ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ವಾಣಿಜ್ಯ ಮಳಿಗೆ ಸೇರಿದಂತೆ ಮಾರುಕಟ್ಟೆ ಅಭಿವೃದ್ಧಿಗೆ ಸುಮಾರು 1.50 ಕೋಟಿ ರು. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ‘ಪ್ರತಿ ಭಾನುವಾರ ತೆಂಗಿನಕಾಯಿ ಸಂತೆ’ಗೆ ಚಾಲನೆ ನೀಡಿ ಮಾತನಾಡಿದರು.
ಕಳೆದ 30 ವರ್ಷಗಳ ಹಿಂದೆ ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಸಂತೆ ಸೇರಿದಂತೆ ರೈತರ ಸಂತೆ ನಡೆಯುತ್ತಿತ್ತು. ಅನಿವಾರ್ಯ ಕಾರಣಗಳಿಂದ 30 ವರ್ಷಗಳಿಂದ ಸಂತೆ ಸ್ಥಗಿತವಾಗಿತ್ತು, ಆದರೆ ರೈತರು ಹಾಗೂ ತೆಂಗಿನಕಾಯಿ ವ್ಯಾಪಾರಸ್ಥರ ಮನವಿ ಮೇರೆಗೆ ಪ್ರತಿ ಭಾನುವಾರ ತೆಂಗಿನಕಾಯಿ, ಜಾನುವಾರುಗಳು ಹಾಗೂ ತರಕಾರಿ ಸೇರಿದಂತೆ ರೈತರು ಬೆಳೆದ ಎಲ್ಲಾ ಪದಾರ್ಥಗಳನ್ನು ಮಾರಾಟ ಮಾಡಲು ಭಾನುವಾರದ ಸಂತೆಯ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ ಎಂದರು.ಈಗಾಗಲೇ ಹೋಬಳಿ ಕೇಂದ್ರದ ಅಕ್ಕನಹಳ್ಳಿ ಕೂಡಿನಲ್ಲಿ ಭಾನುವಾರ ಸಂತೆ ನಡೆಯುತ್ತಿದೆ. ರೈತರಿಗೆ ಉತ್ತಮ ಪ್ರಾಂಗಣದಲ್ಲಿ ವ್ಯಾಪಾರ- ವಹಿವಾಟು ನಡೆಸುವ ಸಲುವಾಗಿ ಹಾಗೂ ಕಾಯಿ ವ್ಯಾಪಾರಿಗಳ ಮನವಿ ಮೇರೆಗೆ ಹೋಬಳಿ ಕೇಂದ್ರದ ಎಪಿಎಂಸಿ ಆವರಣದಲ್ಲಿ ಈ ವಾರದ ಭಾನುವಾರದಿಂದಲೇ ಅಧಿಕೃತವಾಗಿ ಸಂತೆಯನ್ನು ಪ್ರಾರಂಭಿಸಲಾಗಿದೆ. ಬಾಗೂರು, ನುಗ್ಗೇಹಳ್ಳಿ, ಹಿರೀಸಾವೆ, ಕಸಬಾ ಹೋಬಳಿ ಕೇಂದ್ರದ ವ್ಯಾಪ್ತಿಯ ರೈತರಿಗೆ ಹೊಸ ಸಂತೆ ಪ್ರಾರಂಭದಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಎಪಿಎಂಸಿ ಸಚಿವರಿಗೆ ಈಗಾಗಲೇ ಮನವಿ ಮಾಡಿ ಉಪ ಮಾರುಕಟ್ಟೆಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 50 ಲಕ್ಷ ರು. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ತಾಲೂಕು ಎಪಿಎಂಸಿ ವತಿಯಿಂದ 01 ಕೋಟಿ ಹೆಚ್ಚುವರಿಯಾಗಿ ಅನುದಾನ ನೀಡಿ ಆವರಣದಲ್ಲಿ ಹೈಟೆಕ್ ಶೌಚಾಲಯ, ಹೈ ಮಾಸ್ಟ್ ದ್, ರಸ್ತೆ ನಿರ್ಮಾಣ, ಪ್ರಾಂಗಣ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.ನೂತನ ಸಂತೆ ಪ್ರಾರಂಭಗೊಂಡಿರುವುದರಿಂದ ಹೋಬಳಿ ಕೇಂದ್ರ ಆರ್ಥಿಕವಾಗಿ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಂತೆಯಲ್ಲಿ ಕಾಯಿ ವ್ಯಾಪಾರಿಗಳು ರೈತರಿಗೆ ಹೆಚ್ಚಿನ ಬೆಲೆ ನೀಡಿದರೆ ಸಂತೆ ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದರು.
