ಸಾರಾಂಶ
ಕಡೂರು ಕೃಷ್ಣಮೂರ್ತಿ.
ಕನ್ನಡಪ್ರಭ ವಾರ್ತೆ, ಕಡೂರುಬರಗಾಲದ ಸೆರಗನ್ನು ಹೊದ್ದಿರುವ ಕಡೂರು ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರಿನ ಸೆಲೆ ಬತ್ತಿ ಕೆರೆಕಟ್ಟೆಗಳು ಬರಿದಾಗಿ ಜನ- ಜಾನುವಾರುಗಳಿಗೆ ಕುಡಿವ ನೀರಿನ ಸಂಕಷ್ಟ ಎದುರಾಗಿದೆ.
ರಾಜ್ಯದ ಎರಡನೇ ಅತಿ ದೊಡ್ಡ ತಾಲೂಕಾದ ಕಡೂರು ತಾಲೂಕಿನಲ್ಲಿರುವ 60 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 424 ಹಳ್ಳಿಗಳು ಇದ್ದು ಅನೇಕ ಗ್ರಾಮಗಳಲ್ಲಿ ಅಂತರ್ಜಲ ಕುಸಿದು ಕುಡಿಯುವ ನೀರಿನ ಸಮಸ್ಯೆ ಗಂಭೀರ ವಾಗಿದೆ. ಇದು ಗ್ರಾಮೀಣ ಜನರಲ್ಲಿ ಆತಂಕ ಸೃಷ್ಟಿಸಿದೆ.ಕಳೆದ 2014ರಲ್ಲಿ ತಾಲೂಕಿನಲ್ಲಿ ಬರದ ಗಂಭೀರ ಸ್ಥಿತಿ ತಲೆದೋರುವ ಮೂಲಕ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿ ದನಕರುಗಳಿಗೆ ನೀರು- ಮೇವಿನ ಅಭಾವವೂ ಉಂಟಾಗಿತ್ತು.
ಇನ್ನು 2018-19 ರಲ್ಲಿ ಕೊರೋನಾ ವ್ಯಾಪಿಸಿದ ಎರಡು ವರ್ಷಗಳಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು, ಆನಂತರ ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿ ಹರಿದು ತಾಲೂಕಿನ ಗಡಿ ಗ್ರಾಮಗಳಾದ ಪಂಚನಹಳ್ಳಿ, ಚೌಳಹಿರಿಯೂರಿ ನಂತಹ ಭಾಗದಲ್ಲೂ ಉತ್ತಮ ಮಳೆಯಿಂದ ಕೆರೆಕಟ್ಟೆಗಳು ತುಂಬಿ ಅಂತರ್ಜಲ ಹೆಚ್ಚಾಗಿ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಿ ಸಮಸ್ಯೆ ನಿವಾರಣೆ ಆಗಿತ್ತು.ಆದರೆ ಈ ಬಾರಿ ಬಿರು ಬೇಸಿಗೆ ಉಷ್ಣತೆ ಹೆಚ್ಚಳವಾಗುವ ಮೂಲಕ ಕೆರೆಕಟ್ಟೆಗಳು ಬರಿದಾಗಿದ್ದು ಕುಡಿಯುವ ನೀರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಕಡೂರು ತಾಲೂಕಿನ 60 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳ ಅಂತರ್ಜಲ ಮಟ್ಟ 600 ರಿಂದ 1 ಸಾವಿರ ಅಡಿ ತಲುಪುತ್ತಿದ್ದು, ನೀರು ಸಿಗದ ಸ್ಥಿತಿ ಕಂಡು ಬರುತ್ತಿದೆ.
ತಾಲೂಕಿನ ಹಳ್ಳಿಗಳಲ್ಲಿರುವ 703 ಕೊಳವೆ ಬಾವಿಗಳಲ್ಲಿ ಕೆಲವೆಡೆ ನೀರು ಕಡಿಮೆಯಾಗಿದ್ದು ಸೆಲೆ ಕಡಿಮೆಯಾಗಿರುವ ಕೊಳವೆ ಬಾವಿಗಳನ್ನು ರಿಫ್ರೆಶ್ ಮಾಡುತ್ತಿದ್ದು ನೀರು ಇಲ್ಲದ ಕಡೆ ಹೊಸ ಕೊಳವೆಬಾವಿ ಕೊರೆಸಲು ಕ್ರಮಕ್ಕೆ ಮುಂದಾಗುತ್ತಿದೆ.ಅಂತರ್ಜಲ ಕಡಿಮೆಯಾಗಿರುವ ಕಾರಣ ಇನ್ನಷ್ಟು ಆಳಕ್ಕೆ ಕೊರೆದು ನೀರು ಕೊಡುವ ಕಾರ್ಯ ನಡೆಯುತ್ತಿದೆ. ತಾಲೂಕಿನ ಜೋಡಿ ತಿಮ್ಮಾಪುರ ಗ್ರಾಮದಲ್ಲಿ ಅಂತರ್ಜಲ ಮಟ್ಟ ಸಾವಿರ ಅಡಿಗೆ ಕುಸಿದು ಕೊಳವೆ ಬಾವಿ ವಿಫಲಗೊಂಡಿರುವ ಕಾರಣ ಟ್ಯಾಂಕರ್ ಗಳಲ್ಲಿ ಕುಡಿಯುವ ನೀರು ನೀಡಲಾಗುತ್ತಿದೆ. ತಾಲೂಕು ಆಡಳಿತದಿಂದ ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ನೀರಿಲ್ಲದೆ ಗಂಭೀರ ಸ್ಥಿತಿ ತಲೆ ದೋರಿರುವ ಕಡೆ ಹೊಸ ಕೊಳವೆ ಭಾವಿ ಕೊರೆಸಲು ಮುಂದಾಗುತ್ತಿದೆ.
