇತ್ ಪೂವಯ್ಯ ತಿಳಿಸಿದರು.