ಚನ್ನರಾಯಪಟ್ಟಣ ಎಪಿಎಂಸಿ ಆವರಣದಲ್ಲಿ ತಾಲೂಕು ತೆಂಗಿನಕಾಯಿ ವ್ಯಾಪಾರಿಗಳ ಸಂಘಕ್ಕೆ ಸದ್ಯದಲ್ಲೇ ನಿವೇಶನ ನೀಡಲಾಗುತ್ತದೆ, ತಾಲೂಕು ಕೇಂದ್ರದಲ್ಲಿ ರೈತರಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಸುವ ಸಲುವಾಗಿ ಎಪಿಎಂಸಿ ಪ್ರಾಂಗಣದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗಿದೆ ಎಂದರು.ಈಗಾಗಲೇ ತಾಲೂಕಿನ ಚನ್ನರಾಯಪಟ್ಟಣ, ಶ್ರವಣಬೆಳಗೊಳ, ದಿಡಗ, ಅಕ್ಕನಹಳ್ಳಿ, ಕೂಡು ಕಾರೆಹಳ್ಳಿ, ಬೂಕನ ಬೆಟ್ಟದಲ್ಲಿ ಸಂತೆ ನಡೆಯುತ್ತಿದ್ದು, ಎಲ್ಲಾ ಕಡೆಗಳನ್ನು ಎಪಿಎಂಸಿ ವತಿಯಿಂದ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿ, ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ 30 ವರ್ಷಗಳ ನಂತರ ಸಂತೆ ಪ್ರಾರಂಭಗೊಂಡಿದ್ದು, ಶಾಸಕರು ಬಹುಬೇಗ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.ಗ್ರಾಪಂ ಅಧ್ಯಕ್ಷ ಹೊನ್ನೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್. ಮಂಜುನಾಥ್, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ತಾಲೂಕು ತೆಂಗಿನಕಾಯಿ ಮಾರಾಟಗಾರರ ಸಂಘದ ಅಧ್ಯಕ್ಷ ಪಿಳ್ಳಳ್ಳಿ ಕುಮಾರ್, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್ , ಆಡಳಿತ ಅಧಿಕಾರಿ ವಿಜಯಲಕ್ಷ್ಮೀ, ಗ್ರಾಪಂ ಸದಸ್ಯರಾದ ಎನ್.ಎಸ್ ಮಂಜುನಾಥ್, ಎನ್. ಆರ್. ಶಿವಕುಮಾರ್, ಕೃಷಿ ಪತ್ತಿನ ನಿರ್ದೇಶಕರಾದ ಹುಲಿಕೆರೆ ಸಂಪತ್ ಕುಮಾರ್, ಪಟೇಲ್ ಕುಮಾರ್, ಮುಖಂಡರಾದ ಬಸವನಪುರ ಬೆಳ್ಳೇಕಾರ್ ಪ್ರಕಾಶ್, ಮಹಮ್ಮದ್ ಜಾವಿದ್, ಜಯ ಲಿಂಗೇಗೌಡ, ಪುಟ್ಟಸ್ವಾಮಿ, ಪ್ರಕಾಶ್, ರಮೇಶ್ ಇನ್ನಿತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))