ತಾಲೂಕಿನ ಐತಿಹಾಸಿಕ ಮದಗದ ಕೆರೆಯಲ್ಲೂ ನೀರಿಲ್ಲದೆ ತಾಲೂಕಿನ ದೊಡ್ಡ ಕೆರೆಗಳಾದ ವಿಷ್ಣು ಸಮುದ್ರ, ದೇವನೂರು ಕೆರೆಯಲ್ಲೂ ನೀರಿಲ್ಲ. ಅಯ್ಯನಕೆರೆ ಹರಿವ ವೇದಾ ಹಳ್ಳ ಕೂಡ ಬರಿದಾಗಿದೆ.ಹಿಂದೆ ಮುಂಗಾರು ಮಳೆ ಕೈಕೊಟ್ಟಿದ್ದು ಯಾವುದೇ ಬೆಳೆಗಳನ್ನು ಮಾಡಲಾಗದೆ ರೈತರು ಕೈಚೆಲ್ಲಿ ಕುಳಿತಿದ್ದಾರೆ. ಒಟ್ಟಾರೆ ಬರ ಪರಿಸ್ಥಿತಿ ಜೊತೆ ಕುಡಿಯುವ ನೀರಿನ ಸಮಸ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. .
-- ಹೇಳಿಕೆ---ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಜಿಲ್ಲಾಧಿಕಾರಿ ಕಡೂರು ತಾಲೂಕಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡಿದ್ದು ನೀರಿನ ತೀವ್ರತೆ ಇರುವ ಕಡೆ ಪರ್ಯಾಯ ಕ್ರಮಗಳನ್ನು ಕೈಗೊಂಡು ನೀರು ಕೊಡುವ ಕ್ರಮಕ್ಕೆ ಮುಂದಾಗಿದ್ದೇವೆ. ತಾಲೂಕಿನ 64 ಗ್ರಾಮಗಳಲ್ಲಿ ಸಮಸ್ಯೆ ಇರುವುದನ್ನು ಪಟ್ಟಿ ಮಾಡಿದ್ದು, 60 ಪಂಚಾಯತಿ ವ್ಯಾಪ್ತಿಗಳಲ್ಲಿ ಗಂಭೀರ ಸ್ಥಿತಿ ತಲೆದೋರಿರುವ ಕಡೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ನೀರಿನ ತೀವ್ರತೆ ಇರುವ ಜೋಡಿ ತಿಮ್ಮಾಪುರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. ಸರಸ್ವತಿಪುರ ಗ್ರಾಮಕ್ಕೆ ಹುಲಿಗೊಂದಿರಾಯ ಕೆರೆಯಿಂದ ಪೈಪ್ ಲೈನ್ ಮೂಲಕ ನೀರು ನೀಡಲು ಪೈಪ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನೀರು ಸಿಗದೆ ವಿಫಲವಾಗಿರುವ ಕಡೆ ಹೊಸ ಬೋರ್ವೆಲ್ ಕೊರೆಸಲಾಗುವುದು.
--ಸಿ.ಆರ್. ಪ್ರವೀಣ್, ತಾಪಂ ಕಾರ್ಯ ನಿರ್ವಹಣಾಧಿಕಾರಿ, ಕಡೂರು.ಹೇಳಿಕೆ---ಬಳಸುವುದಕ್ಕಿಂತ ಕುಡಿಯಲು ನೀರು ಸಿಕ್ಕಿದರೆ ಸಾಕು ಎನ್ನುವಂತಾಗಿದೆ. ನಮ್ಮ ಈ ದೊಡ್ಡ ಗ್ರಾಮದಲ್ಲಿ ನೀರಿನ ಸೆಲೆ ಕಡಿಮೆಯಾಗಿ ಕೊಳವೆ ಬಾವಿಗಳಲ್ಲಿ ನೀರಿಲ್ಲ ಕರೆಂಟ್ ಇದ್ದರೆ ಮಾತ್ರ ನೀರು. ಇಲ್ಲದೇ ಹೋದಲ್ಲಿ ಅದೂ ಸಿಗುವುದಿಲ್ಲ.
---- ಶಾರದಮ್ಮ,ಸರಸ್ವತಿಪುರ.
3ಕೆಕೆಡಿಯು1..1ಎ.