ಮೈಕ್ರೋ ಫೈನಾನ್ಸ್‌ಗಳಲ್ಲಿ ತೆಗೆದುಕೊಂಡಿದ್ದ ಸಾಲ ಕಟ್ಟಲಾಗದೆ ಬೇಸತ್ತ ಮಹಿಳೆಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಮೈಕ್ರೋ ಫೈನಾನ್ಸ್ ಅವರ ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ಕಿರುಕುಳ ನೀಡುತ್ತಿದ್ದರು ಎಂದು ಗ್ರಾಮದ ಮಹಿಳೆಯರು ಆರೋಪ ಮಾಡುತ್ತಿದ್ದಾರೆ. ಎಲ್ಲಿ ನನ್ನ ಮರ್ಯಾದೆ ಊರಿನವರ ಮುಂದೆ ಹೋಗುತ್ತದೆಯೆಂದು ಹೆದರಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಸುಂದ್ರಮ್ಮ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಆಲೂರು

ಮೈಕ್ರೋ ಫೈನಾನ್ಸ್‌ಗಳಲ್ಲಿ ತೆಗೆದುಕೊಂಡಿದ್ದ ಸಾಲ ಕಟ್ಟಲಾಗದೆ ಬೇಸತ್ತ ಮಹಿಳೆಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಕೆಂಚಮ್ಮ (50 ವರ್ಷ) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಸುಮಾರು ಏಳು ಎಂಟು ಮೈಕ್ರೋ ಫೈನಾನ್ಸ್‌ಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಸಾಲ ತೆಗೆದುಕೊಂಡಿದ್ದರು. ಪ್ರತಿ ವಾರ ಹತ್ತು ಸಾವಿರಕ್ಕೂ ಹೆಚ್ಚು ಹಣವನ್ನು ಸಂಘಕ್ಕೆ ಕಟ್ಟಬೇಕಾಗಿತ್ತು. ಆದರೆ ಇಂದು ಹಣವಿಲ್ಲದೆ ಪರದಾಡುತ್ತಿದ್ದ ಕೆಂಚಮ್ಮ ಸಂಘದವರು ಬರುವುದನ್ನು ಗಮನಿಸಿ ಮಾನಸಿಕ ಒತ್ತಡದಿಂದ ಮರ್ಯಾದೆಗೆ ಅಂಜಿ ಎಲ್ಲಿ ನನ್ನ ಮಾನ ಹೋಗುತ್ತದೆ ಎಂದು ಹೆದರಿ ಮನೆಯ ಹಿಂಭಾಗದ ಇನ್ನೊಂದು ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಕಳೆದ ವಾರದ ಹಿಂದಷ್ಟೇ ರಾತ್ರಿ ಹಾಗೂ ಹಗಲು ಎನ್ನದೇ ದಿನ ಬೆಳಗಾದರೆ ಮೈಕ್ರೋ ಫೈನಾನ್ಸ್ ಅವರ ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ಕಿರುಕುಳ ನೀಡುತ್ತಿದ್ದರು ಎಂದು ಗ್ರಾಮದ ಮಹಿಳೆಯರು ಆರೋಪ ಮಾಡುತ್ತಿದ್ದಾರೆ. ಬುಧವಾರ ಹದಿನೈದು ದಿನದ ಕಂತಿನ ಹಣವನ್ನು ಬಿಎಸ್‌ಎಸ್ ಹಾಗೂ ಇಎಸ್‌ಎಎಫ್ ಸಂಘಕ್ಕೆ ಸುಮಾರು ಹತ್ತು ಸಾವಿರದಷ್ಟು