ಬಿಎಂಟಿಸಿ ನೌಕರರಿಗೆ ₹10 ಲಕ್ಷ ವಿಮೆ; ಗುಂಪು ವಿಮಾ ಯೋಜನೆಗಾಗಿ ವಂತಿಗೆ ಹೆಚ್ಚಿಸಿ ಆದೇಶ

| Published : Feb 19 2024, 01:34 AM IST

ಸಾರಾಂಶ

ಗುಂಪು ವಿಮಾ ಯೋಜನೆಗಾಗಿ ಬಿಎಂಟಿಸಿ ಸಿಬ್ಬಂದಿಯಿಂದ ಪಡೆಯಲಾಗುವ ಮಾಸಿಕ ವಂತಿಗೆಯನ್ನು ಹೆಚ್ಚಿಸಲಾಗಿದ್ದು, ಇನ್ನು ಮುಂದೆ ಪ್ರತಿ ಸಿಬ್ಬಂದಿ ವೇತನದಲ್ಲಿ ಮಾಸಿಕ ₹350 ಕಡಿತಗೊಳಿಸುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗುಂಪು ವಿಮಾ ಯೋಜನೆಗಾಗಿ ಬಿಎಂಟಿಸಿ ಸಿಬ್ಬಂದಿಯಿಂದ ಪಡೆಯಲಾಗುವ ಮಾಸಿಕ ವಂತಿಗೆಯನ್ನು ಹೆಚ್ಚಿಸಲಾಗಿದ್ದು, ಇನ್ನು ಮುಂದೆ ಪ್ರತಿ ಸಿಬ್ಬಂದಿ ವೇತನದಲ್ಲಿ ಮಾಸಿಕ ₹350 ಕಡಿತಗೊಳಿಸುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಬಿಎಂಟಿಸಿ ಸಿಬ್ಬಂದಿ ಕರ್ತವ್ಯದ ವೇಳೆ ಅಪಘಾತ ಹೊರತುಪಡಿಸಿ ಬೇರೆ ಕಾರಣದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ಗುಂಪು ವಿಮಾ ಯೋಜನೆ ಅಡಿಯಲ್ಲಿ ಪರಿಹಾರ ನೀಡಲಾಗುತ್ತಿದೆ. ಈ ಹಿಂದೆ ₹3 ಲಕ್ಷ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು 2023ರ ನವೆಂಬರ್‌ 20ರ ನಂತರದಿಂದ ₹10 ಲಕ್ಷ ನೀಡಲಾಗುತ್ತದೆ. ಅದರ ಜತೆಗೆ ಸಿಬ್ಬಂದಿ ಅಪಘಾತದಿಂದ ಮೃತಪಟ್ಟರೆ ₹50 ಲಕ್ಷ ಪರಿಹಾರ ಮೊತ್ತ ನೀಡಲಾಗುತ್ತಿದೆ. ಪರಿಹಾರ ಮೊತ್ತ ಹೆಚ್ಚಳವಾಗಿರುವ ಕಾರಣ ವಂತಿಗೆಯನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಹಿಂದೆ ಗುಂಪು ವಿಮಾ ಯೋಜನೆಗಾಗಿ ಪ್ರತಿ ಸಿಬ್ಬಂದಿಯಿಂದ ಮಾಸಿಕ ₹70 ವಂತಿಗೆ ಪಡೆಯಲಾಗುತ್ತಿತ್ತು. ಆದರೆ, ಆ ಮೊತ್ತವನ್ನು ಮಾಸಿಕ ₹350ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಜತೆಗೆ ನಿಗಮದ ವಂತಿಗೆಯಾಗಿ ಪ್ರತಿ ಸಿಬ್ಬಂದಿಗೆ ₹150 ನೀಡಲಿದ್ದು, ಒಟ್ಟಾರೆ ಒಬ್ಬ ಸಿಬ್ಬಂದಿಯಿಂದ ಮಾಸಿಕ ₹500 ವಂತಿಗೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.ನೌಕರರ ಸಂಘ ಆಕ್ಷೇಪ

ಬಿಎಂಟಿಸಿಯಿಂದ ವಂತಿಗೆ ಕಡಿತ ಹೆಚ್ಚಳಕ್ಕೆ ಕೆಎಸ್ಸಾರ್ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಯೂನಿಯನ್‌ ಆಕ್ಷೇಪ ವ್ಯಕ್ತಪಡಿಸಿದೆ. ಗುಂಪು ವಿಮಾ ಯೋಜನೆ ಅಡಿಯಲ್ಲಿ ಪರಿಹಾರ ಮೊತ್ತ ಹೆಚ್ಚಳ ಮಾಡಿರುವುದನ್ನು ಸಂಘವು ಸ್ವಾಗತಿಸಿದೆ. ಆದರೆ, ಸಿಬ್ಬಂದಿ ವಂತಿಗೆಯನ್ನು ₹70ರಿಂದ ₹350ಕ್ಕೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಬದಲಾಗಿ ಸಿಬ್ಬಂದಿ ವಂತಿಗೆ ಪ್ರಮಾಣ ಕಡಿಮೆ ಮಾಡಿ, ನಿಗಮದ ವಂತಿಗೆ ಹೆಚ್ಚಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಯೂನಿಯನ್‌ನಿಂದ ಪತ್ರ ಬರೆಯಲಾಗಿದೆ.