ಸಾರಾಂಶ
‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹುಯಿಲಗೋಳ ನಾರಾಯಣ ರಾಯರು ಕಟ್ಟಿದ ಹಾಡಲ್ಲ, ಹೃದಯಲ್ಲಿ ಹುಟ್ಟಿದ ಹಾಡು ಎಂದು ಡಾ.ಚಂದ್ರಶೇಖರ ವಸ್ತ್ರದ ಹೇಳಿದ್ದಾರೆ.
ಮಂಡ್ಯ : ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹುಯಿಲಗೋಳ ನಾರಾಯಣ ರಾಯರು ಕಟ್ಟಿದ ಹಾಡಲ್ಲ, ಹೃದಯಲ್ಲಿ ಹುಟ್ಟಿದ ಹಾಡು ಎಂದು ಡಾ.ಚಂದ್ರಶೇಖರ ವಸ್ತ್ರದ ಹೇಳಿದ್ದಾರೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಲ್ಲಿ ಶನಿವಾರ ಅಪರಾಹ್ನ ನಡೆದ ‘ಶತಮಾನ-ರಜತ-ಸುವರ್ಣ ಸಂಭ್ರಮ’ ವಿಶೇಷ ಉಪನ್ಯಾಸದಲ್ಲಿ ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು-ಭಾರತ ಜನನಿಯ ತನುಜಾತೆ 100’ ಕುರಿತು ಮಾತನಾಡಿದರು.
1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ವಾಗತ ಗೀತೆಗೆ ಏರ್ಪಡಿಸಿದ್ದ ಸ್ಪರ್ಧೆಗೆ ಈ ಹಾಡು ರಚಿಸಲಾಯಿತು. ಈ ಹಾಡಿಗೆ ಸುಬ್ಬರಾಯರು ರಾಗ ಸಂಯೋಜನೆ ಮಾಡಿದರು. ಬಳಿಕ 11ರ ಹರೆಯದ ಗಂಗೂಬಾಯಿ ಹಾನಗಲ್ ಅವರೊಂದಿಗೆ ಮಹಾತ್ಮಾ ಗಾಂಧೀಜಿ ಎದುರು ಹಾಡಿದ್ದು ಜನಪ್ರಿಯವಾಯಿತು. ನಾಡಗೀತೆಯಾಗಿ ಆಯ್ಕೆಯಾದ ಈ ಹಾಡನ್ನು 1973ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಾಡಗೀತೆ ಪಟ್ಟದಿಂದ ತೆಗೆದು ಹಾಕಿತು. 1975ರಲ್ಲಿ ಜೈ ಭಾರತ ಜನನಿಯ.. ಹಾಡು ನಾಡಗೀತೆಯಾಗಿ ಆಯ್ಕೆಯಾಯಿತು ಎಂದು ವಿವರಿಸಿದರು.
ಭಾಷಾವಾರು ನ್ಯಾಯದೊಂದಿಗೆ ಚೆಲುವ ಕನ್ನಡ ನಾಡು ನಿಜಾರ್ಥದಲ್ಲಿ ಇನ್ನೂ ಉದಯವಾಗಿಲ್ಲ. ಹಾಗಾಗಿ ಈ ಹಾಡು ಇಂದಿಗೂ ಪ್ರಸ್ತುತ ಎಂದರು. ಹುಯಿಲಗೋಳರ ಸಮಗ್ರ ಸಾಹಿತ್ಯ ಮುದ್ರಣವಾಗಬೇಕು, ಶಾಲೆಗಳಲ್ಲಿ ಉದಯವಾಗಲಿ ಹಾಡನ್ನು ಒಂದು ಹೊತ್ತಾದರೂ ಹಾಡಿಸಬೇಕು ಎಂದು ಆಗ್ರಹಿಸಿದರು.
‘ಗಾಂಧಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನ 100’ ಕುರಿತು ಮಾತನಾಡಿದ ಪ್ರೊ.ಜಿ.ಬಿ.ಶಿವರಾಜು, ಗಾಂಧೀಜಿಯಂತಹ ದಾರ್ಶನಿಕರು ಗತಿಸಿ ವರ್ಷಗಳಾದರೂ ಅವರ ಕುರಿತು ಈರ್ಷ್ಯೆಯನ್ನು ಜೀವಂತ ಇರಿಸಿರುವುದು ದುರಂತ ಎಂದರು.
