ಸಾರಾಂಶ
ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಪ್ರಯುಕ್ತ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಡಿಸಿ ಡಾ.ವೆಂಕಟೇಶ್ ಸಲಹೆ
ಕನ್ನಡಪ್ರಭ ವಾರ್ತೆ ದಾವಣಗೆರೆಸಾವಿರಾರು ವರ್ಷಗಳಿಂದ ಪಾರಂಪರಿಕವಾಗಿ ಪೂರ್ವಜರು ಸಿರಿಧಾನ್ಯಗಳ ಸೇವಿಸುತ್ತ ಆರೋಗ್ಯವಂತ ಮತ್ತು ದೀರ್ಘ ಆಯುಷ್ಯದಿಂದ ಅತ್ಯುತ್ತಮ ಜೀವನ ನಡೆಸುತ್ತ ಬರುತ್ತಿದ್ದಾರೆ. ಅದರಲ್ಲೂ ಜೋಳ, ರಾಗಿ, ನವಣೆ, ಸಜ್ಜೆ, ಊದಲು ಮುಂತಾದ ಸಿರಿಧಾನ್ಯಗಳು ಮನುಷ್ಯನ ಆರೋಗ್ಯಕ್ಕೆ ಪೂರಕವಾದವು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ನಗರದ ಜಯದೇವ ವೃತ್ತದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ , ಕೃಷಿಕ ಸಮಾಜದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಪ್ರಯುಕ್ತ ಸಿರಿಧಾನ್ಯದ ನಡಿಗೆ ಆರೋಗ್ಯದ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ನಡೆದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಿರಿಧಾನ್ಯಗಳಲ್ಲಿ ಕ್ಯಾಲ್ಸಿಯಂ, ವಿಟಮಿನ್‌ಗಳಿವೆ ಮತ್ತು ಮನುಷ್ಯನ ಬಲವರ್ಧನೆಗೆ ಬೇಕಾದ ಪೋಷಕಾಂಶಗಳು ಹೇರಳವಾಗಿದೆ.ಇತ್ತೀಚೆಗೆ ನಮ್ಮ ಜೀವನ ಶೈಲಿಯಿಂದ ಮಧುಮೇಹ, ಬಿಪಿ, ಹೃದಯ ತೊಂದರೆ ಸೇರಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಸಿರಿಧಾನ್ಯ ಸೇವನೆಯಿಂದ ಕಿಡ್ನಿ ತೊಂದರೆ ಸೇರಿ ಹಲವು ಕಡಿಮೆಯಾಗುವ ಸಾಧ್ಯತೆಗಳಿವೆ ಎಂದರು. ನಮ್ಮ ಇಂಟರ್‌ನ್ಯಾಷನಲ್ ಫುಡ್ ಆರ್ಗನೈಸೇಷನ್ (ಐಎಫ್‌ಒ) ನವರು ರಾಜ್ಯ ಸರ್ಕಾರದ ಮನವಿ ಮೇರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ ಗುರುತಿಸಿ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ. ರಾಜ್ಯದಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ತರಲು ಜಾಗೃತಿ ಮೂಡಿಸಲು ನಾನಾ ಕಾರ್ಯಕ್ರಮಗಳ ಆಯೋಜಿಸಿದೆ. ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯಲ್ಲೂ ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಪ್ರತಿದಿನ ಈ ಸಿರಿಧಾನ್ಯಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಸೇವಿಸೋಣ. ದೀರ್ಘಾಯುಷ್ಯರಾಗಿ, ಪರಿಪೂರ್ಣ ಆರೋಗ್ಯವಂತರಾಗಿ ಬದುಕೋಣ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಿರಿಧಾನ್ಯ ಮೇಳ:ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಇಟ್ನಾಳ್ ಮಾತನಾಡಿ, ಹಿಂದಿನ ದಿನಗಳಲ್ಲಿ ಒಣ ಪ್ರದೇಶಗಳಲ್ಲಿ ಕಡಿಮೆ ನೀರು ಇರುವ ಸ್ಥಳಗಳಲ್ಲಿ ಸಿರಿಧಾನ್ಯಗಳ ಬೆಳೆಯುತ್ತಿದ್ದರು. ಆಗ ಈ ಬೆಳೆಯನ್ನು ಬಡವರು ಬೆಳೆಯುವ ಬೆಳೆ ಎಂದು ಹೇಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಸೇರಿ ಇತರೆ ಕಾಯಿಲೆಗಳಿಂದ ನರಳುತ್ತಿದ್ದಾರೆ. ಈ ಕಾಯಿಲೆಗಳ ತಡೆಯಬೇಕೆಂದರೆ ಸಿರಿಧಾನ್ಯಗಳ ನಿತ್ಯ ಆಹಾರ ಕ್ರಮಗಳಲ್ಲಿ ಬಳಸಬೇಕು. ಈ ಸಿರಿಧಾನ್ಯ ಕುರಿತು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ಸಿರಿಧಾನ್ಯ ಮೇಳಗಳನ್ನು ಆಯೋಜಿಸಿದ್ದಾರೆ ಎಂದು ತಿಳಿಸಿದರು.
ವಿವಿಧ ಮಾರ್ಗಗಳಲ್ಲಿ ಸಂಚರಿಸಿದ ಸಿರಿಧಾನ್ಯ ನಡಿಗೆ ಮೆರವಣಿಗೆ:ಜಯದೇವ ಸರ್ಕಲ್‌ನಿಂದ ಸಿರಿಧಾನ್ಯ ನಡಿಗೆ ಪ್ರಾರಂಭಗೊಂಡು ಆರ್.ಎಚ್.ಕಲ್ಯಾಣ ಮಂಟಪ, ಹಳೇ ಪಿ.ಬಿ.ರಸ್ತೆ, ಎ.ವಿ.ಕೆ ಕಾಲೇಜು ರಸ್ತೆ, ರಾಮ್ ಅಂಡ್ ಕೋ ಸರ್ಕಲ್, ಚರ್ಚ್ ರಸ್ತೆ ಮಾರ್ಗವಾಗಿ ಗುಂಡಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಸಲ್ ಶ್ರೀನಿವಾಸ್ ಶೆಟ್ಟಿ ಪಾರ್ಕ್ ರಸ್ತೆ ಮುಖಾಂತರ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಮುಕ್ತಾಯವಾಯಿತು.
ಈ ಸಿರಿಧಾನ್ಯ ನಡಿಗೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.ಜನರಲ್ಲಿ ಅರಿವು ಮೂಡಿಸಿ
ಸಿರಿಧಾನ್ಯವು ಅಪೌಷ್ಟಿಕತೆಯಿಂದ ಬಳಲುವವರಿಗೆ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಸಿರಿಧಾನ್ಯ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಿ ನಾವು ಸಿರಿಧಾನ್ಯಗಳ ಬೆಳೆಯಬೇಕು. ರಾಸಾಯನಿಕ ಗೊಬ್ಬರವನ್ನು ಬಳಸದೇ ಇಂತಹ ಬೆಳೆಗಳ ಬೆಳೆಯುವುದರಿಂದ ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯ. ನಮ್ಮ ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗಳ ಹೆಚ್ಚಾಗಿ ಬೆಳೆಯಬೇಕು.ಸುರೇಶ ಇಟ್ನಾಳ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