ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಬೀರಶೆಟ್ಟಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಏಕಶಿಲೆ ಆಂಜನೇಯಸ್ವಾಮಿ ಮೂರ್ತಿ ಕೆತ್ತಲು ಬಾಗೇಪಲ್ಲಿಯಿಂದ ತರಿಸಲಾದ ಬೃಹತ್ ಕಲ್ಲಿಗೆ ಗ್ರಾಮಸ್ಥರು ಬುಧವಾರ ಪೂಜೆ ಸಲ್ಲಿಸಿ ಬರಮಾಡಿಕೊಂಡರು.ಗ್ರಾಮದ ಆರಾಧ್ಯದೈವ ಆಂಜನೇಸ್ವಾಮಿ ದೇವಸ್ಥಾನದ ಎದುರು 65 ಅಡಿ ಎತ್ತರದ ಸಿಮೆಂಟ್ ಮತ್ತು ಕಬ್ಬಿಣದಿಂದ ನಿರ್ಮಿಸಲಾಗಿರುವ ಮೂರ್ತಿ ಇದ್ದು, ಕಳೆದ 20 ವರ್ಷಗಳ ಹಿಂದೆಯೇ ನಿರ್ಮಿಸಿರುವ ಮೂರ್ತಿ ಮಳೆ, ಗಾಳಿ ಮತ್ತು ಬಿಸಿಲಿನ ಹೊಡೆತಕ್ಕೆ ಸಿಲುಕಿ ಶಿಥಿವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ಏಕಶಿಲಾ ಕಲ್ಲಿನಿಂದ ಆಂಜನೇಯಸ್ವಾಮಿ ಮೂರ್ತಿ ಕೆತ್ತನೆ ಮಾಡಿಸಲು ತೀರ್ಮಾನಿಸಿದ್ದಾರೆ.
ಅದರಂತೆ ಬಾಗೇಪಲ್ಲಿಯಿಂದ 25 ಅಡಿ ಎತ್ತರದ ಆರೂವರೆ ಅಡಿ ಅಗಲ ಹಾಗೂ 5 ಅಡಿ ದಪ್ಪವಿರುವ ಸುಮಾರು 70 ಟನ್ ತೂಕ ಹೊಂದಿರುವ ಮೂರ್ತಿ ಕೆತ್ತಲು ಯೋಗ್ಯವಾಗಿರುವ ಕಲ್ಲನ್ನು ತರಿಸಿ ಕೆತ್ತನೆ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಬಾಗೇಪಲ್ಲಿಯ ಬಾಗೇಕಲ್ಲು ಅಥವಾ ಗೂಳೂರು ಎಂದು ಕರೆಯಲಾಗುವ ಈ ಕಲ್ಲು ಮೂರ್ತಿ ಕೆತ್ತನೆಗೆ ಯೋಗ್ಯವಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದ ಶಶಿಧರ್ ಆಚಾರ್ ಅವರು ಮೂರ್ತಿ ಕೆತ್ತನೆ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದೇವಸ್ಥಾನದ ಮುಂಭಾಗದ ಸಿಮೆಂಟಿನ ಆಂಜನೇಯಸ್ವಾಮಿ ಮೂರ್ತಿಯನ್ನು ತೆರವುಗೊಳಿಸಿ ಇನ್ನೂ ಐದಾರು ತಿಂಗಳಲ್ಲಿ ಅಭಯ ಹಸ್ತ ತೋರುವ ಕಲ್ಲಿನ ಆಂಜನೇಯಸ್ವಾಮಿ ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಳ್ಳಲಿದೆ.
5 ಅಡಿ ಎತ್ತರದ ಪೀಠದ ಮೇಲೆ ಮೂರ್ತಿ ಕೆತ್ತನೆ ಮಾಡಲಾಗುವುದು. ದೇವಸ್ಥಾನದ ಆವರಣಕ್ಕೆ ಕಲ್ಲು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಒಗ್ಗೂಡಿ ಮೂರ್ತಿ ಕೆತ್ತನೆ ಕಲ್ಲಿಗೆ ಪೂಜೆ ಸಲ್ಲಿಸಿದರು.ಬಾಗೇಪಲ್ಲಿಯಿಂದ ಸುರಕ್ಷಿತವಾಗಿ ಕೆತ್ತನೆ ಕಲ್ಲನ್ನು ತಂದ ಲಾರಿ ಚಾಲಕ ಹಾಗೂ ಶಿಲ್ಪಿ ಶಶಿಧರ್ ಆಚಾರ್ ಅವರಿಗೆ ಇದೇ ವೇಳೆ ಸನ್ಮಾನಿಸಿ ಕೆತ್ತನೆ ಕಾರ್ಯ ಯಶಸ್ವಿಯಾಗಿ ನೆರವೇರಲೆಂದು ಪ್ರಾರ್ಥಿಸಲಾಯಿತು.
ಗ್ರಾಮಸ್ಥರಾದ ಕೃಷ್ಣ(ಜಲೀಲ್), ವಸಂತ, ನಾಗೇಂದ್ರ, ಕೆ.ಗಿರೀಶ್, ಕೆಂಚೇಗೌಡ, ಮಂಜುನಾಥ್, ಸಂಗಾಯ್, ಗ್ರಾಮದ ಯಜಮಾನರು ಸೇರಿ ಇತರರು ಇದ್ದರು.