ಕನ್ನಡಪ್ರಭ ವಾರ್ತೆ ಬೆಂಗಳೂರು
ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಯುಎಚ್‌ಎಸ್ ಸಂತೆ’ ನಡೆಯಿತು. ರೈತರು, ಉದ್ದಿಮೆದಾರರು, ಮಹಿಳೆಯರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಲಕ್ಷಾಂತರ ರು. ವಹಿವಾಟು ನಡೆಯಿತು.ಯಲಹಂಕ ಸಮೀಪದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಂತೆ ನಡೆಯಿತು. ಬೆಂಗಳೂರು ಸುತ್ತಲಿನ ಜಿಲ್ಲೆಗಳ ರೈತರು, ರೈತ ಉತ್ಪಾದಕ ಸಂಘಗಳು, ಹೊಸ ಉದ್ದಿಮೆದಾರರು ಭಾಗಿಯಾಗಿದ್ದರು. ಮೌಲ್ಯವರ್ಧಿತ ಪದಾರ್ಥಗಳು, ತಾಜಾ ತರಕಾರಿ, ಹಣ್ಣು, ಹೂವು, ಸಾಂಬಾರ ಪುಡಿಗಳು, ಶುದ್ಧ ನಾಟಿ ಬೆಣ್ಣೆ, ಕೋಲ್ಡ್ ಪ್ರೆಸ್ಡ್ ಆಯಿಲ್, ಗೋವು ಉತ್ಪನ್ನಗಳು, ತರಕಾರಿ ಮತ್ತು ಹೂವಿನ ಬೀಜಗಳು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು 52 ಮಳಿಗೆಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಸಂತೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೆಗಾ ನರ್ಸರಿಯಲ್ಲಿ ಅಭಿವೃದ್ಧಿ ಪಡಿಸಿದ ಅಲಂಕಾರಿಕ ಸಸಿಗಳು, ಹಣ್ಣಿನ ಕಸಿ ಸಸಿಗಳು, ಪ್ಲಾಂಟೇಶನ್, ಔಷಧಿಯ ಮತ್ತು ಸುಗಂಧಿ ಸಸಿಗಳನ್ನು ಮಾರಾಟ ಮಾಡಲಾಯಿತು. ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆಗಳ ತಾಂತ್ರಿಕತೆ ಸಮಗ್ರ ಗಾರ್ಡನಿಂಗ್ ಮಾಹಿತಿ ಹಾಗೂ ಮೌಲ್ಯ ವರ್ಧಿತ ಪದಾರ್ಥಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಂತೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಗ್ರಾಹಕರು ಭಾಗವಹಿಸಿದ್ದರು ಎಂದು ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ಎಸ್.ಎಲ್. ಜಗದೀಶ್ ಮಾಹಿತಿ ನೀಡಿದ್ದಾರೆ.