ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕದಲ್ಲಿ ಸುಮಾರು ೧೫ ಲಕ್ಷ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ೧ ಕೋಟಿ ಜನರಿಗೆ ಉದ್ಯೋಗವನ್ನು ಕಲ್ಪಿಸಿವೆ. ಇವುಗಳ ಬಲವರ್ಧನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿವೆ ಎಂದು ಎಂಎಸ್‌ಎಂಇ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಚ್.ಎಂ.ಶ್ರೀನಿವಾಸ ತಿಳಿಸಿದರು.ಬುಧವಾರ ನಗರದ ಸುರಭಿ ಹೋಟೆಲ್ ನಲ್ಲಿ ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆಯಡಿ ಎಂಎಸ್‌ಎಂಇ ಔಟ್ ರೀಚ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭ್ಯಾಸ ಮುಗಿಸಿದ ನಂತರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಕೆಲಸ ಸಿಗುವುದು ಬಹಳ ಕಷ್ಟಕರ. ದಿನಗಳು ಉರುಳುತ್ತಾ ಹೋದಂತೆ ಸ್ಪರ್ಧಾತ್ಮಕ ಎನ್ನುವುದು ಹೆಚ್ಚುತ್ತಲೇ ಇರುತ್ತದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಉದ್ದಿಮೆಗಳನ್ನು ಪ್ರಾರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಕರ್ನಾಟಕದಲ್ಲಿ ೧೫ ಲಕ್ಷಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ, ಇದರಲ್ಲಿ ಉತ್ಪಾದನೆ ಕ್ಷೇತ್ರ, ಸೇವಾ ಕ್ಷೇತ್ರ, ವ್ಯಾಪಾರ ಕ್ಷೇತ್ರಗಳಿವೆ. ಇವುಗಳಲ್ಲಿ ಭಾರತ ಸರ್ಕಾರ ಮೊದಲು ವ್ಯಾಪಾರ ಕ್ಷೇತ್ರವನ್ನು ಸಣ್ಣ ಕೈಗಾರಿಕೆ ಕ್ಷೇತ್ರ ಎಂದು ಪರಿಗಣಿಸುತ್ತಿರಲಿಲ್ಲ. ಆದರೆ ಕಳೆದ ೨ ವರ್ಷದಿಂದ ವ್ಯಾಪಾರ ಕ್ಷೇತ್ರ ಎಂಎಸ್‌ಎಂಇ ವಲಯದಲ್ಲಿ ಸೇರ್ಪಡೆಗೊಂಡಿದೆ ಎಂದು ಹೇಳಿದರು.
ಆದರೆ ಜನರಿಗೆ ಈ ಯೋಜನೆಯ ಬಗ್ಗೆ ಸಾಕಷ್ಟು ಅರಿವಿಲ್ಲ ಹಾಗೂ ಯಾವ ಕಾಲಘಟ್ಟದಲ್ಲಿ ಯೋಜನೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿವಳಿಕೆಯೂ ಇಲ್ಲ. ನಿಗದಿತ ಅವಧಿಯೊಳಗೆ ಅದರ ಸೇವೆಯನ್ನು ಪಡೆದುಕೊಳ್ಳಬೇಕು. ಅದನ್ನು ಪಡೆದುಕೊಳ್ಳದಿದ್ದರೆ ಉದ್ದಿಮೆದಾರರಿಗೆ ನಷ್ಟವಾಗುತ್ತದೆ ಎಂದು ನುಡಿದರು.ಔಟ್‌ರೀಚ್ ಕಾರ್ಯಕ್ರಮದ ಉದ್ದೇಶ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಂದಂತಹ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸುವ ಮತ್ತು ಯೋಜನೆಗಳ ಅವಧಿಯ ಬಗ್ಗೆ ಅರಿವು ಮೂಡಿಸುವುದು ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದಿನೇಶ್ ಮಾತನಾಡಿ, ಉದ್ದಿಮೆದಾರರಿಗೆ ಮಾಹಿತಿ ನೀಡುವ ಕೆಲಸವನ್ನು ಕೈಗಾರಿಕಾ ಇಲಾಖೆ ಮಾಡುತ್ತಿದೆ. ಉದ್ದಿಮೆಗಳು ಸರ್ಕಾರ ನೀಡುವ ಸೌಲಭ್ಯಗಳಿಗೆ ನಿಗದಿಪಡಿಸಿರುವ ಅವಧಿಯಲ್ಲಿ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಕೃಷಿಯಲ್ಲಿ ಮೊದಲು ಒಂದು ಎಕರೆಯಲ್ಲಿ ೪ ರಿಂದ ೫ ಜನ ಕೆಲಸ ನಿರ್ವಹಿಸುತ್ತಿದ್ದರು. ಇಂದು ೪ ರಿಂದ ೫ ಎಕರೆಗೆ ಒಂದು ಟ್ರ್ಯಾಕ್ಟರ್ ಅಥವಾ ಇನ್ನಿತರೆ ಕೃಷಿ ಉಪಕರಣಗಳು ಕೆಲಸ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಇರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸುಮಾರು ಪ್ರತಿ ವರ್ಷ ೩೦೦೦ ಜನರು ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ತೊಡಗುತ್ತಾರೆ. ಇವರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಇಲ್ಲವೇ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ನಿರುದ್ಯೋಗಿಗಳಾಗುತ್ತಾರೆ. ಉದ್ದಿಮೆಗಳನ್ನು ಪ್ರಾರಂಭಿಸಿ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಎಂಎಸ್‌ಎಂಇ. ಹಾಗೂ ಕೈಗಾರಿಕಾ ಇಲಾಖೆಗಳಲ್ಲಿ ಹಲವಾರು ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಕಾಸಿಯಾ ಸಂಸ್ಥೆಯ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಮಾತನಾಡಿದರು, ಮೈಸೂರು ರಫ್ತು ಸೌಲಭ್ಯ ಕೇಂದ್ರದ ಉಪ ನಿರ್ದೇಶಕಿ ಎಲ್ ಮೇಘಲಾ, ಮಂಡ್ಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಕೆ.ಪ್ರಭಾಕರ್, ಕಾಸಿಯಾ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್, ನಗರದ ಜಂಟಿ ಕಾರ್ಯದರ್ಶಿ ಜೆ.ಎಸ್ ಬಾಬು, ಗ್ರಾಮೀಣ ಜಂಟಿ ಕಾರ್ಯದರ್ಶಿ ಸತೀಶ್ ಎನ್, ಖಜಾಂಚಿ ಮಂಜುನಾಥ್ ಎಚ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.------೩೧ಕೆಎಂಎನ್‌ಡಿ-೫
ಮಂಡ್ಯದ ಸುರಭಿ ಹೋಟೆಲ್‌ನಲ್ಲಿ ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆಯಡಿ ಎಂಎಸ್‌ಎಂಇ ಔಟ್ ರೀಚ್ ಕಾರ್ಯಕ್ರಮ ಉದ್ಘಾಟಿಸಿ ಎಂಎಸ್‌ಎಂಇ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಚ್.ಎಂ.ಶ್ರೀನಿವಾಸ ಮಾತನಾಡಿದರು.