ಎಸ್‌ಯುಸಿಐನಿಂದ ಅಭ್ಯರ್ಥಿ ಪರ ಮನೆಮನೆ ಪ್ರಚಾರ

| Published : Apr 05 2024, 01:03 AM IST

ಸಾರಾಂಶ

ಬಿಜೆಪಿ ಹಾಗೂ ಕಾಂಗ್ರೆಸ್ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಲೇ ಬಂದಿವೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆ ಈಡೇರಿಸಿಲ್ಲ.

ಬಳ್ಳಾರಿ: ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ದೇವದಾಸ್ ಪರವಾಗಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಕೈಗೊಂಡರು.

ಈ ಬಾರಿ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷ ಕರ್ನಾಟಕದ 19 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಳ್ಳಾರಿಯಲ್ಲಿ ಹಲವಾರು ವರ್ಷಗಳಿಂದ ಜನತೆಯ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುತ್ತಿರುವ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷ ಈ ಬಾರಿಯೂ ಚುನಾವಣಾ ಕಣದಲ್ಲಿದೆ. ಹೋರಾಟದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಪಕ್ಷ ಚುನಾವಣೆಯನ್ನು ಕೂಡ ಹೋರಾಟದ ಭಾಗವಾಗಿ ಪರಿಗಣಿಸಿ ಜನತೆಯ ಸಮಸ್ಯೆಗಳಿಗೆ ಧ್ವನಿಯಾಗಲು ತನ್ನ ಅಭ್ಯರ್ಥಿ ಎ.ದೇವದಾಸ್ ರವರನ್ನು ಕಣಕ್ಕಿಳಿಸಿದ್ದು, ಹೋರಾಟಪರ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.

ಬಿಜೆಪಿ ಹಾಗೂ ಕಾಂಗ್ರೆಸ್ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಲೇ ಬಂದಿವೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆ ಈಡೇರಿಸಿಲ್ಲ.ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಿಲ್ಲ. ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಲಿಲ್ಲ. ಬಿಜೆಪಿಗೆ ಪರ್ಯಾಯ ಎನ್ನುವಂತೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಬಿಂಬಿಸಿಕೊಳ್ಳುತ್ತಿದೆ. ಇದು ಕೇವಲ ಜನರ ಕಣ್ಣಿಗೆ ಮಣ್ಣೆರಚ್ಚಲು ಈ ಬಂಡವಾಳಶಾಹಿ ವ್ಯವಸ್ಥೆ ಮಾಡುವ ಕುತಂತ್ರ. ಜನತೆ ಈ ಸತ್ಯವನ್ನು ಅರ್ಥ ಮಾಡಿಕೊಂಡು ಹೋರಾಟಪರ ಪಕ್ಷಕ್ಕೆ ಎಲ್ಲ ರೀತಿಯ ಬೆಂಬಲದೊಂದಿಗೆ ಮತ ನೀಡಬೇಕೆಂದು ಕೇಳಿಕೊಂಡರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಸೋಮಶೇಖರ ಗೌಡ, ಡಾ.ಪ್ರಮೋದ್, ಎ.ಶಾಂತಾ ಹಾಗೂ ಸದಸ್ಯರಾದ ನಾಗರತ್ನ, ಜಗದೀಶ್, ಸುರೇಶ್, ರವಿಕಿರಣ್, ಅನುಪಮ, ಉಮಾ ಇದ್ದರು.