ಸಾರಾಂಶ
ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೂಚನೆ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆಜನತಾ ದರ್ಶನದಲ್ಲಿ ಸಾರ್ವಜನಿಕರು ನೀಡುವ ಅಹವಾಲುಗಳನ್ನು ತಿಂಗಳೊಳಗೆ ಪರಿಹರಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಳಲ್ಕೆರೆಯ ಸಂವಿಧಾನ ಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ಪ್ರತಿನಿತ್ಯವೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಿಗೆ ಅಲೆದಾಟ ಮಾಡುವು ದನ್ನು ತಪ್ಪಿಸಿ, ಜನರ ಬಳಿಗೇ ಅಧಿಕಾರಿಗಳು, ಜನಪ್ರತಿನಿಧಿಗಳು ತೆರಳಿ, ಜನರ ದೂರು ದುಮ್ಮಾನಗಳನ್ನು ಆಲಿಸಿ ಪರಿಹರಿಸ ಬೇಕೆಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ, ಜಿಲ್ಲೆಯಾದ್ಯಂತ ಜನತಾ ದರ್ಶನದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ 7 ಜನತಾ ದರ್ಶನ ಕಾರ್ಯಕ್ರಮಗಳನ್ನು ವಿವಿಧ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ. 8ನೇ ಜನತಾ ದರ್ಶನವನ್ನು ಹೊಳಲ್ಕೆರೆಯಲ್ಲಿ ಆಯೋಜಿಸಲಾಗಿದೆ. ಈವರೆಗೂ ಒಟ್ಟು 1,585 ಅರ್ಜಿಗಳು ಸ್ವೀಕರಿಸಲಾಗಿದ್ದು, 1286 ಅರ್ಜಿಗಳನ್ನು ವಿಲೇ ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. 299 ಅರ್ಜಿಗಳು ಇತ್ಯರ್ಥ ಬಾಕಿ ಇದೆ. ಇದರಲ್ಲಿ ಕಂದಾಯ ಇಲಾಖೆ ಸಂಬಂಧಿಸಿದ 144 ಹಾಗೂ ವಿವಿಧ ಇಲಾಖೆ ಸೇರಿದ 155 ಅರ್ಜಿಗಳು ಬಾಕಿ ಇವೆ ಎಂದರು.ಬರದ ಮಾಹಿತಿ ಸರ್ಕಾರಕ್ಕೆ ಸಲ್ಲಿಕೆ:
ಬರಗಾಲಕ್ಕೆ ಸಂಬಂಧಿಸಿದ ಜಿಲ್ಲೆಯ ಎಲ್ಲಾ ಮಾಹಿತಿಗಳನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಈ ಮೊದಲು ಬೆಳೆ ಪರಿಹಾರದ ಹಣವನ್ನು ಪರಿಹಾರ ಪೋರ್ಟಲ್ ಮೂಲಕ ರೈತರಿಗೆ ಪಾವತಿಸಲಾಗುತ್ತಿತ್ತು. ಆದರೆ ಈಗ ಈ ಕಾರ್ಯದಲ್ಲಿ ಇನ್ನಷ್ಟು ನಿಖರತೆ ಹಾಗೂ ವೇಗ ತರಲು ಬೆಳೆ ಪರಿಹಾರದ ಮೊತ್ತವನ್ನು ಫ್ರುಟ್ಸ್ ತಂತ್ರಾಂಶದ ಮಾಹಿತಿ ಆಧರಿಸಿ ಸರ್ಕಾರ ನೇರವಾಗಿ ರೈತರ ಖಾತೆಗೆ ಪರಿಹಾರದ ಮೊತ್ತ ಜಮೆ ಮಾಡಲಿದೆ. ಜಿಲ್ಲೆಯಲ್ಲಿ ಶೇ.80 ರಷ್ಟು ರೈತರು ಫ್ರುಟ್ಸ್ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ ರೈತರು ಸಹ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.ಜನತಾ ದರ್ಶನ ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕ ಡಾ. ಎಂ. ಚಂದ್ರಪ್ಪ ಹಾಗೂ ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರನ್ನು ವಿಶೇಷ ಅಲಂಕೃತ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಸಂವಿಧಾನ ಸೌಧದ ಆವರಣಕ್ಕೆ ಕರೆತರಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರಾಮಗರಿ, ಚಿಕ್ಕಜಾಜೂರು-ಗಂಜಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವಸತಿ ಗೃಹಗಳ ನಿರ್ಮಾಣ, ಹೊಳಲ್ಕೆರೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಶಂಕುಸ್ಥಾಪನೆ ನೆರವೇರಿಸಿದರು.ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 8 ವಿವಿಧ ಕೌಂಟರ್‍ಗಳನ್ನು ತರೆದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ಬೀಬಿ ಫಾತಿಮಾ ಸೇರಿದಂತೆ ಹೊಳಲ್ಕೆರೆ ಪುರಸಭಾ ಸದಸ್ಯರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.ಯಾವುದೇ ಸರ್ಕಾರವಿದ್ದರೂ ಸಮಸ್ಯೆಗೆ ಸ್ಪಂದನೆ:
ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ, ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಗಳು ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಹಾಗೂ ತಾಲೂಕು ಹಂತದಲ್ಲಿ ಆಯೋಜಿಸಲು ಸೂಚನೆ ನೀಡಿದ್ದಾರೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ . ಯಾವುದೇ ಸರ್ಕಾರವಿದ್ದರೂ ಸಾರ್ವಜನಿಕರ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಹಿಂದಿನ ಸರ್ಕಾರದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಯ ಕಡೆ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈಗಿನ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜನತಾದರ್ಶನ ಮೂಲಕ ಜನರನ್ನು ತಲುಪುವ ಕಾರ್ಯ ಮಾಡುತ್ತಿದೆ ಎಂದರು.