ಸಾರಾಂಶ
ತುಂಗಭದ್ರಾ ಜಲಾಶಯದ ಎಲ್ಲ 33 ಗೇಟುಗಳನ್ನು ತೆರೆದು ಬುಧವಾರ ನದಿಗೆ 1.5 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿದೆ. ಇದರಿಂದ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.
ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ । ಹುಲಿಗೆಮ್ಮ ದೇವಸ್ಥಾನದ ಸ್ನಾನ ಘಟ್ಟ ಸಂಪೂರ್ಣ ಮುಳುಗಡೆ
ಕನ್ನಡಪ್ರಭ ವಾರ್ತೆ ಮುನಿರಾಬಾದತುಂಗಭದ್ರಾ ಜಲಾಶಯದ ಎಲ್ಲ 33 ಗೇಟುಗಳನ್ನು ತೆರೆದು ಬುಧವಾರ ನದಿಗೆ 1.5 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿದೆ. ಇದರಿಂದ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.
ಪ್ರವಾಹದಿಂದ ಜಗತ್ ಪ್ರಸಿದ್ಧ ಹಂಪಿಯ ಪುರಂದರ ದಾಸರ ಮಂಟಪ ಮತ್ತೆ ಜಲಾವೃತಗೊಂಡಿದೆ. ಹುಲಿಗೆಮ್ಮ ದೇವಸ್ಥಾನದ ಸ್ನಾನದ ಘಟ್ಟವು ಸಂಪೂರ್ಣ ಮುಳುಗಡೆಯಾಗಿದೆ. ಶಿವಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮಾರ್ಕಂಡೇಶ್ವರ ದೇವಸ್ಥಾನ ಮೆಟ್ಟಿಲುವರೆಗೆ ನೀರು ಹರಿದು ಬರುತ್ತಿದೆ. ಗಂಗಾವತಿ ಹಾಗೂ ಕಂಪ್ಲಿ ನಗರಕ್ಕೆ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಗಂಗಾವತಿ ಹಾಗೂ ಕಂಪ್ಲಿ ನಗರಗಳ ನಡುವೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದೆ.ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ:
ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಮಂಗಳವಾರ ಸಂಜೆ ನದಿ ಪಾತ್ರದ ಗ್ರಾಮಗಳಾದ ಮುದ್ಲಾಪುರ, ಶಿವಪುರ, ಕವಳಿ ಹಾಗೂ ಮಹ್ಮದ ನಗರ ಗ್ರಾಮಗಳಿಗೆ ಭೇಟಿ ನೀಡಿದರು.ಕನ್ನಡಪ್ರಭದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ತುಂಗಭದ್ರಾ ಮಂಡಳಿಯ ಅಧಿಕಾರಿಗಳೊಂದಿಗೆ ಪ್ರವಾಹದ ಬಗ್ಗೆ ಚರ್ಚಿಸಿ ಸೂಕ್ತ ರೀತಿಯಲ್ಲಿ ಅದನ್ನು ನಿಭಾಯಿಸುಂತೆ ಸಲಹೆ ನೀಡಲಾಗಿದೆ. ತುಂಗಭದ್ರಾ ಜಲಾಶಯದಿಂದ ಅಧಿಕ ನೀರು ಬಿಡುತ್ತಿರುವ ಹಿನ್ನೆಲೆ ಪ್ರವಾಹದ ಸ್ಥಿತಿ ಇನ್ನೂ 5-6 ದಿನಗಳು ಇದೇ ರೀತಿ ಮುಂದುವರೆಯಲಿದ್ದು, ನದಿ ಪಾತ್ರದ ಜನರು ಅತ್ಯಂತ ಜಾಗರೂಕತೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಜಲಾಶಯಕ್ಕೆ ಹೆಚ್ಚಳಲಿರುವ ನೀರಿನ ಒಳಹರಿವು:
ವರದಾ ,ತುಂಗಾ ಹಾಗೂ ಭದ್ರಾ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಕೇಂದ್ರ ಜಲಾನಯನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ನೀರಿನ ಪ್ರವಾಹ ಎಷ್ಟು ಗಂಭೀರ ಇದೆ ಎಂದರೆ ಚಿಕ್ಕಮಂಗಳೂರಿನ ತರೀಕೆರೆ ತಾಲೂಕಿನಲ್ಲಿ ಭದ್ರಾ ನದಿಯು ಅಪಾಯಮಟ್ಟಕ್ಕಿಂತ ಅರ್ಧ ಅಡಿ ಎತ್ತರಕ್ಕೆ ಹರಿಯುತ್ತಿದೆ. ನೀರಿನ ಮಟ್ಟವು ಪ್ರತಿ ಗಂಟೆಗೆ 1.25 ಅಡಿ ಅಧಿಕಗೊಳ್ಳುತ್ತಿದೆ. ಇದರಿಂದ ತುಂಗಭದ್ರಾ ಜಲಾಶಯಕ್ಕೆ ಬರುತ್ತಿರುವ ನೀರಿನ ಒಳಹರಿವಿನ ಪ್ರಮಾಣವು ಅಧಿಕಗೊಳ್ಳಲಿದ್ದು, ಒಳಹರಿವು 2 ಲಕ್ಷ ಕ್ಯುಸೆಕ್ ತಲುಪುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.