‘ಕನ್ನಡಿಗರಿಗೆ ಉದ್ಯೋಗ ಮೀಸಲಿಗೆ ಕಾಯ್ದೆ ರೂಪಿಸಿ’

| Published : Jul 02 2024, 01:50 AM IST / Updated: Jul 02 2024, 09:04 AM IST

ಸಾರಾಂಶ

ವಲಸೆಯ ದುಷ್ಪರಿಣಾಮದಿಂದಾಗಿ ಕನ್ನಡದ ಯುವ ಸಮುದಾಯದ ಮೇಲೆ ಆಗುತ್ತಿದೆ. ಕನ್ನಡಿಗರಿಗೆ ಈಗ ಉದ್ಯೋಗ ಸಿಗುತ್ತಿಲ್ಲ. ಹೊರ ರಾಜ್ಯದ ಯುವಕ ಯುವತಿಯರನ್ನು ಕರೆತಂದು ಇಲ್ಲಿ ಕೆಲಸ ಕೊಡುತ್ತಿದ್ದಾರೆ.

  ಚಿಕ್ಕಬಳ್ಳಾಪುರ :  ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ಕಾಯ್ದೆ ರೂಪಿಸಿ ಜಾರಿಗೊಳಿಸಲು ಒತ್ತಾಯಿಸಿ ಟಿ.ಎ.ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಇಲ್ಲಿಯ ಜಿಲ್ಲಾಡಳಿತ ಭವನದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿತು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್ ಮಾತನಾಡಿ, ನಮ್ಮ ತಾಯಿನಾಡು ಕರ್ನಾಟಕ ದೇಶದಲ್ಲೇ ಅತಿಹೆಚ್ಚು ಭೌಗೋಳಿಕ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯ. ಪ್ರಕೃತಿ ಸೌಂದರ್ಯಕ್ಕೆ, ಅತ್ಯುತ್ತಮ ಹವಾಗುಣಕ್ಕೆ ಹೆಸರಾಗಿದ್ದು, ಕನ್ನಡಿಗರು ಶಾಂತಿ ಪ್ರಿಯರು. ಆದರೆ ಇದನ್ನೇ ಬಂಡವಾಳ ಮಾಡಿಕೊಡ ಅನ್ಯ ಭಾಷಿಕರು ರಾಜ್ಯದಲ್ಲಿ ಬಹುಸಂಖ್ಯತರಾಗುತ್ತಿದ್ದು ಕನ್ನಡಿಗರಿಗೆ ಎಲ್ಲ ಕ್ಷೇತ್ರಗಳಲ್ಲೂ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಮಿತಿ ಮೀರಿದ ವಲಸೆ

ಇಂಥ ಸಕಲ ಸಮೃದ್ಧಿ ಹೊಂದುರುವ ನಾಡಿಗೆ ಇತರೆ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆ ಅವ್ಯಾಹತವಾಗಿ ನಡೆದುಕೊಂಡುಬಂದಿದೆ. ಇತ್ತೀಚಿನ ಎರಡು ಮೂರು ದಶಕಗಳಲ್ಲಿ ಇದು ತಾರಕಕ್ಕೆ ಏರಿದೆ. ಮೊದಲು ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಜನರು ವಲಸೆ ಬಂದು ಇಲ್ಲಿ ನೆಲೆ ನಿಂತರು. ಈಗ ಉತ್ತರ ರಾಜ್ಯಗಳು, ಈಶಾನ್ಯ ರಾಜ್ಯಗಳಿಂದ ಜನರ ಪ್ರವಾಹವೇ ಹರಿದುಬರುತ್ತಿದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮಂಗಳೂರಿನಂಥ ಮಹಾನಗರಗಳಲ್ಲಿ ವಲಸೆ ಪ್ರಮಾಣ ಮಿತಿ ಮೀರಿದೆ ಎಂದರು. ವಲಸೆಯ ದುಷ್ಪರಿಣಾಮದಿಂದಾಗಿ ಕನ್ನಡದ ಯುವ ಸಮುದಾಯದ ಮೇಲೆ ಆಗುತ್ತಿದೆ. ಕನ್ನಡಿಗರಿಗೆ ಈಗ ಉದ್ಯೋಗವಿಲ್ಲದಂತಾಗಿದೆ ಕನ್ನಡದ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಿದ್ದ ಅವರು ತಮ್ಮ ತಮ್ಮ ರಾಜ್ಯದ ಯುವಕ ಯುವತಿಯರನ್ನು ಕರೆತಂದು ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇದಿನೇ ಕುಸಿಯುತ್ತಲೇ ಬರುತ್ತಿದೆ. ಹೀಗೇ ಮುಂದುವರೆದರೆ ಕನ್ನಡಿಗರು ಮುಂಬರುವ ದಿನಗಳಲ್ಲಿ ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡಿಗರಿಗೆ ಉದ್ಯೋಗ ಮೀಸಲು

ಅದಕ್ಕಾಗಿ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ಅನ್ವಯ ರಾಜ್ಯ ಸರ್ಕಾರ ಕಾನೂನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು. ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ.100ರಷ್ಟು ಹುದ್ದೆಗಳು, ಎಲ್ಲ ಖಾಸಗಿ ಸಂಸ್ಥೆಗಳ ಇತರ ಹುದ್ದೆಗಳಲ್ಲಿ ಶೇ 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಈನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಮಾನ್ಯತೆ ರದ್ದುಗೊಳಿಸಿ, ಅವುಗಳಿಗೆ ಭೂಮಿ ನೀಡಲಾಗಿದ್ದರೆ ಹಿಂದಕ್ಕೆ ಪಡೆಯುವ ಮತ್ತು ಆ ಸಂಸ್ಥೆಗಳಿಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಹಿಂದಕ್ಕೆ ಪಡೆಯುವ ನಿಯಮವನ್ನು ರೂಪಿಸಬೇಕು. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ದಂಡ ವಿಧಿಸಬೇಕು ಮತ್ತು ಕ್ರಿಮಿನಲ್ ಮೊಕದ್ದರು ಹೂಡಬೇಕು. ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಪದಾಧಿಕಾರಿಗಳಾದ ಮಂಜುನಾಥ್,ರಾಮರೆಡ್ಡಿ,ಎಬಿಕೆ ಬಾಲು,ಅಮರ್ ನಾಥ್,ನಾಗರಾಜ,ಶ್ರೀನಿವಾಸ್,ನಂದೀಶ್,ತಾಲ್ಲೂಕುಗಳ ಅಧ್ಯಕ್ಷರಾದ ವಿನೋದ್ ಕುಮಾರ್, ಮುನಿರಾಜು, ಹರೀಶ್, ಶಬ್ಬೀರ್, ಶ್ರೀಧರರೆಡ್ಡಿ, ಪುನೀತ್, ವೆಂಕಟಶಿವಾರೆಡ್ಡಿ, ಮಂಜುನಾಥ್, ನಿರಂಜನ್, ಸುಜಾತಮ್ಮ, ಗಂಗರತ್ನಮ್ಮ, ನಂದಿನಿ, ಸರಸ್ವತಿ, ರಾಜೇಶ್ವರಿ,ಶ್ರಾವಂತಿ,ಸ್ಪೂರ್ತಿ ,ಮತ್ತಿತರರು ಇದ್ದರು.