ಸಾರಾಂಶ
ಚನ್ನಪಟ್ಟಣ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮಗೂ ಒಂದು ಕುಟುಂಬವಿದೆ ಎಂಬುದನ್ನು ಮರೆತಿವೆ. ಕನಿಷ್ಠ ವೇತನವನ್ನೂ ನೀಡದೇ ತಾರಾತಮ್ಯ ಮಾಡುತ್ತಿವೆ. ಸರ್ಕಾರಗಳ ಈ ನಡೆ ಖಂಡಿಸಿ ಹಾಗೂ ನಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ.೧ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾಧ್ಯಕ್ಷೆ ನಿರ್ಮಲ ಎಚ್. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಸಿಯೂಟ ತಯಾರಿಕಾ ಸಿಬ್ಬಂದಿಗೆ ಸೇವಾ ಭದ್ರತೆಯೇ ಇಲ್ಲವಾಗಿದೆ. ೨೨ ವರ್ಷ ಸೇವೆ ಸಲ್ಲಿಸಿದ ನಂತರ ಬರಿಗೈಯಲ್ಲಿ ಮನೆಗೆ ಹೋಗುವಂತಾಗಿದ್ದು, ಆರೋಗ್ಯ ಸಮಸ್ಯೆ, ಅವಘಡಗಳು ಸಂಭವಿಸಿದರೆ ಯಾವುದೇ ಭದ್ರತೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವೇತನ ಹೆಚ್ಚಿಸಿ:
ರಾಜ್ಯಾದ್ಯಂತ ಸುಮಾರು ೧,೨೭ ಲಕ್ಷ ಮಂದಿ ಬಿಸಿಯೂಟ ತಯಾರಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಸಿಯೂಟ ತಯಾರಿಕರಿಗೆ ೩೭೦೦ ರು. ಹಾಗೂ ಸಹಾಯಕರಿಗೆ ೩೬೦೦ ರು. ನೀಡಲಾಗುತ್ತಿದೆ. ಕನಿಷ್ಠ ವೇತನವನ್ನು ನೀಡದೇ ನಮ್ಮ ಕೈಲಿ ದುಡಿಸಿಕೊಳ್ಳಲಾಗುತ್ತಿದೆ. ಈ ತಾರಾತಮ್ಯವನ್ನು ನೀಗಿಸಬೇಕು. ಬಿಸಿಯೂಟ ತಯಾರಿಕರಿಗೆ ಕನಿಷ್ಠ ೧೦,೫೦೦ ರು. ವೇತನ ನೀಡಬೇಕು ಎಂದು ಆಗ್ರಹಿಸಿದರು.ಎಲ್ಲ ವಸ್ತುಗಳ ಬೆಲೆ ಇಂದು ಗಗನಕ್ಕೆ ಏರಿದೆ. ನಮಗೆ ಬರುತ್ತಿರುವ ವೇತನದಲ್ಲಿ ಕುಟುಂಬವನ್ನು ಪೊರೆಯುವುದು ಕಷ್ಟಕರವಾಗಿದೆ. ಸರ್ಕಾರ ಅಧ್ಯಯನ ನಡೆಸಿ ನಮಗೆ ಸೂಕ್ತ ವೇತನ ನಿಗದಿಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಸೇವಾ ಭದ್ರತೆ ಬೇಕಾಗಿದ್ದು, ನಮಗೂ ಪಿಎಫ್ ಸೌಕರ್ಯ ಕಲ್ಪಿಸಬೇಕು. ಈವರೆಗೆ ನಿವೃತ್ತಿಯಾಗಿ ಮನೆಗೆ ಹೋದವರಿಗೆ ಕನಿಷ್ಠ ೨ಲಕ್ಷ ಹಣ ಸಿಗುವಂತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದ ಬಿಜೆಪಿ ಸರ್ಕಾರ ಅಂಗನವಾಡಿ, ಬಿಸಿಯೂಟ ತಯಾರಕರು, ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ಹೆಚ್ಚಳ ಮಾಡಲಾಗುವುದು. ಆದರೆ, ಅದು ಸಿಗುತ್ತಿಲ್ಲ. ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಬಿಸಿಯೂಟ ತಯಾರಕರ ವೇತನವನ್ನು ೬ ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಬೆಳಗಾವಿಯ ಖಾನಾಪುರದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಘೋಷಿಸಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಬಿಸಿಯೂಟ ತಯಾರಿಕರ ವೇತನ ಹೆಚ್ಚಳ, ಸೇವಾ ಭದ್ರತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ಫೆ.೧ರಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಆಗಲೂ ಸರ್ಕಾರ ನಮ್ಮ ಬೇಡಿಕೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಅಡುಗೆ ಮನೆಗಳಿಗೆ ಬೀಗ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಎಂಸಿ ರಾಜ್ಯ ಉಪಾಧ್ಯಕ್ಷ ಎನ್.ಎಂ. ಶಂಭುಗೌಡ, ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ಅನುಸೂಯಮ್ಮ, ತಾಲೂಕು ಅಧ್ಯಕ್ಷೆ ಸಾಕಮ್ಮ, ತಾಲೂಕು ಕಾರ್ಯದರ್ಶಿ ಮಂಗಳ, ಉಪಾಧ್ಯಕ್ಷೆ ಶಾಂತಮ್ಮ, ಖಜಾಂಚಿ ಶಶಿಕಲಾ, ಕಾರ್ಯದರ್ಶಿ ಸುನೀತಾ, ಪೂರ್ಣಿಮಾ, ಪುಷ್ಪಲತಾ, ಶಾರದಮ್ಮ, ಸರಸ್ವತ್ತಮ್ಮ, ಲಲಿತಾ, ಲಕ್ಷ್ಮೀದೇವಮ್ಮ ಇತರರು ಉಪಸ್ಥಿತರಿದ್ದರು.ಪೊಟೊ೨೭ಸಿಪಿಟಿ೧:ಬಿಸಿಯೂಟ ತಯಾರಕರ ಫೆಡರೇಷನ್ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.