ಸಾರಾಂಶ
ರೈತ ಬಾಂಧವರು ಇಲಾಖಾ ಸಿಬ್ಬಂದಿ ಯವರು ಮನೆಗೆ ಬಂದಾಗ ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಈ ರೋಗದಿಂದ ದೂರವುಳಿಯುವಂತೆ ಮಾಡಬೇಕು.
ಕನ್ನಡಪ್ರಭವಾರ್ತೆ ಗುಳೇದಗುಡ್ಡ ಕಾಲುಬಾಯಿ ರೋಗವು ಎತ್ತು, ಹೊರಿ, ಹಸು, ಎಮ್ಮೆ ಮತ್ತು ಹಂದಿಗಳಲ್ಲಿ ಕಂಡು ಬರುತ್ತದೆ. ಕಾರಣ ಇಲಾಖಾ ಸಿಬ್ಬಂದಿಯವರು ಮನೆ, ಮನೆಗೆ ಬಂದು ಲಸಿಕೆ ಹಾಕುತ್ತಿದ್ದಾರೆ ಎಂದು ತಾಲೂಕಾ ಮುಖ್ಯವೈದ್ಯಾಧಿಕಾರಿ ಡಾ. ಎಸ್.ಪಿ.ಜಾಧವ ಹೇಳಿದರು.
ಜಿಪಂ ಬಾಗಲಕೋಟೆ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಜಾನುವಾರುಗಳಿಗೆ 5ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನದಲ್ಲಿ ಮಾತನಾಡಿದ ಅವರು, ರೈತ ಬಾಂಧವರು ಇಲಾಖಾ ಸಿಬ್ಬಂದಿ ಯವರು ಮನೆಗೆ ಬಂದಾಗ ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಈ ರೋಗದಿಂದ ದೂರವುಳಿಯುವಂತೆ ಮಾಡಬೇಕು. ಲಸಿಕಾ ಅಭಿಯಾನವು ಏ.01 ರಿಂದ 30 ರ ವರೆಗೆ ನಡೆಯಲಿದೆ. ಅಕಸ್ಮಾತ್ ಯಾವುದಾದರು ಜಾನುವಾರು ಲಸಿಕೆಯಿಂದ ಬಿಟ್ಟುಹೋದಲ್ಲಿ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.ಲಸಿಕಾ ಅಭಿಯಾನದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ಅಭಿಯಾನದ ಬಿತ್ತಿಪತ್ರಗಳ ಬಿಡುಗಡೆಗೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಎಸ್.ಜಿ.ಸುರಗಿಮಠ, ಮುತ್ತು ರೋಣದ ಹಾಗೂ ಇತರರು ಹಾಜರಿದ್ದರು.