ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ರಾಜ್ಯದ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಗಬೇಕು ಹಾಗೂ ಕಾಂತರಾಜ್ ವರದಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಚಿತ್ರದುರ್ಗದಲ್ಲಿ ಜ.೨೮ ರಂದು ಹಮ್ಮಿಕೊಂಡಿರುವ ಶೋಷಿತ ಸಮುದಾಯಗಳ ರಾಜ್ಯ ಸಮ್ಮೇಳನಕ್ಕೆ ಶಿರಾ ತಾಲೂಕಿನಿಂದ ಸುಮಾರು ೧೦ ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್ ತಿಳಿಸಿದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶೋಷಿತ ಸಮುದಾಯಗಳ ಜಾಗೃತಿಗಾಗಿ ರಾಜ್ಯ ಸಮ್ಮೇಳನವನ್ನು ಚಿತ್ರದುರ್ಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಈ ಸಮ್ಮೇಳದ ಮೂಲ ಉದ್ದೇಶ ಸಣ್ಣ ಸಣ್ಣ ಜಾತಿಗಳಿಗೆ ಸಿಗಬೇಕಾದ ಸೌಲಭ್ಯ ಸಿಗಬೇಕು. ಎಚ್. ಕಾಂತರಾಜ್ ವರದಿಯನ್ನು ಸರ್ಕಾರ ಕೂಡಲೇ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ನಮ್ಮ ಹಕ್ಕನ್ನು ಪಡೆಯಲು ನಾವು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು ಮಾತನಾಡಿ, ಕಳೆದ ಚುನಾವಣೆಯಲ್ಲಿ ಹಿಂದುಳಿದ ಜನಾಂಗದವರು ಕಾಂಗ್ರೆಸ್ ಪಕ್ಷವನ್ನು ಕೈಹಿಡಿದ್ದವು. ತುಳಿತಕ್ಕೊಳಗಾದ ಸಣ್ಣ ಸಣ್ಣ ಸಮುದಾಯಗಳ ಬೇಡಿಕೆಯನ್ನು ಕೇಳಲು. ಸಮಾಜಕ್ಕೆ ಸಾಮಾಜಿಕ ನ್ಯಾಯ, ಸಂವಿಧಾನದ ಸಂರಕ್ಷಣೆಗಾಗಿ ಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ನಗರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು. ನಮ್ಮ ಬೇಡಿಕೆಗಳೆಂದರೆ ಕಾಂತರಾಜ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಅಂಗೀಕರಿಸಬೇಕು. ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಮಾಡಿಸಬೇಕು. ಇಡಬ್ಯ್ಲೂಎಸ್ ರದ್ದುಗೊಳಿಸಬೇಕು. ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ರಾಜಕೀಯವಾಗಿ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿಕೊಡುಬೇಕು. ಎಸ್ಸಿ, ಎಸ್ಟಿ ಒಬಿಸಿಗಳಿಗೆ ಜನಸಂಖ್ಯೆವಾರು ಮೀಸಲಾತಿ ನೀಡುವುದು ಹಾಗೂ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡುವ ಬಗ್ಗೆ. ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಸಬಲೀಕರಣ. ರಾಜೇಂದ್ರ ಸಾಚಾರ್ ವರದಿ ಕೂಡಲೇ ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಪಡಿಸಲು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಿ ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ ಮಾತನಾಡಿದರು.ಪತ್ರಿಕಾಗೋಷ್ಠಿಯಲ್ಲಿ ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರಪ್ಪ, ನಗರಸಭಾ ಸದಸ್ಯ ಕೃಷ್ಣಪ್ಪ, ಆಶ್ರಯ ಸಮಿತಿ ಸದಸ್ಯರಾದ ನೂರುದ್ದೀನ್, ಜಯಲಕ್ಷ್ಮಿ, ಮಂಜುನಾಥ್, ಮಾಜಿ ತಾ.ಪಂ. ಸದಸ್ಯ ಪಿ.ಬಿ. ನರಸಿಂಹಯ್ಯ, ಮಹೇಶ್, ಕಲ್ಲುಕೋಟೆ ಲಿಂಗರಾಜು, ಪಾವಗಡ ರುದ್ರಾಚಾರ್, ಓಕೇಶ್ ನಾಯಕ, ಹಾರೋಗೆರೆ ಮಾರಣ್ಣ ಸೇರಿದಂತೆ ಹಲವರು ಹಾಜರಿದ್ದರು.