ಸಾರಾಂಶ
ಬೆಂಗಳೂರು : ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ವನ್ನು ಸಾಕಾರಗೊಳಿಸಲು ಬೇಕಾದ ಪ್ರಮುಖ ತಂತ್ರಜ್ಞಾನ ವ್ಯವಸ್ಥೆ ಅಭಿವೃದ್ಧಿಪಡಿಸುವ ಕೆಲಸ ಶೇ.90ರಷ್ಟು ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ವಿ.ನಾರಾಯಣನ್ ತಿಳಿಸಿದ್ದಾರೆ.
ಗುರುವಾರ ನಗರದ ಅಂತರಿಕ್ಷ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಇಸ್ರೋದಿಂದ ಕುತೂಹಲಕಾರಿ ಮತ್ತು ರೋಮಾಂಚಕ ಮಿಷನ್‌ಗಳು ಜರುಗಲಿವೆ ಎಂದು ಹೇಳಿದರು.
2027ರಲ್ಲಿ ಭೂಮಿಯಿಂದ 400 ಕಿ.ಮೀ. ಎತ್ತರದಲ್ಲಿ ಬಾಹ್ಯಾಕಾಶಕ್ಕೆ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಪ್ರಯಾಣ ಮಾಡುತ್ತಾರೆ. 3 ದಿನ ಬಾಹ್ಯಾಕಾಶದಲ್ಲಿದ್ದು, ಅಧ್ಯಯನ ಮಾಡಿ ವಾಪಸ್ ಭೂಮಿಗೆ ಮರಳುತ್ತಾರೆ. ಈ ಯೋಜನೆಗೂ ಮುನ್ನ ಮೂರು ಮಾನವರಹಿತ ಉಡಾವಣೆಗಳನ್ನು ಮಾಡಲಾಗುತ್ತದೆ. ಅದರಲ್ಲಿ ಮೊದಲನೇ ಉಡಾವಣೆ ಇದೇ ಡಿಸೆಂಬರ್ ಕೊನೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ವಿ.ನಾರಾಯಣನ್ ಹೇಳಿದರು.
ಮನುಷ್ಯನನ್ನೇ ಹೋಲುವ ರೊಬೋಟ್ ಗೊಂಬೆ ‘ವ್ಯೋಮಮಿತ್ರ’ರನ್ನು ಮಾನವರಹಿತ ಮಿಷನ್‌ಗಳ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಇದರ ಯಶಸ್ಸು ಮತ್ತು ಫಲಿತಾಂಶ ಅತಿ ಮುಖ್ಯ. ಅದಾದ ಬಳಿಕ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳನ್ನು ಕಳುಹಿಸಲಾಗುತ್ತದೆ. ಅಲ್ಲಿಂದ ಸುರಕ್ಷಿತವಾಗಿ ವಾಪಸ್ ಬರುವುದು ಅತ್ಯಂತ ಸವಾಲಿನ ಕೆಲಸ. ಅದಕ್ಕೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳು ನಡೆದಿವೆ ಎಂದು ನಾರಾಯಣನ್ ತಿಳಿಸಿದರು.
ಚಂದ್ರನ ಅಂಗಳದ ಮಣ್ಣು ತರುವ ಚಂದ್ರಯಾನ-4 ಮತ್ತು ಚಂದ್ರಯಾನ-5 ಯೋಜನೆಯು ನಿಗದಿಯಂತೆ ಪ್ರಗತಿಯಲ್ಲಿದೆ. ಅಲ್ಲದೆ, ಚಂದ್ರನ ಮೇಲೆ ಇಳಿದು, ಸುರಕ್ಷಿತವಾಗಿ ಭೂಮಿಗೆ ಮರಳುವ ನಿಟ್ಟಿನಲ್ಲಿಯೂ ಕೆಲಸ ನಡೆಯುತ್ತಿದೆ. ಚಂದ್ರನಲ್ಲಿಗೆ ಹೋಗಲು ಭಾರೀ ತೂಕದ ರಾಕೆಟ್ ಬೇಕು. 70-80 ಟನ್ ತೂಕದ ರಾಕೆಟ್ ವಿನ್ಯಾಸಗೊಳಿಸಲಾಗುತ್ತಿದೆ. ಇನ್ನು ಮುಂದಿನ ತಿಂಗಳ ಮೊದಲ ವಾರ ಭಾರಿ ತೂಕದ ಸ್ಯಾಟಲೈಟ್ ಅನ್ನು ಕಕ್ಷೆಗೆ ಸೇರಿಸುವ ಸಿಎಂಎಸ್-03 ಹಾಗೂ ಅಮೆರಿಕದ ಬ್ಲೂಬರ್ಡ್ ಸ್ಯಾಟಲೈಟ್ ಉಡಾವಣೆ ಮಾಡಲಾಗುತ್ತದೆ ಎಂದು ವಿ.ನಾರಾಯಣನ್ ಮಾಹಿತಿ ನೀಡಿದರು.
ಭಾರತೀಯ ಅಂತರಿಕ್ಷ ಕೇಂದ್ರವನ್ನು (ಬಿಎಎಸ್) ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಸ್ರೋದಿಂದ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಮಹತ್ವಾಕಾಂಕ್ಷೆಯ ಯೋಜನೆಗಳ ಅನುಷ್ಠಾನಕ್ಕಾಗಿ ಸುಮಾರು 4,000 ಕೋಟಿ ರು. ವೆಚ್ಚದಲ್ಲಿ ಶ್ರೀಹರಿಕೋಟದಲ್ಲಿ ದೇಶದ 3ನೇ ರಾಕೆಟ್ ಉಡಾವಣೆ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಖಾಸಗಿ ಕಂಪನಿಗಳ ಪಾಲುದಾರಿಕೆಯೊಂದಿಗೆ ಹೊಸ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಾರಾಯಣನ್ ತಿಳಿಸಿದರು.
ಬಾಹ್ಯಾಕಾಶಕ್ಕೆ ಸಂಬಂಧಿಸಿದ 500 ಕಂಪನಿಗಳು ಮತ್ತು 300 ಸ್ಟಾರ್ಟ್‌ಅಪ್‌ಗಳು ದೇಶದಲ್ಲಿವೆ. ಖಾಸಗಿ ಕಂಪನಿ ಮತ್ತು ಇಸ್ರೋ ಜಂಟಿಯಾಗಿ ಬಾಹ್ಯಾಕಾಶ ವಲಯದಲ್ಲಿ ಭಾರತದ ಪಾಲನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಿವೆ. ಭಾರತದ ನಾಗರಿಕ ಮತ್ತು ಸೇನಾ ಬಳಕೆ 56 ಸ್ಯಾಟಲೈಟ್‌ಗಳಿದ್ದು, ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ನಾರಾಯಣನ್ ಮಾಹಿತಿ ಹಂಚಿಕೊಂಡರು.
ಈ ವೇಳೆ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್‌ನ ನಿರ್ದೇಶಕ ಎ.ರಾಜರಾಜನ್ ಮತ್ತು ಇಸ್ರೋ ವೈಜ್ಞಾನಿಕ ಕಾರ್ಯದರ್ಶಿ ಎಂ. ಗಣೇಶ್ ಪಿಳ್ಳೈ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))