ಸಾರಾಂಶ
ಛಬ್ಬಿಯಲ್ಲಿ ಕೆರೆ ಹಸ್ತಾಂತರ ಸಮಾರಂಭದಲ್ಲಿ ಶಾಸಕ ಡಾ. ಲಮಾಣಿ
ಶಿರಹಟ್ಟಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ದುರ್ಬಲ ವರ್ಗದವರನ್ನು ಗುರುತಿಸಿ ಅಂಥವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೇಲೆತ್ತುತ್ತಾ ಬಂದಿದೆ. ಇದುವರೆಗೂ ಸಮಾಜಮುಖಿ ಕಾರ್ಯಗಳನ್ನೇ ನಡೆಸಿಕೊಂಡು ಬರುತ್ತಿದ್ದು, ಸರಕಾರ ಮಾಡದ ಕೆಲಸಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಮಂಗಳವಾರ ತಾಲೂಕಿನ ಛಬ್ಬಿ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಶಿರಹಟ್ಟಿ ವಲಯ ಛಬ್ಬಿ ಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕೆರೆ ಹಸ್ತಾಂತರ ಸಮಾರಂಭದ ನಾಮಫಲಕ ಉದ್ಘಾಟಿಸಿ ಮಾತನಾಡಿದರು.
ರೈತರ ಸರ್ವತೋಮುಖ ಅಭಿವೃದ್ದಿಯೇ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶವಾಗಿದ್ದು, ಕೆರೆಗಳ ಹೂಳು ತೆರವು ಹಾಗೂ ಪುನಶ್ಚೇತನದಿಂದ ಅಂತರ್ಜಲವೃದ್ಧಿಯಾಗಿ ಕೃಷಿಗೆ ಅನುಕೂಲವಾಗಲಿದೆ. ಸುಮಾರು ೪೦ ವರ್ಷಗಳಿಂದ ರೈತರ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಇದರಲ್ಲಿ ಆರೋಗ್ಯ, ಶಿಕ್ಷಣ, ವ್ಯವಹಾರ ಸೇರಿದಂತೆ ಹಲವು ಕರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು, ಜನತೆ ಈವೆಲ್ಲವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಕೆರೆಗಳು ರೈತರ ಜೀವನಾಡಿ, ಅವುಗಳ ಪುನಶ್ಚೇತನಕ್ಕೆ ಸರ್ಕಾರ ಪ್ರತಿವರ್ಷ ಲಕ್ಷಾಂತರ ರುಪಾಯಿ ಮೀಸಲಿಟ್ಟಿರುತ್ತದೆ. ಆದರೆ, ಕೆಲಸ ಅಷ್ಟಕ್ಕಷ್ಟೇ. ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಿರಂತರವಾಗಿ ರಾಜ್ಯದ ಕೆರೆಗಳ ಪುನಶ್ಚೇತನ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಕೆರೆಗಳ ಪುನಶ್ಚೇತನದಿಂದ ಮಳೆ ನೀರು ಸಂಗ್ರಹವಾಗಿ ಜಾನುವಾರುಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗಲಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ, ಪಪಂ ಸದಸ್ಯ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿ, ಮಳೆಯ ನೀರು ಶೇಖರಣೆಯಿಂದ ಕೆರೆ ಕಟ್ಟೆಗಳು ತ್ಯಾಜ್ಯ ವಸ್ತುಗಳಿಂದ ಮಲೀನವಾಗುತ್ತಿದ್ದು, ಮಲೀನವಾಗದಂತೆ ತಡೆಗಟ್ಟುವ ಕೆಲಸವನ್ನು ನಾವು ನೀವೆಲ್ಲರೂ ಮಾಡಬೇಕು. ಇಂದು ಸ್ವಚ್ಛತೆ ಮರೀಚಿಕೆಯಾಗುತ್ತಿದೆ. ರಸ್ತೆ ಬೀದಿಗಳು ಸಾರ್ವಜನಿಕ ಸ್ಥಳಗಳಲ್ಲಿಯೂ ಕಸ ಹಾಕುವುದು ಸೇರಿದಂತೆ ನಮ್ಮಲ್ಲಿ ಸ್ವಚ್ಛತೆ ಬಗ್ಗೆ ಅರಿವು ಇಲ್ಲದಂತಾಗಿದ್ದು, ನಮ್ಮ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಕಡೆಗೆ ಗಮನಹರಿಸಬೇಕು ಎಂದರು.ಛಬ್ಬಿ ಗ್ರಾಮದಲ್ಲಿ ಕೆರೆಯನ್ನು ಹಸ್ತಾಂತರ ಮಾಡಲಾಗಿದ್ದು, ಅದನ್ನು ಸ್ವಚ್ಛವಾಗಿಟ್ಟುಕೊಂಡು, ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಸಂರಕ್ಷಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.
ನಿಂಗನಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಈರಣ್ಣ ಕೊಡ್ಲಿವಾಡ, ಜಿಲ್ಲಾ ನಿರ್ದೇಶಕ ಯೋಗೀಶ ಎ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಆರಿ, ವೀರಪ್ಪ ಕೊಡ್ಲಿ, ಬಸವರಾಜ ಮಂಡಣ್ಣವರ, ಕೇಶವ ಲಮಾಣಿ, ಶಾರದಾ ಲಮಾಣಿ, ಸುರೇಖಾ ಲಮಾಣಿ, ವೀರಯ್ಯ ಹಿರೇಮಠ, ಕ್ಷೇತ್ರ ಯೋಜನಾಧಿಕಾರಿ ಓಮು ಮರಾಠೆ, ಪಿಡಿಓ ಸುರೇಶ ಲಮಾಣಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸೌಮ್ಯಾ ಬನ್ನೂರಮಠ, ವಲಯ ಮೇಲ್ವಿಚಾರಕಿ ಉಮಾ ಬಿ.ಸಿ. ಹಾಗೂ ಅನೇಕ ಸಂಘದ ಸದಸ್ಯರು ಇದ್ದರು.