ಸಾರಾಂಶ
ನಾಲೆ ಹೂಳು ತೆಗೆದು ದಶಕ ಕಳೆದಿದೆ. ಜೊಂಡು ಹುಲುಸಾಗಿ ಬೆಳೆದು ಕೊನೆ ಭಾಗದ ರೈತರಿಗಿರಲಿ ಆರಂಭದಲ್ಲಿಯೇ ತೊಡಕಾಗಿದೆ. ಪ್ರತಿವರ್ಷ ನಾಮಕೇವಾಸ್ಥೆಗೆ ಅಧಿಕಾರಿಗಳು ಸ್ಥಳಕ್ಕೆ ಬರುವುದು, ಹೂಳು ತೆಗೆದ ಶಾಸ್ತ್ರ ಲೆಕ್ಕಕ್ಕೆ ತೋರಿಸುವುದು ಆಗಿದೆ. ನಾಲೆ ಏರಿ ಸಂಪೂರ್ಣ ಹಾಳಾಗಿದೆ. ಎತ್ತಿನಗಾಡಿ ಅಲ್ಲದೆ ರೈತರು ಕಾಲ್ನಡಿಗೆಯಲ್ಲಿ ಹೋಗದಂತಾಗಿದೆ.
ನಾಲೆಗೆ ಹರಿಯದ ನೀರು । ಸಂಕಷ್ಟ ಸ್ಥಿತಿಯಲ್ಲಿ ಹತ್ತಾರು ಹಳ್ಳಿಗಳ ರೈತರು
ಕನ್ನಡಪ್ರಭ ವಾರ್ತೆ ಕಿಕ್ಕೇರಿಶ್ರೀರಾಮ ದೇವರ ಉತ್ತರ ನಾಲೆಯಲ್ಲಿ ಜೊಂಡು, ಹೂಳು ತುಂಬಿ ಸರಾಗವಾಗಿ ನೀರು ಹರಿಯದೆ ಗಡಿಭಾಗ ಮಾದಾಪುರ ಹಾಗೂ ಸುತ್ತಮುತ್ತ ಇರುವ ಹತ್ತಾರು ಹಳ್ಳಿಗಳ ರೈತರ ಕೃಷಿ ಬದುಕಿನ ಸ್ಥಿತಿ ಅಯೋಮಯವಾಗಿದೆ. ನೀರಿದ್ದರೂ ಬೇಸಾಯ ಮಾಡದ ಸಂಕಟ ಸ್ಥಿತಿ ರೈತರಲ್ಲಿ ಕಾಡುತ್ತಿದೆ.
ಹೋಬಳಿಯ ಹೇಮಾವತಿ ನಾಲೆ ಆಶ್ರಿತ ರೈತರಿಗೆ ಬೇಸಾಯಕ್ಕೆ ಅಷ್ಟೇನೂ ಕಾಡದಿದ್ದರೂ ಶ್ರೀರಾಮದೇವರ ಉತ್ತರನಾಲೆ ನಂಬಿದ ರೈತರಿಗೆ ಸಮಸ್ಯೆ ಎದುರಾಗಿದೆ. ಗೊಂದಿಹಳ್ಳಿ, ಮಾದಾಪುರಕೊಪ್ಪಲು, ಹಳೆಮಾದಾಪುರ, ಮಾದಾಪುರ, ಕೋಟಹಳ್ಳಿ, ಚಿನ್ನೇನಹಳ್ಳಿಯಂತಹ ಹಲವು ಹಳ್ಳಿಗಳ ಕೃಷಿಕರಿಗೆ ಕಬ್ಬು, ಭತ್ತ ಬೇಸಾಯಕ್ಕೆ ನೀರಿಲ್ಲದೆ ತೊಡಕಾಗಿದೆ.ಎಲ್ಲೆಡೆ ಬೇಸಿಗೆ ಕಾಲದಲ್ಲಿ ರೈತರಿಗೆ ನೀರಿನ ಸಮಸ್ಯೆ ಕಾಡಿದರೆ, ಈ ವ್ಯಾಪ್ತಿ ರೈತರಿಗೆ ವರ್ಷ ಪೂರ್ತಿ ನೀರಿನ ಕೊರತೆ ಎದುರಾಗುತ್ತಿದೆ. ನಾಲೆ ಸುಪರ್ದಿ ಹಾಸನ ಜಿಲ್ಲೆ ಶ್ರವಣಬೆಳಗೊಳ ಹೇಮಾವತಿ ನೀರಾವರಿ ಇಲಾಖೆಗೆ ಸೇರಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಸಿಗದೆ ತೊಂದರೆಯಾಗಿದೆ ಎಂದು ರೈತ ರಾಮಕೃಷ್ಣೇಗೌಡ ಸೇರಿ ಹಲವರು ಅಳಲು ತೋಡಿಕೊಂಡಿದ್ದಾರೆ.
ನಾಲೆ ಹೂಳು ತೆಗೆದು ದಶಕ ಕಳೆದಿದೆ. ಜೊಂಡು ಹುಲುಸಾಗಿ ಬೆಳೆದು ಕೊನೆ ಭಾಗದ ರೈತರಿಗಿರಲಿ ಆರಂಭದಲ್ಲಿಯೇ ತೊಡಕಾಗಿದೆ. ಪ್ರತಿವರ್ಷ ನಾಮಕೇವಾಸ್ಥೆಗೆ ಅಧಿಕಾರಿಗಳು ಸ್ಥಳಕ್ಕೆ ಬರುವುದು, ಹೂಳು ತೆಗೆದ ಶಾಸ್ತ್ರ ಲೆಕ್ಕಕ್ಕೆ ತೋರಿಸುವುದು ಆಗಿದೆ. ನಾಲೆ ಏರಿ ಸಂಪೂರ್ಣ ಹಾಳಾಗಿದೆ. ಎತ್ತಿನಗಾಡಿ ಅಲ್ಲದೆ ರೈತರು ಕಾಲ್ನಡಿಗೆಯಲ್ಲಿ ಹೋಗದಂತಾಗಿದೆ.ಬೇಸಿಗೆ ಆರಂಭವಾಗುತ್ತಿರುವುದರಿಂದ ತ್ವರಿತವಾಗಿ ನಾಲೆ ಜೊಂಡು, ಹೂಳು ತೆಗೆದು, ಲೈನಿಂಗ್ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಮಾದಪುರ ಕೊಪ್ಪಲು ಮಂಜೇಗೌಡ ಆಗ್ರಹಿಸಿದ್ದಾರೆ.
ಆದಷ್ಟು ನಾಲೆ ಹೂಳು, ಜೊಂಡು ತೆಗೆಯಲು ಗಮನಹರಿಸಲಾಗುವುದು. ನಾಲೆಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ವಹಿಸಲಾಗುವುದು ಎಂದು ಶ್ರೀರಾಮದೇವರ ಉತ್ತರನಾಲೆ ವಿಭಾಗದ ಎಇಇ ಸುಷ್ಮಾ ತಿಳಿಸಿದ್ದಾರೆ.