ಶಕ್ತಿ ಯೋಜನೆಯಿಂದ ಧಾರ್ಮಿಕ ಕ್ಷೇತ್ರಗಳಿಗೆ 1.74 ಲಕ್ಷ ಮಹಿಳೆಯರ ಭೇಟಿ: ಶಾಸಕ

| Published : Feb 24 2024, 02:31 AM IST

ಸಾರಾಂಶ

ಶಕ್ತಿ ಯೋಜನೆ ಜಾರಿಗೆ ಬಂದ ನಂತರ ತಾಲ್ಲೂಕಿನಲ್ಲಿ ೧.೭೪ ಲಕ್ಷ ಮಹಿಳೆಯರು ಧಾರ್ಮಿಕ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ. ಉಚಿತ ಬಸ್ ಸಂಚಾರ ಪ್ರಾರಂಭವಾದ ಮೇಲೆ ಮನೆಯಿಂದ ಹೊರಗೆ ಬಾರದ ಸಾಕಷ್ಟು ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಸಾಗರದಲ್ಲಿ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ಸಾಗರ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ತಾಲ್ಲೂಕಿನಲ್ಲಿ ೧.೭೪ ಲಕ್ಷ ಮಹಿಳೆಯರು ಧಾರ್ಮಿಕ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಗುರುವಾರ ಸಾಗರದಿಂದ ಮಣಿಪಾಲಕ್ಕೆ ನೂತನವಾಗಿ ಬಿಡಲಾಗಿರುವ ಸರ್ಕಾರಿ ಬಸ್ಸಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಉಚಿತ ಬಸ್ ಸಂಚಾರ ಪ್ರಾರಂಭವಾದ ಮೇಲೆ ಮನೆಯಿಂದ ಹೊರಗೆ ಬಾರದ ಸಾಕಷ್ಟು ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.

ಈ ಹಿಂದೆ ಮಂತ್ರಾಲಯಕ್ಕೆ ಬಸ್ ಅಗತ್ಯವಿದೆ ಎಂದು ಪ್ರಯಾಣಿಕರು ತಿಳಿಸಿದ ಮೇರೆಗೆ 2 ಬಸ್‌ಗಳನ್ನು ಬಿಡಲಾಗಿತ್ತು. ಇದೀಗ ಮಣಿಪಾಲಕ್ಕೆ ಸರ್ಕಾರಿ ಬಸ್ ಅಗತ್ಯದ ಹಿನ್ನೆಲೆ ಹೊಸದಾಗಿ ಒಂದು ಬಸ್ ಬಿಡಲಾಗಿದ್ದು, ಬೆಳಗ್ಗೆ 6ಕ್ಕೆ ಸಾಗರ ಬಸ್ ನಿಲ್ದಾಣದಿಂದ ಹೊರಡುತ್ತದೆ. ಇನ್ನೊಂದು ಬಸ್ ಮೈಸೂರಿಗೆ ಪ್ರವಾಸಿಗರಿಗಾಗಿ ಬಿಡಲಾಗಿದೆ. ಪ್ರತಿದಿನ ರಾತ್ರಿ ೯ಕ್ಕೆ ಬಸ್ ಸಾಗರದಿಂದ ಹೊರಡಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಹೊಸದಾಗಿ ೫ ಸಾವಿರ ಬಸ್ ಖರೀದಿ ಮಾಡುತ್ತಿದ್ದು, ಸಾಗರಕ್ಕೆ ೩೫ ಬಸ್‌ಗಳ ಬೇಡಿಕೆ ಇರಿಸಲಾಗಿದೆ. ಶೀಘ್ರದಲ್ಲಿಯೇ ಇನ್ನಷ್ಟು ಹೊಸ ಬಸ್‌ಗಳ ಸೇವೆ ಲಭ್ಯವಾಗಲಿದೆ. ಪ್ರಮುಖವಾಗಿ ಗ್ರಾಮಾಂತರ ಪ್ರದೇಶದ ಶಾಲಾ-ಕಾಲೇಜು ಮಕ್ಕಳಿಗೆ ಬಸ್ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ರಾಜಪ್ಪ, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಪ್ರಮುಖರಾದ ತಾರಾಮೂರ್ತಿ, ಆನಂದ್ ಹರಟೆ, ರವಿಕುಮಾರ್, ಹೊಳೆಯಪ್ಪ, ಅನ್ವರ್ ಭಾಷಾ, ಕಲಸೆ ಚಂದ್ರಪ್ಪ ಇನ್ನಿತರರು ಹಾಜರಿದ್ದರು.

- - - ** (ಈ ಪೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)-೨೩ಕೆ.ಎಸ್.ಎ.ಜಿ.೧:

ಸಾಗರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಾಗರದಿಂದ ಮಣಿಪಾಲಕ್ಕೆ ನೂತನ ಸರ್ಕಾರಿ ಬಸ್‌ ಸಂಚಾರಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಹಸಿರು ನಿಶಾನೆ ನೀಡಿದರು. ಡಿಪೋ ಮ್ಯಾನೇಜರ್ ರಾಜಪ್ಪ, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್ ಇತರರು ಇದ್ದರು.