ಜಿಲ್ಲೆಯ ಕಬಡ್ಡಿ ಕ್ರೀಡಾಪಟುಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಬ್ಯಾಡಗಿ ಪಟ್ಟಣದಲ್ಲಿ ನಿರ್ಮಿಸಲುದ್ದೇಶಿಸಿರುವ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ₹ 1 ಕೋಟಿ ಅನುದಾನ ಮಂಜೂರು ಮಾಡಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ಬ್ಯಾಡಗಿ: ಜಿಲ್ಲೆಯ ಕಬಡ್ಡಿ ಕ್ರೀಡಾಪಟುಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಬ್ಯಾಡಗಿ ಪಟ್ಟಣದಲ್ಲಿ ನಿರ್ಮಿಸಲುದ್ದೇಶಿಸಿರುವ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ₹ 1 ಕೋಟಿ ಅನುದಾನ ಮಂಜೂರು ಮಾಡಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾನುವಾರ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಹಾಗೂ ತೀರ್ಪುಗಾರರ ಮಂಡಳಿ ಬ್ಯಾಡಗಿ ಇವರ ಸಂಯುಕ್ತಾಶ್ರಯದಲ್ಲಿ ಜೀವಮಾನ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರು ಹಾಗೂ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ರೀಡಾ ಸಾಧಕರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾವೇರಿ ಜಿಲ್ಲೆಯಲ್ಲಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಉಳಿಸಿ ಬೆಳೆಸಿ, ಕ್ರೀಡೆಯ ಸೊಗಡನ್ನು ದೇಶ ವಿದೇಶಗಳಲ್ಲಿ ಎಲ್ಲೆಡೆ ಪಸರಿಸಿದೆ, ಸಾಕಷ್ಟು ಕಬಡ್ಡಿ ಸಾಧಕರನ್ನ ರಾಜ್ಯ ಹಾಗೂ ದೇಶಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಹಾವೇರಿ ಜಿಲ್ಲಾ ಕಬಡ್ಡಿ ಅಮೇಚೂರ ಅಸೋಸಿಯೇಶನ್ ಸಲ್ಲುತ್ತದೆ, ನಿಸ್ವಾರ್ಥವಾಗಿ ಕ್ರೀಡಾಪಟುಗಳ ಭವಿಷ್ಯ ರೂಪಿಸುತ್ತಿರುವ ಸಂಸ್ಥೆಯ ಬೇಡಿಕೆ ನ್ಯಾಯಸಮ್ಮತವಾಗಿದ್ದು ತಪ್ಪದೇ ಈಡೇರಿಸುವುದಾಗಿ ತಿಳಿಸಿದರು.

ಕ್ರೀಡಾಕೂಟ ನಾಭೂತೋ ನಾಭವಿಷ್ಯತಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಳೆದ ವರ್ಷ ನಡೆಸಲಾದ ಶಿಕ್ಷಣ ಇಲಾಖೆಯ ವಿಭಾಗಮಟ್ಟದ ಕಬಡ್ಡಿ ಕ್ರೀಡಾಕೂಟ ರಾಷ್ಟ್ರದ ಗಮನ ಸೆಳೆದಿತ್ತು, ಇದರಲ್ಲಿ ಕಬಡ್ಡಿ ಅಸೋಸಿಯೇಶನ್ ಹಾಗೂ ತೀರ್ಪುಗಾರರ ಮಂಡಳಿ ಶ್ರಮ ಸಾಕಷ್ಟಿತ್ತು. ಎಲ್ಲ ರಾಜ್ಯಕ್ಕೂ ನಾವು ನಡೆಸಿದ ಕ್ರೀಡಾಕೂಟ ಮಾದರಿಯಾಗಿತ್ತು. ಇಂತಹ ಕ್ರೀಡೆ ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರವು ಕೊಡಮಾಡುವ ಜೀವಮಾನ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾದ ಡಾ.