ಹೊಸ ವರ್ಷಾಚರಣೆಗಾಗಿ ಹಂಪಿಗೆ 1 ಲಕ್ಷ ಪ್ರವಾಸಿಗರು!

| Published : Jan 01 2024, 01:15 AM IST

ಸಾರಾಂಶ

ಹಂಪಿ ಹೇಮಕೂಟ ಪರ್ವತದಲ್ಲಿ ಸೂರ್ಯಾಸ್ತಮಾನ ವೀಕ್ಷಿಸುವ ಮೂಲಕ ಹಂಪಿ ಸ್ಮಾರಕಗಳನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಹೊಸಪೇಟೆ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡು ಹರಿದುಬಂದಿದೆ. 2023ನೇ ವರ್ಷದ ಕೊನೆಯ ಸೂರ್ಯಾಸ್ತಮಾನ ವೀಕ್ಷಣೆಯೊಂದಿಗೆ ಹಂಪಿಯ ಸ್ಮಾರಕಗಳನ್ನು ವೀಕ್ಷಿಸುವ ಮೂಲಕ ಪ್ರವಾಸಿಗರು ವಿದಾಯ ಹೇಳುವ ಪರಿಪಾಠ ಮೊದಲಿನಿಂದಲೂ ಇರುವ ಹಿನ್ನೆಲೆಯಲ್ಲಿ ಈ ಬಾರಿ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಹಂಪಿಗೆ ಧಾವಿಸಿದ್ದಾರೆ.

ಹಂಪಿ ಹೇಮಕೂಟ ಪರ್ವತದಲ್ಲಿ ಸೂರ್ಯಾಸ್ತಮಾನ ವೀಕ್ಷಿಸುವ ಮೂಲಕ ಹಂಪಿ ಸ್ಮಾರಕಗಳನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಅದರಲ್ಲೂ ಕಳೆದ ಒಂದು ವಾರದಿಂದ ಪ್ರವಾಸಿಗರು ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ಹೊಸ ವರ್ಷಾಚರಣೆಗಾಗಿ ಹಂಪಿಗೆ ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದು, ಸ್ಮಾರಕಗಳನ್ನು ಕಂಡು ಹಿಗ್ಗುತ್ತಿದ್ದಾರೆ.

ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಮಹಾನವಮಿ ದಿಬ್ಬ, ರಾಣಿ ಸ್ನಾನಗೃಹ, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಮಂಟಪಗಳು, ಎದುರು ಬಸವಣ್ಣ ಮಂಟಪ, ಶ್ರೀಕೃಷ್ಣ ದೇವಾಲಯ, ಅಚ್ಯುತರಾಯ ದೇವಾಲಯ, ಉದ್ದಾನ ವೀರಭದ್ರೇಶ್ವರ ದೇವಾಲಯ, ಹಜಾರ ರಾಮ ದೇವಾಲಯ, ಕಮಲ ಮಹಲ್‌, ಆನೆಲಾಯ, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ಪುರಂದರ ದಾಸರ ಮಂಟಪ, ಪಟ್ಟಾಭಿರಾಮ ದೇವಾಲಯ, ಸೀತೆ ಸೆರಗು, ವಾಲಿ, ಸುಗ್ರೀವ ಗುಹೆ ಸೇರಿದಂತೆ ಹಲವು ಸ್ಮಾರಕಗಳನ್ನು ಪ್ರವಾಸಿಗರು ಕಣ್ತುಂಬಿಕೊಂಡರು. ಹೊಸ ವರ್ಷದ ಸವಿನೆನಪಿಗಾಗಿ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರಿಂದ ಪೊಲೀಸ್‌ ಭದ್ರತೆ ಕೂಡ ಹೆಚ್ಚಿಸಲಾಗಿತ್ತು.

ಹೋಟೆಲ್‌ಗಳು ಫುಲ್‌ ರಶ್‌: ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ಹೋಟೆಲ್‌, ರೆಸಾರ್ಟ್‌ಗಳು ಫುಲ್‌ ಆಗಿವೆ. ಪ್ರವಾಸಿಗರಿಗೆ ರೂಮ್‌ಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಹಂಪಿಯ ಸ್ಮಾರಕಗಳ ವೀಕ್ಷಣೆಗಾಗಿ ಗದಗ, ಕೊಪ್ಪಳ, ಬಳ್ಳಾರಿ ಮತ್ತು ತೋರಣಗಲ್‌, ಗಂಗಾವತಿಯ ಹೋಟೆಲ್‌ಗಳಲ್ಲೂ ಪ್ರವಾಸಿಗರು ವಾಸ್ತವ್ಯ ಹೂಡಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸಿದ್ದರು. ಹಂಪಿಗೆ ಪ್ರವಾಸಿಗರ ದಂಡೇ ಹರಿದು ಬಂದಿರುವ ಹಿನ್ನೆಲೆಯಲ್ಲಿ ಹಂಪಿ ಜಾತ್ರೆ ವಾತಾವರಣ ಮನೆ ಮಾಡಿತ್ತು.

ರಶ್‌ ಹಿನ್ನೆಲೆ ಪ್ರವಾಸಿಗರ ಮಧ್ಯೆ ಗಲಾಟೆ: ಹಂಪಿ ಗೆಜ್ಜಲ ಮಂಟಪದ ಬಳಿ ಬ್ಯಾಟರಿ ಚಾಲಿತ ವಾಹನ ಏರುವ ಸಲುವಾಗಿ ಮಹಾರಾಷ್ಟ್ರ ಮೂಲದ ಹಾಗೂ ಕರ್ನಾಟಕ ರಾಜ್ಯದ ಪ್ರವಾಸಿಗರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ.