ಸಾರಾಂಶ
ಕುಕನೂರು: ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನ ಪ್ರಮಾಣ ಶೇ.10ರಷ್ಟು ಹೆಚ್ಚಳವಾಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದಲ್ಲಿ ಶನಿವಾರ ಸನ್ಮಾನ ಸ್ವೀಕರಿಸಲಿ ಮಾತನಾಡಿದ ಅವರು, ವಲಯಗಳ ಅಭಿವೃದ್ಧಿಗೆ ಸಭೆ ಕರೆದು ಸಲಹೆ ಸ್ವೀಕರಿಸಲಾಗುವುದು. ಫೆ.16ಕ್ಕೆ ಬಜೆಟ್ ಮಂಡನೆ ಆಗಲಿದೆ. ಸಿಎಂ ಸಿದ್ದರಾಮಯ್ಯ ಈ ಸಲ ಬಜೆಟ್‌ನಲ್ಲಿ ನೀನಿರಬೇಕು. ನಿನ್ನ ಫೈನಾನ್ಸ್ ಮ್ಯಾನೇಜ್ಮೆಂಟ್ ನೋಡ್ತೀನಿ ಅಂದಿದ್ದಾರೆ ಎಂದರು.
ಏಳು ತಿಂಗಳ ಈ ಅಧಿಕಾರ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಈಗಾಗಲೇ ಜಾರಿ ಮಾಡಿದ್ದಾರೆ. ಯುವ ನಿಧಿ ಸಹ ಆರಂಭವಾಗಲಿದೆ. ಜನಹಿತಕ್ಕಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.ಜಾತಿ, ಹಣದಿಂದ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲಾಗುತ್ತಿದೆ.
ಜನರು ಅಭಿವೃದ್ಧಿ ಪಡೆದುಕೊಳ್ಳಬೇಕಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರಾಗಬಾರದು. ಮತ ನೀಡಲಿ, ನೀಡದೇ ಇರಲಿ ಅಭಿವೃದ್ಧಿ ವಿಷಯ ಬಂದಾಗ ಸ್ವೀಕಾರ ಮಾಡಬೇಕು ಎಂದರು.ಕ್ಷೇತ್ರದಲ್ಲಿ ನೀರಾವರಿ ಎಬಿಸಿಡಿ ಗೊತ್ತಿಲ್ಲದವರು ನೀರಾವರಿ ಬಗ್ಗೆ ಮಾತಾಡುತ್ತಿದ್ದಾರೆ.
ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಹಾಲಪ್ಪ ಆಚಾರ್ ತಮ್ಮ ಒಂದು ಎಕರೆಯನ್ನು ನೀರಾವರಿ ಮಾಡಿಕೊಂಡಿದ್ದಾರಾ? ಕೇಳಿ, ಇಲ್ಲ ತಾನೇ, ಅವರ ಸ್ವಂತ ಜಮೀನನ್ನೇ ನೀರಾವರಿ ಮಾಡಿಕೊಳ್ಳದವರು ಜನರ ಭೂಮಿ ಯಾವಾಗ ನೀರಾವರಿ ಮಾಡುತ್ತಾರೆ? ತಳಕಲ್ಲಿನಲ್ಲಿ ನಮ್ಮಜ್ಜ ಗಳಿಸಿದ ನನ್ನ ಆಸ್ತಿಗೆ ನೀರು ಬರಲೆಂದು ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ತಳಕಲ್, ಭಾನಾಪುರ ಜಮೀನುಗಳನ್ನು ಸೇರಿಸಿದ್ದೇನೆ ಎಂದರು.
ಎಂಎಲ್ಎ ಆದ ಏಳು ತಿಂಗಳಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕಳೆದ ಸಲ ಸೋತಿದ್ದೆ. ಕ್ಷೇತ್ರದಲ್ಲಿ ಕಸ ಬಿದ್ದಿತ್ತು. ಈಗ ಕಸ ತೆಗೆದು ಸ್ವಚ್ಛ ಮಾಡಿ ಅಭಿವೃದ್ಧಿ ಪರ್ವ ಆರಂಭಿಸಿದ್ದೇನೆ. ಕ್ಷೇತ್ರಕ್ಕೆ ಆರು ಹೈಸ್ಕೂಲ್, ಮೂರು ಪಿಯು ಕಾಲೇಜು ಆರಂಭಿಸಿದ್ದೇನೆ. ಇನ್ನು ಮೂರು ಮೊರಾರ್ಜಿ ವಸತಿ ಶಾಲೆ ಮಂಜೂರು ಮಾಡಿಸಿದ್ದೇನೆ.
ಮಂಗಳೂರಿಗೆ ₹8 ಕೋಟಿ ವೆಚ್ಚದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭವನ, ಬೈಪಾಸ್ ರಸ್ತೆ, ರಸ್ತೆ ಅಗಲೀಕರಣ ಮಂಜೂರು ಮಾಡಿಸಿದ್ದೇನೆ. 200 ವಿದ್ಯಾರ್ಥಿಗಳ ಹಾಸ್ಟೆಲ್, ದೊಡ್ಡ ಬಸ್ ಸ್ಟ್ಯಾಂಡ್ ಮಂಜೂರು ಮಾಡಿಸುತ್ತೇನೆ ಎಂದರು.
ಕುಕನೂರು ತಹಸೀಲ್ದಾರ್ ಎಚ್. ಪ್ರಾಣೇಶ, ಇಒ ಸಂತೋಷ ಬಿರಾದಾರ, ಯಲಬುರ್ಗಾ ತಹಸೀಲ್ದಾರ್ ಬಸವರಾಜ, ಮಂಗಳೂರು ಗ್ರಾಪಂ ಅಧ್ಯಕ್ಷ ಸಕ್ರಪ್ಪ ಚಿನ್ನೂರು, ಕುದರಿಮೋತಿ ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂ, ಸಿಪಿಐ ಮಹಾಂತೇಶ, ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಕೆರಿಬಸಪ್ಪ ನಿಡಗುಂದಿ, ಅಶೋಕ ತೋಟದ, ಹನುಮಂತಗೌಡ ಚಂಡೂರು, ಈರಪ್ಪ ಹಳ್ಳಿಕೇರಿ, ಸಕ್ರಪ್ಪ ಚೌಡ್ಕಿ, ಈಶಪ್ಪ ಶಿರೂರು, ಈರಪ್ಪಕುಡಗುಂಟಿ, ಹನುಮೇಶ ಕಡೆಮನಿ, ಪ್ರಭುಗೌಡ ಕಿರ್ತಿಗೌಡ ಇದ್ದರು.