ಸಾರಾಂಶ
- ಚನ್ನಗಿರಿ ಪಟ್ಟಣದಲ್ಲಿ ಮಹಿಳಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಹೇಳಿಕೆ
- - - - - -- 1300 ಜನರಿಗೆ ಗೃಹಲಕ್ಷ್ಮಿ ಯೋಜನೆ ಹಣ ಯಾವ ಕಾರಣಕ್ಕೆ ಬರುತ್ತಿಲ್ಲ ಎಂಬ ಮಾಹಿತಿ ನೀಡಬೇಕು
- ಅಂಗನವಾಡಿ ಹುದ್ದೆಗಳಿಗೆ ಶೀಘ್ರದಲ್ಲಿಯೇ ಅರ್ಜಿರ್ಗಳನ್ನು ಆಹ್ವಾನಿಸಲಾಗುವುದು- - - -
ಕನ್ನಡಪ್ರಭ ವಾರ್ತೆ, ಚನ್ನಗಿರಿಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 315 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿವೆ. 47 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಪ್ರಸ್ತುತ 22 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ₹1 ಕೋಟಿ ಹಣ ಮಂಜೂರು ಆಗಿದೆ. ಶೀಘ್ರದಲ್ಲಿಯೇ ಕಾಮಗಾರಿಯನ್ನು ನಡೆಸಲಾಗುವುದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ಮಂಗಳವಾರ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ವಿವಿಧ ಇಲಾಖೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಒಟ್ಟು 23 ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿದ್ದು, ಇವುಗಳಿಗೆ ಪರ್ಯಾಯ ಕಟ್ಟಡಗಳಲ್ಲಿ ಅಂಗನವಾಡಿಗಳ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಕ್ಷೇತ್ರದಲ್ಲಿ ಒಟ್ಟು 406 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 18 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು, 55 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಶೀಘ್ರದಲ್ಲಿಯೇ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಇಲಾಖೆ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು ಸೇರಿದಂತೆ ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಪಡೆಯದೇ ಇರುವವರ ಮಾಹಿತಿ ಪಡೆದರು. ಈ ನಿಟ್ಟಿನಲ್ಲಿ ಜನಪರವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಕ್ಷೇತ್ರದಲ್ಲಿ 1300 ಜನರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎಂಬ ಮಾಹಿತಿ ನೀಡಿದ್ದೀರಿ. ಯಾವ ಕಾರಣಕ್ಕೆ ಹಣ ಬರುತ್ತಿಲ್ಲ ಎಂಬ ಬಗ್ಗೆ ನಿಖರ ಮಾಹಿತಿ ನೀಡಬೇಕು. ಈ ಯೋಜನೆಯ ಸಮರ್ಪಕ ಜಾರಿಗಾಗಿ ಸರ್ಕಾರದಿಂದ ಅನುಷ್ಠಾನ ಸಮಿತಿಯನ್ನು ರಚಿಸಲಾಗಿದೆ. ಮುಂದಿನ ಒಂದು ತಿಂಗಳ ಒಳಗಾಗಿ ಕ್ಷೇತ್ರದಲ್ಲಿ ಶೇ.100ಕ್ಕೆ 100ರಷ್ಟು ಈ ಯೋಜನೆ ಅನುಷ್ಠಾನ ಮಾಡಬೇಕು ಎಂದು ತಾಕೀತು ಮಾಡಿದರು.
ಸಿಡಿಪಿಒ ಆರ್.ನಿರ್ಮಲಾ ಇಲಾಖೆಯ ಪ್ರತತಿ ಮಾಹಿತಿ ನೀಡಿ, ಈ ಹಿಂದೆ ಕಾರ್ಯಕರ್ತೆಯರ ನೇಮಕಾತಿಗೆ ವಿದ್ಯಾರ್ಹತೆಯನ್ನು ಎಸ್.ಎಸ್.ಎಲ್.ಸಿ. ಮತ್ತು ಸಹಾಯಕಿಯರಿಗೆ 4ನೇ ತಗತಿಯ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದರು. ಪ್ರಸ್ತುತವಾಗಿ ಕಾರ್ಯಕರ್ತೆಗೆ ದ್ವಿತೀಯ ಪಿಯುಸಿ ಸಹಾಯಕಿಯರಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದು, ಪ್ರಸ್ತುತವಾಗಿ ಅಂಗವಿಕಲರಿಗೆ ಮತ್ತು ವಿಧವೆಯರಿಗೆ ಯಾವುದೇ ತರಹದ ಮೀಸಲಾತಿಗಳು ಇಲ್ಲ. ಮೆರಿಟ್ ಆಧಾರಿತದಲ್ಲಿ ನೇಮಕಾತಿ ನಡೆಯಲಿದ್ದು, ಅಂಗವಿಕಲರಿಗೆ ಮತ್ತು ವಿಧವೆಯರಿಗೆ 5 ಅಂಕಗಳನ್ನು ನೀಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭ ಸಿಡಿಪಿಒ ನಿರ್ಮಲಾ, ಎಸಿಡಿಪಿಒ ದೇನಾನಾಯ್ಕ್, ಶ್ರೀಶೈಲ, ಮೇಲ್ವಿಚಾರಕರಾದ ಸರಸ್ವತಿ, ತಜನಾಬೀ, ಕವಿತಾ, ಸುನೀತ ದೊಡ್ಡಮನಿ, ನಿಶಾನಿ, ಕಚೇರಿ ಸಿಬ್ಬಂದಿ ಹಾಜರಿದ್ದರು.
- - - -18ಕೆಸಿಎನ್‌ಜಿ2:ಚನ್ನಗಿರಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಾಸಕ ಬಸವರಾಜು ವಿ. ಶಿವಗಂಗಾ ಮಂಗಳವಾರ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.