ಜಿಲ್ಲೇಲಿ ಹೆಚ್ಚುತ್ತಿರುವ ಡೆಂಘೀ ಜ್ವರ ನಿಯಂತ್ರಿಸಲು ಕ್ರಮವಹಿಸಿ: ಸಿಇಒ

| Published : Jul 06 2024, 12:52 AM IST

ಜಿಲ್ಲೇಲಿ ಹೆಚ್ಚುತ್ತಿರುವ ಡೆಂಘೀ ಜ್ವರ ನಿಯಂತ್ರಿಸಲು ಕ್ರಮವಹಿಸಿ: ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ನಲ್ಲಿ, ಪೈಪುಗಳಲ್ಲಿ ನೀರು ಸೋರದಂತೆ ನೋಡಿಕೊಳ್ಳಿ. ಕೊಳವೆ ಬಾವಿಗಳು ಹಾಗೂ ನಲ್ಲಿ ಪೈಪುಗಳು ಒಳಚರಂಡಿ ಜಾಗದಿಂದ ದೂರದಲ್ಲಿರುವಂತೆ ನಿರ್ಮಿಸಬೇಕು, ಮೇಲ್ಟಾವಣಿಯ ತೊಟ್ಟಿಗಳು ಹಾಗೂ ನೀರು ಸರಬಾರಾಜು ಮಾಡುವ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚುವ ವ್ಯವಸ್ಥೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಘೀ ರೋಗ ಪ್ರಕರಣಗಳನ್ನು ನಿಯಂತ್ರಣ ಮಾಡಲು ಅಧಿಕಾರಿಗಳು ಅಗತ್ಯವಾಗಿ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು, ತಾಪಂ ಇಒಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಡೆಂಘೀ ನಿಯಂತ್ರಣ ಕುರಿತು ವೀಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 189 ಡೆಂಘೀ ಪ್ರಕರಣಗಳು ದಾಖಲಾಗಿವೆ. ಮಂಡ್ಯ - 89 , ಮದ್ದೂರು - 34 , ಮಳವಳ್ಳಿ -14, ಪಾಂಡವಪುರ - 18, ಶ್ರೀರಂಗಪಟ್ಟಣ - 16, ಕೆ. ಆರ್. ಪೇಟೆ - 9, ನಾಗಮಂಗಲ ತಾಲೂಕಿನಲ್ಲಿ - 9 ಪ್ರಕರಣಗಳು ದಾಖಲಾಗಿವೆ. ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ಮಾಡುವ ವಾಹನದಲ್ಲಿ ದಿನವು ಡೆಂಘೀ ನಿಯಂತ್ರಣದ ಬಗ್ಗೆ ನೀಡಿರುವ ಆಡಿಯೋ ತುಣುಕುಗಳನ್ನು ಪ್ರಸಾರ ಪಡಿಸುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಗುಂಡಿಗಳು ಹಾಗೂ ತಗ್ಗುಗಳನ್ನು ಮುಚ್ಚಿಸಿ ನೀರು ಸಂಗ್ರಹವಾಗದಂತೆ ತಡೆಗಟ್ಟಬೇಕು ಮತ್ತು ಸಾರ್ವಜನಿಕ ನಲ್ಲಿಗಳು ಹಾಗೂ ಕೊಳವೆ ಬಾವಿಗಳಿಂದ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆ ಮಾಡುವುದು, ಚರಂಡಿಗಳಲ್ಲಿ ಹುದುಗಿರುವ ಹೂಳನ್ನು ಎತ್ತಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ತಿಳಿಸಿದರು.

ನಲ್ಲಿ, ಪೈಪುಗಳಲ್ಲಿ ನೀರು ಸೋರದಂತೆ ನೋಡಿಕೊಳ್ಳಿ. ಕೊಳವೆ ಬಾವಿಗಳು ಹಾಗೂ ನಲ್ಲಿ ಪೈಪುಗಳು ಒಳಚರಂಡಿ ಜಾಗದಿಂದ ದೂರದಲ್ಲಿರುವಂತೆ ನಿರ್ಮಿಸಬೇಕು, ಮೇಲ್ಟಾವಣಿಯ ತೊಟ್ಟಿಗಳು ಹಾಗೂ ನೀರು ಸರಬಾರಾಜು ಮಾಡುವ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚುವ ವ್ಯವಸ್ಥೆ ಮಾಡಬೇಕು ಎಂದರು.

ಆರೋಗ್ಯ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದು ಗ್ರಾಮದ ನೈರ್ಮಲ್ಯತೆ ಹಾಗೂ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿ ಹಾಗೂ ಹತೋಟಿಯ ಬಗ್ಗೆ ಚರ್ಚಿಸಬೇಕು‌. ಗ್ರಾಪಂಗಳು ಸೊಳ್ಳೆ ಉತ್ಪತ್ತಿ ತಾಣಗಳ ನಿವಾರಣೆ ಹಾಗೂ ಗ್ರಾಮ ನೈರ್ಮಲ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ನಡೆಸಬೇಕು ಎಂದು ತಿಳಿಸಿದರು.

ಶಾಲೆಗಳಲ್ಲಿ ಪ್ರಾರ್ಥನಾ ವೇಳೆಯಲ್ಲಿ ಡೆಂಘೀ ನಿಯಂತ್ರಣದ ಕುರಿತು ಕರಪತ್ರಗಳನ್ನು ವಿದ್ಯಾರ್ಥಿಗಳ ಬಳಿ ಓದಿಸಬೇಕು, ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಸಾಮೂಹಿಕ ಜ್ವರ ಪ್ರಕರಣಗಳು ಕಂಡುಬಂದಲ್ಲಿ ತಪ್ಪದೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತರು ವೈಯಕ್ತಿಕ ರಕ್ಷಣೆ ಮತ್ತು ಪರಿಸರ ನೈರ್ಮಲ್ಯದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಉಪಸ್ಥಿತರಿದ್ದರು.