ಈಶ್ವರ ಅಂಗಡಿ, ರೈಲ್ವೆ ರಕ್ಷಣಾ ಇಲಾಖೆಯಲ್ಲಿ ಪಿಎಸ್‌ಐ ಆಗಿ ಮುಂಬಡ್ತಿ ಪಡೆದ ಕಬಡ್ಡಿ ಕ್ರೀಡಾಪಟು ಶ್ರೀಕಾಂತ ಪಾಟೀಲ, ತರಬೇತುದಾರ ಮಹ್ಮದ್ ಇಸ್ಮಾಯಿಲ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಶಿಡೇನೂರ ಅಂಬೇಡ್ಕರ್‌ ಕಾಲೇಜಿನ ರುಕ್ಸಾರಬಾನು ಖತೀಬ, ಅಮೂಲ್ಯ ಮಾಜೀಗೌಡ್ರ, ಹಾವೇರಿ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ ಅರ್ಪಿತಾ ಮಡಿವಾಳರ, ಅಶ್ವಿನಿ ಕರಿಯಣ್ಣನವರ, ರಕ್ಷಿತಾ ಬಾಸೂರ, ರಕ್ಷಿತಾ ಮಡಿವಾಳರ, ರೇಖಾ ಜಾಡರ, ಸ್ಫೂರ್ತಿ ಸೂರದ, ಸುಜಾತಾ ಸೂರದ, ಮನು ಮೈಲಾರ, ಮೌನೇಶ ಕಮ್ಮಾರ, ಮಾಲತೇಶ ಮಲಗುಂದ ಜಿಲ್ಲೆಯ ವಿವಿಧ ಕಾಲೇಜುಗಳ ಕ್ರೀಡಾಪಟುಗಳಿಗೆ ಸನ್ಮಾನ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಬಿಇಎಸ್ ಸಂಸ್ಥೆ ಕಾರ್ಯದರ್ಶಿ ಡಾ. ಎಸ್.ಎನ್. ನಿಡಗುಂದಿ, ಹಾವೇಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫಸಾಬ್ ಎರೇಶಿಮಿ, ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷ ಗಂಗಣ್ಣ ಎಲಿ, ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಶಿವಯೋಗಿ ಎಲಿ, ಅನಿಲ್ ಬೊಡ್ಡಪಾಟಿ, ಶಿವಯೋಗಿ ಶಿರೂರ, ಮಂಜುನಾಥ ಉಪ್ಪಾರ, ಹನುಮಂತಪ್ಪ ಹರಿಹರ, ಸುಭಾಸ ಮಾಳಗಿ, ಡಾ.ಎ.ಎಂ. ಸೌದಾಗರ, ದುರ್ಗೇಶ ಗೋಣೆಮ್ಮನವರ, ಬಸನಗೌಡ ಲಕ್ಷ್ಮೇಶ್ವರ, ಶಿವಪುತ್ರಪ್ಪ ಅಗಡಿ, ಶಿವಕುಮಾರ ಪಾಟೀಲ, ಎಸ್.ಟಿ.ಬೆನ್ನೂರ, ಪಿ.ಬಸವರಾಜಪ್ಪ, ಬಸವರಾಜ ಬಸಪ್ಪನವರ, ಆರ್.ಜಿ.ಕಳ್ಯಾಳ, ಕೋಚ್ ಮಂಜುಳಾ ಭಜಂತ್ರಿ ಸೇರಿದಂತೆ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಕ್ರೀಡಾಪಟುಗಳು ಪೋಷಕರು, ತೀರ್ಪುಗಾರರು ಹಾಗೂ ಇನ್ನಿತರು ಉಪಸ್ಥಿತರಿದ್ದರು. ಅಮೇಚೂರ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎ.ಟಿ. ಪೀಠದ ನಿರೂಪಿಸಿದರು. ಎಂ.ಆರ್. ಕೋಡಿಹಳ್ಳಿ ವಂದಿಸಿದರು.