ಹಣ ಕಟ್ಟಬೇಕಾಗಿ ಬಂದಿದ್ದರಿಂದ ಹಣ ಇಲ್ಲದ ಕಾರಣ ಮಾನಕ್ಕೆ ಅಂಜಿದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗ್ರಾಮದ ಸುಂದ್ರಮ್ಮ ಮಾಧ್ಯಮದವರೊಂದಿಗೆ ಮಾಹಿತಿ ನೀಡಿ, ನಾವು ಕಳೆದ ಎರಡು ವರ್ಷಗಳಿಂದ ಸಂಘಗಳಲ್ಲಿ ಅಚ್ಚುಕಟ್ಟಾಗಿ ಹಣ ಕಟ್ಟಿಕೊಂಡು ಬರುತ್ತಿದ್ದೇವೆ. ಆದರೆ ಇಂದು ಬೆಳಗ್ಗೆ ಹಣ ಕಟ್ಟಿಸಿಕೊಳ್ಳಲು ಮನೆಗೆ ಬಾಗಿಲಿಗೆ ಬಂದಂತ ಬಿ ಎಸ್ ಎಸ್ ಸಂಘದವರು ಹಣ ಕಟ್ಟುವಂತೆ ಕಿರುಕುಳ ನೀಡಿದಲ್ಲದೆ ಚಿತ್ರಹಿಂಸೆ ಕೊಟ್ಟರು ಮತ್ತು ನಾವು ಕೆಲಸಕ್ಕೆ ಹೋಗುವ ಗಾಡಿಯನ್ನು ಅಡ್ಡಗಟ್ಟಿ ಹುಡುಕಾಡಿದರು. ಯಾವಾಗ ಕೆಂಚಮ್ಮ ಸಿಗಲಿಲ್ಲ ಸಂಘದವರು ಕೆಂಚಮ್ಮನಿಗೆ ಹಣ ಕಟ್ಟೋಕೆ ಆಗದಿದ್ದ ಮೇಲೆ ಏಕೆ ಸಂಘದಲ್ಲಿ ಸಾಲವನ್ನು ತೆಗೆದುಕೊಂಡಿರಿ ಎಂದು ಬೈದ ಮೇಲೆ ಎಲ್ಲಿ ನನ್ನ ಮರ್ಯಾದೆ ಊರಿನವರ ಮುಂದೆ ಹೋಗುತ್ತದೆಯೆಂದು ಹೆದರಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಸುಂದ್ರಮ್ಮ ಆರೋಪ ಮಾಡಿದರು.

ಮೃತ ಮಹಿಳೆ ಸಂಬಂಧಿಕರಾದ ಧರಣಿ ಮಾತನಾಡಿ, ಇಂದು ಸಂಘದವರು ಬಂದು ಹಣಕಟ್ಟುವಂತೆ ಮನೆ ಬಾಗಿಲಿಗೆ ಬಂದು ಕುಳಿತಿದ್ದರು. ಆದರೆ ನಾನು ಈಗ ನಮ್ಮ ಹತ್ತಿರಕಟ್ಟಲು ಹಣವಿಲ್ಲ. ಮಧ್ಯಾಹ್ನದವರೆಗೂ ಸಮಯ ಕೊಡಿ ಕಟ್ಟುತ್ತೇನೆ ಎಂದು ಹೇಳಿದರು. ಬಿಎಸ್‌ಎಸ್ ಸಂಘದ ಆನಂದ್ ಎಂಬುವರು ಕೇಳಲಿಲ್ಲ. ಹಣ ಕಟ್ಟುವಂತೆ ಕಿರುಕುಳ ನೀಡುತ್ತಲೇ ಇದ್ದರು ಕೈ ಯಲ್ಲಿ ಹಣವಿಲ್ಲದೆ ಪರದಾಡುತ್ತಿದ್ದ ಕೆಂಚಮ್ಮ ಏನೋ ತಿಳಿಯದೆ ಸಂಘದವರ ಹತ್ತಿರ ಮತ್ತು ಊರಿನವರ ಹತ್ತಿರ ಮಾತು ಕೇಳಬೇಕೆಂದು ಮಾನ ಹೋಗುತ್ತದೆ ಎಂದು ಅಂಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಸಿದರು.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ದೂರು ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಲೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.