ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ತನ್ನದೇ ಆದ ಇತಿಹಾಸವಿದ್ದು, ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ.

ಗದಗ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಹಕರು ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಗಿಡ್ಡಮಲ್ಲಣ್ಣನರ ಅವರು ಸೇವಾ ಅವಧಿಯಲ್ಲಿ ವಿದ್ಯುತ್ ಸ್ಪರ್ಶದಿಂದ ವೀರಮರಣ ಹೊಂದಿದ್ದು, ಅವರು ಪಂಜಾಬ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಈ ಹಿನ್ನೆಲೆ ರಕ್ಷಕ್ ಪ್ಲಸ್ ಯೋಜನೆಯಡಿ ₹1 ಕೋಟಿ ಚೆಕ್‌ಅನ್ನು ನಗರದ ಬ್ಯಾಂಕ್‌ ಶಾಖೆಯಲ್ಲಿ ಅವರ ಕುಟುಂಬಕ್ಕೆ ಹುಬ್ಬಳ್ಳಿ ವೃತ್ತಾಧಿಕಾರಿ ಸೂರ್ಯಮಣಿ ಸಾಹು ವಿತರಿಸಿದರು.ಈ ವೇಳೆ ಮಾತನಾಡಿದ ಅವರು, ದೇಶದ ಒಬ್ಬ ಯೋಧ ವೀರಮರಣ ಹೊಂದಿದ್ದು ಅತ್ಯಂತ ದುಃಖದ ಸಂಗತಿ. ಯೋಧರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ನಮ್ಮ ಬ್ಯಾಂಕ್ ಅವರ ಕುಟುಂಬದ ಸಹಾಯಕ್ಕೆ ಧಾವಿಸುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ತನ್ನದೇ ಆದ ಇತಿಹಾಸವಿದ್ದು, ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ ಎಂದರು.

1895ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಪಂಜಾಬ್ ಬ್ಯಾಂಕ್ ಸ್ಥಾಪನೆಗೊಂಡಿತು. ಇದು ದೇಶದ ಮೊದಲ ಸ್ವದೇಶಿ ಬ್ಯಾಂಕ್ ಆಗಿದೆ. ಲಾಲಾ ರಜಪೂತ್ ರಾಯ್ ಬ್ಯಾಂಕ್ ನ ಸಂಸ್ಥಾಪಕರಾಗಿದ್ದು, ಅವರು ಸ್ವತಃ ಯೋಧರಾಗಿದ್ದರು. 2010ರಲ್ಲಿ ದೇಶದ ತುಂಬೆಲ್ಲ ಬ್ಯಾಂಕ್ ಅನಾವರಣಗೊಂಡಿತು. ಕರ್ನಾಟಕದಲ್ಲಿ ಹುಬ್ಬಳ್ಳಿ, ಮುಧೋಳ, ಅಂಕೋಲದಲ್ಲಿ ಮೊದಲ ಬಾರಿಗೆ ಸ್ಥಾಪನೆಯಾಯಿತು ಎಂದರು.

ಪಂಜಾಬ್ ಬ್ಯಾಂಕ್ ನಿರಂತರ ಗ್ರಾಹಕ ಸೇವೆಗಳ ಮೂಲಕ ಮನೆ ಮಾತಾಗಿದೆ. ಪಂಜಾಬ್ ಬ್ಯಾಂಕ್‌ನಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಸ್ಯಾಲರಿ ಯೋಜನೆ, ವೈದ್ಯರ ಯೋಜನೆ, ಕಾರ್ಮಿಕರ ಯೋಜನೆ, ರೈತರ ಯೋಜನೆ, ಮಹಿಳಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳಿವೆ. ಆ ಮೂಲಕ ಬ್ಯಾಂಕ್ ಸಾಮಾಜಿಕ ಕಾರ್ಯ ಮಾಡುತ್ತಿದೆ. ಗ್ರಾಹಕರು ನಮ್ಮೊಂದಿಗೆ ವ್ಯವಹಾರದ ಮೂಲಕ ಸಂತೃಪ್ತರಾಗಿದ್ದಾರೆ ಎಂದರು.

ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ 40ರಿಂದ 45 ಬ್ರ್ಯಾಂಚ್ ತೆರೆಯುವ ಉದ್ದೇಶ ಹೊಂದಲಾಗಿದೆ. ಪಂಜಾಬ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದವರಿಗೆ ಹಲವಾರು ಸೌಲಭ್ಯಗಳಿವೆ. ಇನ್ನುಳಿದ ಬ್ಯಾಂಕ್‌ಗಳಿಂದ ವಿಭಿನ್ನವಾಗಿ ಪಂಜಾಬ್ ಬ್ಯಾಂಕ್ ಗ್ರಾಹಕರ ಸೇವೆ ನೀಡುತ್ತಿದೆ. ಹಿರಿಯ ನಾಗರಿಕರಿಗಾಗಿ ವಿಶೇಷ ಸೌಲಭ್ಯಗಳನ್ನು ನಮ್ಮ ಬ್ಯಾಂಕ್ ಹೊಂದಿದೆ ಎಂದರು.

ಈ ವೇಳೆ ವೀರ ಮರಣ ಹೊಂದಿದ ಯೋಧನ ತಂದೆ, ತಾಯಿ, ಪತ್ನಿ, ಮಗು ಸೇರಿದಂತೆ ಗುರುರಾಜ್ ಬಳಗಾನೂರ, ಸೀನಿಯರ್ ಮ್ಯಾನೇಜರ್ ಶಿವಕುಮಾರ ಕೆ., ಮ್ಯಾನೆಜರ್ ಡಿ. ಎಚ್. ಅಸ್ಲಂಭಾಷಾ, ಆರ್‌ಜೆ ಮೀಡಿಯಾ ಸಮೂಹ ಸಂಸ್ಥೆ ಮುಖ್ಯಸ್ಥ ಡಾ. ರವೀಂದ್ರ ಜಲರಡ್ಡಿ, ದಿಲಾವಾರ್, ದೇವರಾಜ್, ರಮೇಶ್ ಅನಂತಪುರ, ಅಕ್ಷತಾ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.