ರಾಜ್ಯದಲ್ಲಿ ಹಕ್ಕಿಜ್ವರ ಕಂಡುಬಂದ ಹಿನ್ನೆಲೆಯಲ್ಲಿ ‘ಹಕ್ಕಿಜ್ವರ ಪ್ರದೇಶ’ದ 1 ಕಿ.ಮೀ. ವ್ಯಾಪ್ತಿಯ ಕೋಳಿ ಕೊಲ್ಲಲು ಆದೇಶ

| N/A | Published : Mar 04 2025, 12:34 AM IST / Updated: Mar 04 2025, 08:19 AM IST

ರಾಜ್ಯದಲ್ಲಿ ಹಕ್ಕಿಜ್ವರ ಕಂಡುಬಂದ ಹಿನ್ನೆಲೆಯಲ್ಲಿ ‘ಹಕ್ಕಿಜ್ವರ ಪ್ರದೇಶ’ದ 1 ಕಿ.ಮೀ. ವ್ಯಾಪ್ತಿಯ ಕೋಳಿ ಕೊಲ್ಲಲು ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಹಕ್ಕಿಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಸದ್ಯ ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರೋಗ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ಕೊಂದು ಹೂಳುವಂತೆ ತಿಳಿಸಿದೆ.

 ಬೆಂಗಳೂರು : ರಾಜ್ಯದಲ್ಲಿ ಹಕ್ಕಿಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಸದ್ಯ ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರೋಗ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ಕೊಂದು ಹೂಳುವಂತೆ ತಿಳಿಸಿದೆ. ಒಂದು ವೇಳೆ ರಾಜ್ಯದ ಇತರೆಡೆ ಕೋಳಿಜ್ವರ ಹಬ್ಬಿದರೂ ಅಲ್ಲೂ ಇದೇ ಮಾರ್ಗಸೂಚಿ ಅನ್ವಯ ಆಗುವ ಸಾಧ್ಯತೆ ಇದೆ.

ಭೋಪಾಲ್‌ನ ಎನ್‌ಐಎಚ್‌ಎಸ್‌ಎಡಿ (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈ ಸೆಕ್ಯುರಿಟಿ ಆ್ಯನಿಮಲ್‌ ಡಿಸೀಸಸ್‌) ಲ್ಯಾಬ್‌ ಇವೆರಡು ಜಿಲ್ಲೆಗಳಲ್ಲಿ ಕೋಳಿಜ್ವರ ಪತ್ತೆ ಆಗಿರುವುದನ್ನು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಹಕ್ಕಿಜ್ವರ ಕಂಡುಬಂದ ಕೋಳಿಫಾರಂ ಅಥವಾ ಜಾಗದಿಂದ ಸುತ್ತಲ 3 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ಪ್ರದೇಶವಾಗಿ ಗುರುತಿಸಬೇಕು. ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ಕೊಂದು ಆಳವಾದ ಗುಂಡಿ ತೋಡಿ ಹೂಳಬೇಕು (ಮೊಟ್ಟೆಯನ್ನೂ ಕೂಡ). ಹೀಗೆ ಹೂಳುವವರು ಸುರಕ್ಷತೆಗೆ ಪಿಪಿಪಿ ದಿರಿಸು ಧರಿಸಬೇಕು. ಜೊತೆಗೆ ಹತ್ತು ದಿನಗಳ ಕಾಲ ಐಸೋಲೆಟ್‌ ಆಗಿರಬೇಕು. ಯಾವುದೇ ರೀತಿ ಜ್ವರ ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಂಯೋಜಿತ ರೋಗ ನಿಗಾ ಯೋಜನಾ ನಿರ್ದೇಶಕ ಡಾ.ಅನ್ಸಾರ್‌ ಅಹ್ಮದ್‌ ತಿಳಿಸಿದರು.

ಕೋಳಿಫಾರಂನ ಮೊಟ್ಟೆ, ಮಾಂಸ, ತ್ಯಾಜ್ಯಗಳು ಸೋಂಕಿತ ಪ್ರದೇಶ ವ್ಯಾಪ್ತಿಯಿಂದ ಹೊರಬಾರದಂತೆ ನೋಡಿಕೊಂಡು ಎಲ್ಲವನ್ನೂ ಅಲ್ಲೇ ನಾಶಪಡಿಸಬೇಕು. 10 ಕಿ.ಮೀ. ವ್ಯಾಪ್ತಿಯ ಎಲ್ಲ ಪೌಲ್ಟ್ರಿಗಳು, ಮೊಟ್ಟೆ ಅಂಗಡಿಗಳನ್ನು ತಕ್ಷಣವೇ ಮುಚ್ಚಬೇಕು. ಜೊತೆಗೆ 10 ಕಿ.ಮೀ. ವ್ಯಾಪ್ತಿಯೊಳಗೆ ಜ್ವರ ಪೀಡಿತರ ಕುರಿತು ನಿಗಾ ವಹಿಸಬೇಕು ಎಂದು ತಿಳಿಸಿದೆ.

ಇನ್ನು, 70 ಡಿಗ್ರಿ ಸೆಂಟಿಗ್ರೇಡ್‌ಗಿಂತ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಬೇಯಿಸಿ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಬಹುದು. ಕೋಳಿ ಮಾಂಸದ ಅಡುಗೆ ತಯಾರು ಮಾಡುವವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅಡುಗೆಗಾಗಿ ಕೋಳಿಮಾಂಸವನ್ನು ತಯಾರು ಮಾಡಿದ ಬಳಿಕ ನಂಜುನಾಶಕದಿಂದ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು ಎಂದು ಪಶುಸಂಗೋಪನಾ ಇಲಾಖೆ ಮಾರ್ಗಸೂಚಿ ತಿಳಿಸಿದೆ.

ಮಾರ್ಗಸೂಚಿಯಲ್ಲೇನಿದೆ?

- ಕೋಳಿಫಾರಂ ಸುತ್ತಲ 3 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ಪ್ರದೇಶವಾಗಿ ಗುರುತಿಸಬೇಕು

- ಜ್ವರ ಪತ್ತೆ ಆದ 1 ಕಿ.ಮೀ. ವ್ಯಾಪ್ತಿಯ ಕೋಳಿ ಕೊಂದ, ಮೊಟ್ಟೆ ಸಮೇತ ಗುಂಡಿಯಲ್ಲಿ ಹೂಳಬೇಕು

- ಕಾರ್ಮಿಕರು ಪಿಪಿಪಿ ದಿರಿಸು ಧರಿಸಿರಬೇಕು, 10 ಕಿ.ಮೀ.ನಲ್ಲಿ ಪೌಲ್ಟ್ರಿ, ಮೊಟ್ಟೆ ಅಂಗಡಿ ಮುಚ್ಚಬೇಕು

- ಕೋಳಿ ಹನನ ಮಾಡಿದ ಕಾರ್ಮಿಕರು ಆ ನಂತರದ 10 ದಿನಗಳ ಕಾಲ ಐಸೋಲೆಟ್‌ ಆಗಿರಬೇಕು

- ಜನರು ಯಾವುದೇ ರೀತಿ ಜ್ವರ ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು-----