ಸಾರಾಂಶ
ಜಿಲ್ಲೆಯಾದ್ಯಂತ ಪ್ರತಿಬೂತ್ ಗಳಲ್ಲಿ ‘ಶಕ್ತಿ ಚೌಪಾಲ್’ ಅಭಿಯಾನದಡಿ ಮಹಿಳೆಯರ ಕಾರ್ನರ್ ಸಭೆಗಳು ಈಗಾಗಲೇ ಆರಂಭಗೊಂಡಿದ್ದು ಜಿಲ್ಲೆಯ 1,112 ಬೂತ್ ಗಳಲ್ಲಿ 3,500 ಕಾರ್ನರ್ ಸಭೆಗಳು ನಡೆಯಲಿವೆ. ಏ.18, 19ರಂದು ಮಂಡಲ ಮಹಿಳಾ ಸಮಾವೇಶಗಳು ನಡೆಯಲಿವೆ.
ಕನ್ನಡಪ್ರಭ ವಾರ್ತೆ ಉಡುಪಿ
ಸೌರಮಾನ ಯುಗಾದಿಯ ಶುಭ ದಿನದಂದು 14ರಂದು ಬಿಜೆಪಿ ಮಹಿಳಾ ಕಾರ್ಯಕರ್ತೆಯರು ‘ಮರಳಿ ಬಂದಿದೆ ಯುಗಾದಿ, ಮತ್ತೆ ಬರುವರು ಮೋದಿ’ ಅಭಿಯಾನ ಆರಂಭಿಸಲಿದ್ದಾರೆ. ಮಹಿಳಾ ಕಾರ್ಯಕರ್ತರು ಮನೆಮನೆಗೆ ತೆರಳಿ ಮೋದಿ ಸರ್ಕಾರದ ಸಾಧನೆಗಳನ್ನು ಮತ್ತು ದೇಶಕ್ಕೆ ಮೋದಿ ನಾಯಕತ್ವದ ಅಗತ್ಯತೆಯನ್ನು ಮತದಾರರಿಗೆ ಮನವರಿಕೆ ಮಾಡಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಹೇಳಿದ್ದಾರೆ.ಅವರು ಬಿಜೆಪಿ ಜಿಲ್ಲಾ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಾದ್ಯಂತ ಪ್ರತಿಬೂತ್ ಗಳಲ್ಲಿ ‘ಶಕ್ತಿ ಚೌಪಾಲ್’ ಅಭಿಯಾನದಡಿ ಮಹಿಳೆಯರ ಕಾರ್ನರ್ ಸಭೆಗಳು ಈಗಾಗಲೇ ಆರಂಭಗೊಂಡಿದ್ದು ಜಿಲ್ಲೆಯ 1,112 ಬೂತ್ ಗಳಲ್ಲಿ 3,500 ಕಾರ್ನರ್ ಸಭೆಗಳು ನಡೆಯಲಿವೆ. ಏ.18, 19ರಂದು ಮಂಡಲ ಮಹಿಳಾ ಸಮಾವೇಶಗಳು ನಡೆಯಲಿವೆ ಎಂದು ಅವರು ತಿಳಿಸಿದರು.ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸುಮಾರು 1,31,430 ಮಹಿಳೆಯರು ಉಜ್ವಲ ಯೋಜನೆ, 1,73,387 ಮಹಿಳೆಯರು ದೀನದಯಾಳ್ ಅಂತ್ಯೋದಯ ಯೋಜನೆಗಳ ಲಾಭ ಪಡೆಯುತಿದ್ದಾರೆ, 12,02,000 ಫಲಾನುಭವಿಗಳು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಅಕ್ಕಿ ಪಡೆಯುತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಕಾರ್ಕಳ ಕ್ಷೇತ್ರದ ಚುನಾವಣಾ ಪ್ರಭಾರಿ ಶ್ಯಾಮಲಾ ಎಸ್. ಕುಂದರ್, ಜಿಲ್ಲಾ ಕಾರ್ಯದರ್ಶಿಗಳಾದ ಅನಿತಾ ಶ್ರೀಧರ್, ಪ್ರಿಯದರ್ಶಿನಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಪ್ರ. ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷೆ ಭಾರತೀ ಚಂದ್ರಶೇಖರ್ ಇದ್ದರು.