ಬೆಳಗಾವಿ ಅಧಿವೇಶನದಲ್ಲಿ 1924ರಲ್ಲಿ ಮಹಾತ್ಮಾ ಗಾಂಧಿ ತಮ್ಮ 30 ನಿಮಿಷಗಳ ಭಾಷಣದಲ್ಲಿ ಸಾಕಷ್ಟು ಉಪಯುಕ್ತ ವಿಚಾರ ಮಾತನಾಡಿದರು. ಆ ಸಮಾವೇಶಕ್ಕೆ ಆ ಕಾಲದಲ್ಲೇ 200 ಮಂದಿ ಬಾಣಸಿಗರಿದ್ದರು. ಪ್ರವೇಶ ಶುಲ್ಕ 10 ರು ಇದ್ದದ್ದನ್ನು ಗಾಂಧೀಜಿ 1 ರು.ಗೆ ಇಳಿಸಿದರು ಎಂದು ನೆನಪಿಸಿದರು.
‘ಭಾರತದ ಸಂವಿಧಾನ 75’ ಕುರಿತು ಮಾತನಾಡಿದ ಬರಹಗಾರ ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಸಂವಿಧಾನ ನಾವು ನಮಗೆ ಕೊಟ್ಟುಕೊಂಡದ್ದು. ಆಳುವವರು ಪ್ರಶ್ನೆಗಳನ್ನು ಎದುರಿಸಲು ಸಿದ್ಧರಿರಬೇಕು ಎಂದು ಅಂದು ಡಾ. ಅಂಬೇಡ್ಕರ್ ಹೇಳಿದ್ದರು. ಇಂದು ಜನ ಪರಸ್ಪರ ಬೆರಳು ತೋರಸುತ್ತಿದ್ದಾರೆ ಎಂದರು.
ನಮ್ಮಲ್ಲಿ ಸಂವಿಧಾನ ಮರೆತು ಬೀದಿಗೆ ದೇವರನ್ನು ತಂದಾಗ ಅಶಾಂತಿ ಆರಂಭವಾಯಿತು. ಅಧಿಕಾರ ಇರುವುದು ಸೇವೆಗೆ ಹೊರತು ಅನುಭವಿಸುವುದಕ್ಕಲ್ಲ ಎಂದು ಅವರು ವಿವರಿಸಿದರು.
ಸಂವಿಧಾನದ ಪೂರ್ವಪೀಠಿಕೆ ಎಂದರೆ ಸರಳವಾದ ಪವಾಡಸದೃಶ ಪದಗಳು ಎಂದು ಅವರು ಬಣ್ಣಿಸಿದರು.
ಪಡೆದ ಸಂವಿಧಾನವನ್ನು 75 ವರ್ಷಗಳಲ್ಲಿ ಹಳಿಯುವ ಸ್ಥಿತಿಗೆ ನಾವು ತಲುಪಿದ್ದೇವೆ. ಸಂವಿಧಾನದ ತಿದ್ದುಪಡಿ ಬೇರೆ, ನಿರ್ಮೂಲನೆ ಬೇರೆ ಎಂದು ಮಾರ್ಮಿಕವಾಗಿ ನುಡಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ, ‘ಬೇಂದ್ರೆಯವರ ನಾಕು ತಂತಿಗೆ ಜ್ಞಾನಪೀಠ ಪುರಸ್ಕಾರ 50’ ನಾಡೋಜ ಡಾ.ಜಿ.ಕೃಷ್ಣಪ್ಪ ಅವರ ಅನುಪಸ್ಥಿತಿಯಲ್ಲಿ ವಿಡಿಯೋ ಉಪನ್ಯಾಸವಾಗಿ ಪ್ರಸ್ತುತಗೊಂಡಿತು.
ಅಂಜನ್ ಕುಮಾರ್ ನಿರ್ವಹಿಸಿದರು. ಹನುಮಂತರಾಯಿ ನಿರೂಪಿಸಿದರು. ಎಂ.ಪ್ರಕಾಶ ಮೂರ್ತಿ ಸ್ವಾಗತಿಸಿದರು. ಶರಣೇಗೌಡ ಪೊಲೀಸ್ ಪಾಟೀಲ ವಂದಿಸಿದರು.